ADVERTISEMENT

ರಾಮನಹಳ್ಳಿ ರಸ್ತೆ: ಗುಂಡಿಗಳದ್ದೇ ಕಾರುಬಾರು

ವಾಹನ ಸವಾರರಿಗೆ ತೀವ್ರ ಸಮಸ್ಯೆ; ಡಾಂಬರು ಹಾಕಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಮೇ 2019, 10:22 IST
Last Updated 20 ಮೇ 2019, 10:22 IST
ಕಿಕ್ಕೇರಿ ಹೋಬಳಿಯ ರಾಮನಹಳ್ಳಿ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು, ಬೈಕ್‌ ಸವಾರರಿಗೆ ತೊಂದರೆ ಆಗಿದೆ
ಕಿಕ್ಕೇರಿ ಹೋಬಳಿಯ ರಾಮನಹಳ್ಳಿ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು, ಬೈಕ್‌ ಸವಾರರಿಗೆ ತೊಂದರೆ ಆಗಿದೆ   

ಕಿಕ್ಕೇರಿ: ಹೋಬಳಿಯ ರಾಮನಹಳ್ಳಿ ರಸ್ತೆಗೆ ಡಾಂಬರು ಹಾಕಿಲ್ಲ. ಕಚ್ಚಾ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು, ವಾಹನ ಸವಾರರಿಗೆ ತೀವ್ರ ಸಮಸ್ಯೆಯಾಗಿದೆ.

ಈ ರಸ್ತೆ ಕೋರಮಂಡಲ್ ಸಕ್ಕರೆ ಕಾರ್ಖಾನೆಗೆ ಸಂಪರ್ಕ ಕಲ್ಪಿಸುತ್ತದೆ. ಐಯ್ಯನ ಕೊಪ್ಪಲು, ದೊರೇನಹಳ್ಳಿ, ರಾಮನಹಳ್ಳಿ, ಚೌಡೇನಹಳ್ಳಿ, ಬೀಚೇನ ಹಳ್ಳಿ, ಮಣಿಕನಹಳ್ಳಿ, ಕಾರಿಗಾನಹಳ್ಳಿ, ಮಾಕವಳ್ಳಿ ಮತ್ತಿತರ ಗ್ರಾಮಗಳಿಗೆ ಸಾಗಲು ಹತ್ತಿರದ ರಸ್ತೆಯಾಗಿದೆ.

ಕಿಕ್ಕೇರಿಯಿಂದ ಸಿದ್ದಾಪುರದವರೆಗೆ ಮಾತ್ರ ಡಾಂಬರು ರಸ್ತೆ ಇದೆ. ನಂತರ ಮಣ್ಣಿನ ರಸ್ತೆ ಇದ್ದು, ರಸ್ತೆ ತುಂಬೆಲ್ಲಾ ಗುಂಡಿಗಳು ಬಿದ್ದಿವೆ. ರಾಮನಹಳ್ಳಿ ಗ್ರಾಮದ ಜನರು ಹೋಬಳಿ ಕೇಂದ್ರಕ್ಕೆ ಇದೇ ರಸ್ತೆಯಲ್ಲೇ ಹೋಗಬೇಕು. ರೈತಾಪಿ ಜನರು ರಸ್ತೆಯಲ್ಲಿ ನಿತ್ಯವೂ ಓಡಾಡಲು ಪರಿತಪಿಸುವಂತಾಗಿದೆ. ಎತ್ತಿನಗಾಡಿಯಲ್ಲಿ ಗೊಬ್ಬರ, ನೇಗಿಲು ಮತ್ತಿತರ ವಸ್ತುಗಳನ್ನು ಸಾಗಿಸಲು ರೈತರು ಕಷ್ಟಪಡುತ್ತಾರೆ.

ADVERTISEMENT

ಶಾಲಾ– ಕಾಲೇಜು ಮಕ್ಕಳು ಈ ರಸ್ತೆಯಲ್ಲಿ ಓಡಾಡುತ್ತಾರೆ. ರಾತ್ರಿ ವೇಳೆ ಪ್ರಾಣವನ್ನು ಕೈಯಲ್ಲಿ ಹಿಡಿದು ಹೋಗಬೇಕಾದ ಪರಿಸ್ಥಿತಿ ಇದೆ. ರೈತರು ಗುಂಡಿಗಳಿಗೆ ಮಣ್ಣು ಹಾಕಿ ಮುಚ್ಚುತ್ತಿದ್ದಾರೆ. ಆದರೆ, ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ಇತ್ತ ಗಮನ ಹರಿಸುತ್ತಿಲ್ಲ.

ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚಬೇಕು. ಕೂಡಲೇ ಡಾಂಬರು ಹಾಕಬೇಕು ಎಂದು ಗ್ರಾಮಸ್ಥ ಡೇರಿ ಕುಮಾರ್ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.