ADVERTISEMENT

ಪಾಂಡವಪುರ | ಸಂವಾದ: ಗ್ರಾಮ ಸ್ವಾವಲಂಬಿಯಾದರೆ ಪ್ರಗತಿ ಎಂದ ದರ್ಶನ್‌ ಪುಟ್ಟಣ್ಣಯ್ಯ

‘ಸ್ವರಾಜ್ ಉತ್ಸವ’ ಅಂಗವಾಗಿ ವಿದ್ಯಾರ್ಥಿಗಳೊಂದಿಗೆ ಸಂವಾದ: ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 5:14 IST
Last Updated 13 ಸೆಪ್ಟೆಂಬರ್ 2025, 5:14 IST
ಪಾಂಡವಪುರ ಪಟ್ಟಣದ ವಿಜಯ ವಿದ್ಯಾ ಪ್ರಚಾರ ಸಂಘದ ಎಂ.ಎಸ್. ಕೃಷ್ಣಕುಮಾರ್ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿದರು
ಪಾಂಡವಪುರ ಪಟ್ಟಣದ ವಿಜಯ ವಿದ್ಯಾ ಪ್ರಚಾರ ಸಂಘದ ಎಂ.ಎಸ್. ಕೃಷ್ಣಕುಮಾರ್ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿದರು   

ಪಾಂಡವಪುರ: ‘ಸೂಕ್ತ ವಿದ್ಯಾರ್ಹತೆ ಇದ್ದರೂ ಕೆಲಸ ಸಿಗುತ್ತಿಲ್ಲ, ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಯಾಗುತ್ತಿಲ್ಲ, ಮಾರುಕಟ್ಟೆ ಸೌಲಭ್ಯವಿಲ್ಲ, ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ’ ಎಂಬುದು ಸೇರಿದಂತೆ ಹತ್ತು ಹಲವು ಪ್ರಶ್ನೆಗಳನ್ನು ಕೇಳಿದ ವಿದ್ಯಾರ್ಥಿಗಳು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರೊಂದಿಗೆ ಶುಕ್ರವಾರ ಸಂವಾದ ನಡೆಸಿದರು.

ಪಟ್ಟಣದ ವಿಜಯ ಪ್ರಚಾರ ಸಂಘದ ಕಾಲೇಜಿನ ಡಾ.ಎಂ.ಎಸ್. ಕೃಷ್ಣಕುಮಾರ್ ಸಭಾಂಗಣದಲ್ಲಿ ‘ಸ್ವರಾಜ್ ಉತ್ಸವ’ದ ಅಂಗವಾಗಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ, ದೇಶವನ್ನು ಅಭಿವೃದ್ಧಿಪಡಿಸಬೇಕಾದರೆ ಮೊದಲು ಗ್ರಾಮಗಳನ್ನು ಸ್ವಾವಲಂಬಿಗಳನ್ನಾಗಿಸಬೇಕು. ಆಗ ಮಾತ್ರ ದೇಶದ ಉದ್ಧಾರ ಸಾಧ್ಯ ಎಂದರು. 

ದೇಶದಲ್ಲಿ ಅತಿ ಹೆಚ್ಚು ಉದ್ಯೋಗ ಸೃಷ್ಟಿಯಾಗಿರುವುದು ಗ್ರಾಮೀಣ ಪ್ರದೇಶಗಳಲ್ಲಿನ ಸಣ್ಣ ಕೈಗಾರಿಕೆಗಳಲ್ಲಿ. ಶೇ 60ರಷ್ಟು ಉದ್ಯೋಗ ಸೃಷ್ಟಿಯಾಗಿವೆ. ಆದರೆ ಐಟಿ–ಬಿಟಿ ಕ್ಷೇತ್ರಗಳಲ್ಲಿ ಶೇ 15–20ರಷ್ಟು ಮಾತ್ರ ಸೃಷ್ಟಿಯಾಗಿವೆ. ಐಟಿ–ಬಿಟಿ ಕ್ಷೇತ್ರದ ಉದ್ಯೋಗ ಸೃಷ್ಟಿಯ ಬಗ್ಗೆ ಇರುವ ತಪ್ಪು ಕಲ್ಪನೆಯನ್ನು ಬಿಡಬೇಕು. ಆರ್ಥಿಕ ಶಕ್ತಿ ತುಂಬುತ್ತಿರುವುದೇ ಕೃಷಿಯಿಂದ ಎಂಬುದನ್ನು ಅರಿಯಬೇಕಿದೆ ಎಂದರು.

ADVERTISEMENT

‘ರೈತರು ಬೆಳೆದ ಬೆಳೆಗೆ ಸರ್ಕಾರದಿಂದ ಬೆಂಬಲ ಬೆಲೆ ದೊರೆಯುತ್ತಿಲ್ಲ. ಮಾರುಕಟ್ಟೆಗೆ ತೆಗೆದುಕೊಂಡು ಹೋಗದೆ ರಸ್ತೆಯಲ್ಲಿಯೇ ಎಸೆಯುವಂತಾಗಿದೆ. ರೈತನು ಸಾಲದ ಒತ್ತಡದಿಂದ ಆತ್ಮಹತ್ಯೆಗೆ ಒಳಗಾಗುತ್ತಿದ್ದಾನೆ. ಸರ್ಕಾರ ಏಕೆ ಕಣ್ಣು ಮುಚ್ಚಿದೆ?’ ಎಂದು ವಿದ್ಯಾರ್ಥಿ ಕುಸುಮಾ ಭಾವುಕಳಾದಳು.

‘ರೈತ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ’ ಎಂದು ಉಪನ್ಯಾಕಿಯೊಬ್ಬರು ಕಳವಳ ವ್ಯಕ್ತಪಡಿಸಿದರು.

ಸಂವಾದದಲ್ಲಿ ವಿದ್ಯಾ ಪ್ರಚಾರ ಸಂಘದ ಗೌರವ ಕಾರ್ಯದರ್ಶಿ ಕೆ.ವಿ. ಬಸವರಾಜು, ನಿರ್ದೇಶಕ ರಾಮೇಗೌಡ, ರೈತ ಸಂಘದ ವರಿಷ್ಠೆ ಸುನೀತಾ ಪುಟ್ಟಣ್ಣಯ್ಯ, ವಿವಿಧ ಕಾಲೇಜಿನ ವಿದ್ಯಾ‌ರ್ಥಿಗಳು, ಉಪನ್ಯಾಸಕರು ಭಾಗವಹಿಸಿದ್ದರು.

ಸಣ್ಣ ಕೈಗಾರಿಕೆಗಳಲ್ಲಿ ಹೆಚ್ಚು ಉದ್ಯೋಗ ಸೃಷ್ಟಿ  ದೇಶದ ಆರ್ಥಿಕ ಬೆನ್ನೆಲುಬು ಕೃಷಿ  ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಅಗತ್ಯ

‘ಮಧ್ಯವರ್ತಿಗಳ ಹಾವಳಿ ತಡೆಯಬೇಕಿದೆ’ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ ‘ರೈತರ ಮಾರುಕಟ್ಟ ಅವಲಂಬನೆ ಹಾಗೂ ಮಧ್ಯವರ್ತಿಗಳ ಹಾವಳಿ ತಡೆಯಬೇಕಿದೆ. ಸರ್ಕಾರಗಳು ರೈತನ ಬೆಳೆಗೆ ಬೆಂಬಲ ಬೆಲೆ ನೀಡಬೇಕಿದೆ. ರೈತರು ಹೋರಾಟದಿಂದ ಮಾತ್ರ ತನ್ನ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದಾಗಿದೆ. ದೇವನಹಳ್ಳಿ ಭೂ ಹೋರಾಟ ಇದಕ್ಕೆ ಸಾಕ್ಷಿಯಾಗಿದೆ’ ಎಂದರು. ‘ನಗರಗಳಲ್ಲಿ ₹15ರಿಂದ 20ಸಾವಿರಗಳಿಗೆ ಸಂಬಳಕ್ಕೆ ಕೆಲಸ ಮಾಡುವವರಿಗೆ ಹೆಣ್ಣು ಕೊಡುತ್ತಾರೆ. ಸರ್ಕಾರಿ ಕೆಲಸ ಎನ್ನುವ ಮನೋಭಾವ ಹೋಗಬೇಕಿದೆ. ರೈತನ ಮಕ್ಕಳು ಸರ್ಕಾರಿ ಉದ್ಯೋಗಕ್ಕಾಗಿ ಕಾಯದೆ ಸ್ವಯಂ ಉದ್ಯೋಗದ ಸ್ವಾವಲಂಬನೆ ಜೀವನ ನಡೆಸಬೇಕು’ ಎಂದರು.

ನಗರದತ್ತ ವಲಸೆ ತಪ್ಪಿಸಬೇಕಿದೆ’ ಬದಲಾವಣೆ ನಿಂತ ನೀರಲ್ಲ ನಿರಂತರವಾಗಿರುತ್ತದೆ. ವರ್ತಮಾನದ ಸವಾಲುಗಳನ್ನು ಸ್ವೀಕರಿಸಿಕೊಂಡು ಸಾಮಾನ್ಯ ತಿಳಿವಳಿಕೆಯೊಂದಿಗೆ ನಮ್ಮ ಸುತ್ತಮುತ್ತಲಿಗೆ ಹೊಂದಿಕೊಂಡಂತೆ ಸಣ್ಣ ಸಣ್ಣ ಉದ್ಯೋಗಳನ್ನು ಸೃಷ್ಟಿಸಿಕೊಳ್ಳಬೇಕಿದೆ. ಓದಿ ಉದ್ಯೋಗ ಸಿಗದೆ ಹಳ್ಳಿಯ ಯುವಕರು ನಗರ ಪ್ರದೇಶಗಳ ಕಡೆ ವಲಸೆ ಹೋಗುವುದನ್ನು ನಿಲ್ಲಿಸಬೇಕಿದೆ ಎಂದು ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಹೇಳಿದರು.  ಪಂಚಾಯಿತಿ ಮಟ್ಟದಲ್ಲಿಯೇ ಸಣ್ಣ ಪ್ರಮಾಣದ ಮಾರುಕಟ್ಟೆ ಸೃಷ್ಟಿ ಮಾಡಿಕೊಂಡು ರೈತರ ಉತ್ಪನ್ನಗಳನ್ನು ಬಳಸಿಕೊಂಡು ಹೊಸ ಉತ್ಪನ್ನಗಳನ್ನು ತಯಾರು ಮಾಡುವ ವಿಧಾನ ಮತ್ತು ಕೌಶಲ ಬೆಳೆಸಿಕೊಳ್ಳಬೇಕಿದೆ. ಸ್ವಾಭಿಮಾನ ಮತ್ತು ಸ್ವಾವಲಂಬನೆ ಜೀವನವನ್ನು ಕಟ್ಟಿಕೊಳ್ಳಬೇಕೆ ಹೊರತು ಸರ್ಕಾರದ ಉದ್ಯೋಗಕ್ಕಾಗಿಯೇ ಕಾಯಬಾರದು ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.