ADVERTISEMENT

ರಸ್ತೆ ಕಾಮಗಾರಿ ವಿಳಂಬ; ಅಪಘಾತ ಹೆಚ್ಚಳ: ಭಯದಲ್ಲಿ ವಾಹನ ಸವಾರರು

ಗುತ್ತಿಗೆದಾರರ ವಿರುದ್ಧ ಜನಾಕ್ರೋಶ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2025, 8:23 IST
Last Updated 10 ಏಪ್ರಿಲ್ 2025, 8:23 IST
ಸಂತೇಬಾಚಹಳ್ಳಿ ಹೋಬಳಿಯ ಹಲಸನಹಳ್ಳಿ ಗೇಟ್ ಬಳಿ ಕಾಮಗಾರಿ ಅರ್ಧಕ್ಕೆ ನಿಂತಿದ್ದು ವಾಹನ ಸವಾರರು ಸಾಗಲು ಹರಸಾಹಸ ಪಡುತ್ತಿರುವುದು
ಸಂತೇಬಾಚಹಳ್ಳಿ ಹೋಬಳಿಯ ಹಲಸನಹಳ್ಳಿ ಗೇಟ್ ಬಳಿ ಕಾಮಗಾರಿ ಅರ್ಧಕ್ಕೆ ನಿಂತಿದ್ದು ವಾಹನ ಸವಾರರು ಸಾಗಲು ಹರಸಾಹಸ ಪಡುತ್ತಿರುವುದು   

ಸಂತೇಬಾಚಹಳ್ಳಿ: ದುರಸ್ತಿ ಹೆಸರಿನಲ್ಲಿ ರಸ್ತೆ ಕಿತ್ತು ವರ್ಷ ಕಳೆದಿದೆ. ಇದರಿಂದ ನಿತ್ಯ ವಾಹನ ಬಿದ್ದು, ಸವಾರರು  ಗಾಯಗೊಳ್ಳುತ್ತಿದ್ದಾರೆ. ಇಷ್ಟಾದರೂ ಇತ್ತ ತಿರುಗಿ ನೋಡದ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ವಿವಿಧ ಗ್ರಾಮಗಳ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ.

ಕೆ.ಆರ್‌.ಪೇಟೆ ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಹರಿಯಾಲದಮ್ಮ ದೇವಸ್ಥಾನದಿಂದ 20 ಕಿ.ಮೀ. ದೂರವಿರುವ ಸಂತೇಬಾಚಹಳ್ಳಿಗೆ ರಸ್ತೆ ಅಧ್ವಾನವಾಗಿ ಹೋಗಿದೆ. ಹಲಸನಹಳ್ಳಿ ಗೇಟ್ ಬಳಿ 300 ಮೀಟರ್ ಹಾಗೂ ದೊಡ್ಡಸೋಮನಹಳ್ಳಿ ಗೇಟ್ 350 ಮೀಟರ್ ಬಳಿ ರಸ್ತೆಗಳು ಗುಂಡಿ ಬಿದ್ದು ವಾಹನ ಸವಾರರು ಪರದಾಡುತ್ತಿದ್ದಾರೆ.

ಕೆ.ಸಿ.ನಾರಾಯಣಗೌಡ ಸಚಿವರಾಗಿದ್ದಾಗ ಜನರು ಆಕ್ರೋಶ ಹೊರಹಾಕಿದ್ದರು. ಕೂಡಲೇ ಎಚ್ಚೆತ್ತ ನಾರಾಯಣಗೌಡರು  ಟೆಂಡರ್ ಕರೆದು ಕಾಮಗಾರಿಗೆ ಸೂಚನೆ ನೀಡಿದ್ದರು. ಆದರೆ, ಚುನಾವಣೆ ನೆಪವೊಡ್ಡಿದ್ದ ಗುತ್ತಿಗೆದಾರ ದುರಸ್ತಿಗೆಂದು ರಸ್ತೆ ಕಿತ್ತು ಹಾಕಿ ಸುಮ್ಮನಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ADVERTISEMENT

ರಸ್ತೆ ಕಿತ್ತಿರುವ ಪರಿಣಾಮ ವಾಹನ ಮುಂದೆ ಸಾಗಲು ಹರಸಾಹಸ ಪಡುತ್ತಿದ್ದಾರೆ. ಕಲ್ಲು ರಸ್ತೆಯ ಮಧ್ಯದಲ್ಲೇ ಅನಿವಾರ್ಯವಾಗಿ ಸಾಗುವ ಸ್ಥಿತಿಯಿದ್ದು, ದ್ವಿಚಕ್ರ ವಾಹನಗಳು ನಿತ್ಯ ಬೀಳುತ್ತವೇ ಇವೆ. ಸವಾರರಷ್ಟೇ ಅಲ್ಲ ಹಿಂಬದಿ ಸವಾರರು ಅದರಲ್ಲೂ ಮಹಿಳೆಯರು, ಮಕ್ಕಳು ಜೀವ ಕೈಯಲ್ಲಿ ಹಿಡಿದು ಕುಳಿತ್ತಿರುತ್ತಾರೆ. ಹದಗೆಟ್ಟ ರಸ್ತೆ ದಾಟಿದರೆ ಸಾಕು ಎನ್ನುವಷ್ಟು ಕಂಗೆಟ್ಟು ಹೋಗಿರುತ್ತಾರೆ ಸವಾರರು.

ಪಕ್ಕದಲ್ಲೇ ಅರಣ್ಯ ಪ್ರದೇಶವಿದ್ದು ಅಪಘಾತವಾದಾಗ ಸಹಾಯಕ್ಕೆ ಕೂಗಿದರೂ ಒಬ್ಬರು ಇರುವುದಿಲ್ಲ. ರಾತ್ರಿ ವೇಳೆಯಲ್ಲಿ ದರೋಡೆ ನಡೆಯುತ್ತಿರುವುದರಿಂದ ಜನರು ಸಂಜೆ ಆದರೆ ಸಾಕು ಈ ರಸ್ತೆಯಲ್ಲಿ ಸಾಗಲು ಹೆದರಿಕೆ ಆಗುತ್ತಿದೆ ಎನ್ನುತ್ತಾರೆ ವಾಹನ ಸವಾರರು.

ಸಂತೇಬಾಚಹಳ್ಳಿ ಹಾಗೂ ಕಿಕ್ಕೇರಿ ಸೇರಿ ಶ್ರವಣಬೆಳಗೊಳ ರಾಜ್ಯ ಹೆದ್ದಾರಿಗೆ ಮಾರ್ಗ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದೆ. ಹರಿಯಲದಮ್ಮ ದೇವಸ್ಥಾನದಿಂದ ಆಚಮನಹಳ್ಳಿ, ಹಳೇಹತ್ತಿಗುಪ್ಪೆ, ದೊಡ್ಡಸೋಮನಹಳ್ಳಿ, ದೊಡ್ಡಹಾರನಹಳ್ಳಿ, ಚಿಕ್ಕಸೋಮನಹಳ್ಳಿ, ಆದಿಹಳ್ಳಿ, ಗೊರವಿ ಸೇರಿ ವಿವಿಧ ಹಳ್ಳಿಗಳ ರೈತರು ಇದೆ ರಸ್ತೆಯಲ್ಲಿ ಹೋಬಳಿ ಕೇಂದ್ರದ ನೆಮ್ಮದಿ ಕೇಂದ್ರ, ಮಾರುಕಟ್ಟೆ, ಬ್ಯಾಂಕ್ ಸೇರಿ ವಿವಿಧ ವ್ಯವಹಾರಕ್ಕೆ ತೆರಳಲು ಮುಖ್ಯವಾದ ರಸ್ತೆ ಇದಾಗಿದೆ. ಆದ್ದರಿಂದ ದುರಸ್ತಿ ಆದಷ್ಟು ಬೇಗವಾಗಲಿ ಎನ್ನುತ್ತಾರೆ ವಾಹನ ಸವಾರ ಕೆ.ಪಿ.ಪ್ರಭಾಕರ್ .

‘ಗುಂಡಿಬಿದ್ದ ರಸ್ತೆಯತ್ತ ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳು ತಿರುಗಿ ನೋಡುತ್ತಿಲ್ಲ, ಶಾಸಕ ಎಚ್.ಟಿ.ಮಂಜು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪೂರ್ಣಗೊಳಿಸುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಸುಮಾರು ₹ 1 ಕೋಟಿ ವೆಚ್ಚದ ಕಾಮಗಾರಿ ಇದಾಗಿದ್ದು ಹಲಸನಹಳ್ಳಿ ಗೇಟ್ ಬಳಿ ರಸ್ತೆ  ಹಾಗೂ ದೊಡ್ಡಸೋಮನಹಳ್ಳಿ ಗೇಟ್ ಬಳಿಯೂ ರಸ್ತೆ  ಕಿತ್ತು ಹಾಕಿದ್ದು ಆರು ತಿಂಗಳಾದರೂ ಗುತ್ತಿಗೆದಾರರು ಕೆಲಸ ಆರಂಭಿಸಿಲ್ಲ. ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ದೊಡ್ಡಸೋಮನಹಳ್ಳಿ ಮೊಗಣ್ಣ, ಸತೀಶ್‌ ಆರೋಪಿಸುತ್ತಾರೆ.

‘ರಸ್ತೆ ದುರಸ್ತಿ ಮಾಡಿಸುವಂತೆ ಸಾರ್ವಜನಿಕರು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ದೂರವಾಣಿ ಮೂಲಕ ಹಾಗೂ ಕಚೇರಿಗೆ ಭೇಟಿ ನೀಡಿ ಮನವಿ ಮಾಡಿದರು ನಿರ್ಲಕ್ಷ್ಯ ಮಾಡಲಾಗಿದೆ. ಈಚೆಗೆ ಅಪಘಾತ ಸಂಭವಿಸಿ ಗಾಯಗೊಂಡಿರುವ ವ್ಯಕ್ತಿಗಳು ಲೋಕೋಪಯೋಗಿ ಇಲಾಖೆ ವಿರುದ್ಧ ದೂರು ನೀಡುತ್ತೇವೆ’ ಎಂದು ಅಪಘಾತಕ್ಕೊಳಗಾದ ಹಲಸನಹಳ್ಳಿ ಹರೀಶ್‌ ಹೇಳುತ್ತಾರೆ.

ದೊಡ್ಡಸೋಮನಹಳ್ಳಿ ಗೇಟ್ ಬಳಿ ಗುಂಡಿಬಿದ್ದಿರುವ ರಸ್ತೆಯಲ್ಲಿ ಸಂಚರಿಸುತ್ತಿರುವ ವಾಹನ ಸವಾರರು

ಸರ್ಕಾರ ಅನುದಾನ ನೀಡುತ್ತಿಲ್ಲ

ತಾಲ್ಲೂಕಿನ ಅಭಿವೃದ್ಧಿಗೆ ಸರ್ಕಾರ ಹಣ ನೀಡುತ್ತಿಲ್ಲ. ಅರ್ಧಕ್ಕೆ ನಿಂತಿರುವ ರಸ್ತೆ ಕಾಮಗಾರಿ ಪೂರ್ಣ ಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯಲಾದಹಳ್ಳಿ ದೊಡ್ಡಹಾರನಹಳ್ಳಿ ಗೇಟ್ ಬಳಿ ರಸ್ತೆ ಹೊಸದಾಗಿ ಟೆಂಡರ್ ಮಾಡಲಾಗಿದ್ದು ಕಾಮಗಾರಿ ಶೀಘ್ರದಲ್ಲಿ ಮಾಡಲು ಸೂಚನೆ ನೀಡಿದ್ದೇನೆ. ಎಚ್.ಟಿ.ಮಂಜು ಶಾಸಕ. ಶೀಘ್ರವೇ ಕಾಮಗಾರಿ ಆರಂಭ ಹಲಸನಹಳ್ಳಿ ಹಾಗೂ ದೊಡ್ಡಸೋಮನಹಳ್ಳಿ ಗೇಟ್ ಬಳಿ ಜಿಲ್ಲಾ ಮುಖ್ಯರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿದೆ. ಗುತ್ತಿಗೆದಾರರ ಬದಲಾವಣೆ ಮಾಡಿ ಬೇರೆಯವರಿಗೆ ವಹಿಸಲಾಗಿದೆ. ಶೀಘ್ರದಲ್ಲೇ ಕಾಮಗಾರಿ ಆರಂಭಿಸಿ ವಾಹನ ಸವಾರರ ಸಮಸ್ಯೆ ಪರಿಹರಿಸುತ್ತೇವೆ. ಮಂಜುನಾಥ್ ಎಇಇ ಲೋಕೋಪಯೋಗಿ ಇಲಾಖೆ (ಕೆ.ಆರ್.ಪೇಟೆ ವಿಭಾಗ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.