ನಾಗಮಂಗಲ: ‘ಹಿಂದೆ ರಾಗಿ ಖರೀದಿಗೆ ನೋಂದಣಿ ತಡವಾಗುತ್ತಿದ್ದ ಹಿನ್ನೆಲೆಯಲ್ಲಿ ರೈತರಿಗೆ ಸಮಸ್ಯೆಯಾಗುತ್ತಿತ್ತು. ಆದರೆ ನಮ್ಮ ಸರ್ಕಾರ ಸೆಪ್ಟೆಂಬರ್‌ನಿಂದಲೇ ರಾಗಿ ಖರೀದಿಗೆ ನೋಂದಣಿ ಪ್ರಾರಂಭಿಸುತ್ತಿದ್ದು, ಡಿಸೆಂಬರ್‌ವರೆಗೂ ನೋಂದಣಿಗೆ ಅವಕಾಶ ನೀಡಲಾಗಿದೆ. ರೈತರು ಮಧ್ಯವರ್ತಿಗಳ ಹಾವಳಿಗೆ ಬಲಿಯಾಗದೇ ನೇರವಾಗಿ ಮಾರಾಟ ಮಾಡುವ ಮೂಲಕ ಸದುಪಯೋಗಪಡಿಸಿಕೊಳ್ಳಿ’ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ತಾಲ್ಲೂಕಿನ ಚೌಡೇನಹಳ್ಳಿ ಗ್ರಾಮದ ಬಳಿ ಇರುವ ಎಪಿಎಂಸಿ ಆವರಣದಲ್ಲಿ ಬಿಎಸ್ಎಫ್ ಫೌಂಡೇಷನ್, ಭೂಸಿರಿ ರೈತ ಉತ್ಪಾದಕ ಕಂಪನಿ, ಕಂದಾಯ ಇಲಾಖೆ, ಕೃಷಿ ಇಲಾಖೆ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ವತಿಯಿಂದ ಶನಿವಾರ ಆಯೋಜಿಸಿದ್ದ ಬಿತ್ತನೆ ರಾಗಿ ವಿತರಣೆ, ರೈತರತ್ನ ಪ್ರಶಸ್ತಿ ಪ್ರದಾನ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ರೈತರು ಮಾರುವ ರಾಗಿಗೆ ಪ್ರತಿ ಕ್ವಿಂಟಲ್‌ಗೆ ₹4886 ನೀಡಿ ಖರೀದಿ ಮಾಡಲು ತೀರ್ಮಾನ ಮಾಡಿದ್ದೇವೆ. ಕಳೆದ ಬಾರಿಗಿಂತಲೂ ಈ ಬಾರಿ ₹689 ಹೆಚ್ಚು ಮಾಡಿದ್ದೇವೆ. ಜೊತೆಗೆ 3 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿಗೂ ನಿರ್ಧರಿಸಲಾಗಿದೆ. ಇದು ಸಹ ಸೆಪ್ಟೆಂಬರ್ ನಿಂದಲೇ ನೋಂದಣಿ ಶುರುವಾಗುತ್ತದೆ. ಇದೇ ಮೊದಲ ಬಾರಿಗೆ ನವಣೆ, ಸಾಮೆ, ಹಾರಕ ಮೊದಲಾದ ಸಿರಿಧಾನ್ಯಗಳ ಖರೀದಿಗೂ ನಿರ್ಧಾರ ಮಾಡಲಾಗಿದೆ. ₹4,886ರ ಜೊತೆಗೆ ಸರ್ಕಾರದಿಂದ ₹114 ಸೇರಿ ಪ್ರತಿ ಕ್ವಿಂಟಲ್ ಗೆ ₹5000 ನೀಡಿ ಖರೀದಿಸಲಾಗುವುದು. ಒಟ್ಟಾರೆ 7 ಲಕ್ಷಕ್ಕೂ ಹೆಚ್ಚು ರೈತರಿಂದ ಸುಮಾರು 15 ಲಕ್ಷ ಮೆಟ್ರಿಕ್ ಟನ್ ಉತ್ಪನ್ನಗಳನ್ನು ಸುಮಾರು ₹ 8 ಸಾವಿರ ಕೋಟಿ ವೆಚ್ಚದಲ್ಲಿ ಖರೀದಿಸುವ ಮೂಲಕ ನಮ್ಮ ಸರ್ಕಾರ ರೈತರಿಗೆ ಅನುಕೂಲ ಮಾಡುತ್ತಿದೆ’ ಎಂದರು.
ತಾಲ್ಲೂಕಿನ ಪ್ರಗತಿಪರ ರೈತರಾದ ಆನಂದ್, ರಶ್ಮಿ ಅವರಿಗೆ ರೈತರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಎಸ್.ಎಸ್.ಎಲ್.ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ತಾಲ್ಲೂಕಿನ ರೈತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ನಂತರ ರೈತ ಉತ್ಪಾದಕ ಸಂಸ್ಥೆಯ ಸದಸ್ಯರಾಗಿರುವ ರೈತರಿಗೆ ಬಿತ್ತನೆ ರಾಗಿಯನ್ನು ವಿತರಿಸಲಾಯಿತು. ಚಾಮನಕೊಪ್ಪಲು ಗೋವಿಂದರಾಜು ತಂಡದಿಂದ ರೈತಗೀತೆ ಸೇರಿದಂತೆ ಜಾನಪದ ಗೀತೆಗಳ ಗಾಯನ ನಡೆಯಿತು.
ಪುರಸಭೆ ಉಪಾಧ್ಯಕ್ಷೆ ವಸಂತಲಕ್ಷ್ಮೀ ಅಶೋಕ್, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಕನ್ನಾಘಟ್ಟ ವೆಂಕಟೇಶ್, ಮನ್ಮುಲ್ ಅಧ್ಯಕ್ಷ ಶಿವಪ್ಪ, ನಿರ್ದೇಶಕ ಲಕ್ಷೀನಾರಾಯಣ್, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಸಮಿತಿಯ ಅಧ್ಯಕ್ಷ ಮೂಡ್ಲಿಗೌಡ,ಜಂಟಿ ಕೃಷಿ ನಿರ್ದೇಶಕ ಅಶೋಕ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಹರೀಶ್, ಭೂ ಸಿರಿ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ವೆಂಕಟೇಶ್ ಸೇರಿದಂತೆ ರೈತರು ಇದ್ದರು.
ವಿವಿಧ ಯೋಜನೆಗಳಿಗೆ ಸರ್ಕಾರದಿಂದ ಸಬ್ಸಿಡಿ
ರಾಗಿ ಖರೀದಿಯ ಬಾಕಿಯಿದ್ದ ₹700 ಕೋಟಿ ಹಣವನ್ನು ಸಂಪೂರ್ಣವಾಗಿ ಬಿಡುಗಡೆಯನ್ನು ಮಾಡಿದ್ದೇವೆ. ಇನ್ನೊಂದೆರಡು ದಿನಗಳಲ್ಲಿ ರಾಗಿ ಮಾರಾಟ ಮಾಡಿದ್ದ ರೈತರ ಖಾತೆಗೆ ಹಣ ಬರುತ್ತದೆ. ಬಿತ್ತನೆ ರಾಗಿ ವಿತರಣೆಯನ್ನು ಸರ್ಕಾರ ಸಬ್ಸಿಡಿ ದರದಲ್ಲಿ ನೀಡುತ್ತಾ ಬಂದಿದೆ. ಜೊತೆಗೆ ರೈತರು ಸಹ ಬೆಳೆದ ಬೆಳೆಯನ್ನು ಉಳಿಸಿ ಬಿತ್ತನೆ ಮಾಡುವವರೂ ಇದ್ದಾರೆ. ರೈತರು ಆತಂಕ ಪಡುವ ಅವಶ್ಯಕತೆಯಿಲ್ಲ. ಕೃಷಿ ಯಂತ್ರೋಪಕರಣ ಸೇರಿದಂತೆ ವಿವಿಧ ಯೋಜನೆಗಳಿಗೆ ಸಬ್ಸಿಡಿ ನೀಡುತ್ತಿದ್ದೇವೆ. ಕಬ್ಬು ಕಟಾವು ಮಾಡುವ ಯಂತ್ರಕ್ಕೆ ನಮ್ಮ ಸರ್ಕಾರ ಶೇ 40 50 ರಷ್ಟು ಸಬ್ಸಿಡಿ ನೀಡುತ್ತಿದೆ ಎಂದು ಎನ್.ಚಲುವರಾಯಸ್ವಾಮಿ ಹೇಳಿದರು.
ತುರುವೇಕೆರೆಯಿಂದ ದೇವಲಾಪುರದ ಕೊನೆಯ ಭಾಗದ ವರೆಗೆ ₹650 ಕೋಟಿ ಮೊತ್ತದಲ್ಲಿ ಆಧುನೀಕರಣದ ಕಾಮಗಾರಿಗೆ ಅನುಮೋದನೆಯಾಗಿದ್ದು ಶೀಘ್ರದಲ್ಲೇ ಚಾಲನೆ ದೊರೆಯಲಿದೆ.–ಎನ್.ಚಲುವರಾಯಸ್ವಾಮಿ, ಕೃಷಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.