ADVERTISEMENT

ದೇಶ ಒಗ್ಗೂಡಿಸಿದ ‘ಉಕ್ಕಿನ ಮನುಷ್ಯ’

‘ಏಕತಾ ಓಟ’ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 4:33 IST
Last Updated 1 ನವೆಂಬರ್ 2025, 4:33 IST
ಮಂಡ್ಯ ನಗರದಲ್ಲಿ ಪೊಲೀಸ್‌ ಇಲಾಖೆಯಿಂದ ನಡೆದ ‘ಏಕತಾ ಓಟ’ದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಹೆಚ್ಚುವರಿ ಎಸ್ಪಿಗಳಾದ ತಿಮ್ಮಯ್ಯ, ಗಂಗಾಧರಸ್ವಾಮಿ ಸೇರಿದಂತೆ ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು
ಮಂಡ್ಯ ನಗರದಲ್ಲಿ ಪೊಲೀಸ್‌ ಇಲಾಖೆಯಿಂದ ನಡೆದ ‘ಏಕತಾ ಓಟ’ದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಹೆಚ್ಚುವರಿ ಎಸ್ಪಿಗಳಾದ ತಿಮ್ಮಯ್ಯ, ಗಂಗಾಧರಸ್ವಾಮಿ ಸೇರಿದಂತೆ ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು   

ಮಂಡ್ಯ: ‘ದೇಶದಲ್ಲಿ ಒಂದೇ ರೀತಿಯ ಆಡಳಿತ ಇರಬೇಕೆಂದು ಎಲ್ಲರನ್ನೂ ಒಗ್ಗೂಡಿಸಿದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರನ್ನು ಸ್ಮರಿಸಬೇಕಿದೆ. ಹಾಗಾಗಿ ಏಕತಾ ಓಟ ಆಯೋಜಿಸಿ ಐಕ್ಯತೆ ನೆನಪು ಮಾಡಿಕೊಳ್ಳಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.

ನಗರದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಎದುರು ರಾಷ್ಟ್ರೀಯ ದಿನದ ಅಂಗವಾಗಿ ‘ಏಕತಾ ಓಟ’ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದರು. ಭಾರತದ ಮೊದಲ ಉಪ ಪ್ರಧಾನ ಮಂತ್ರಿ ಮತ್ತು ಭಾರತದ ಮೊದಲ ಗೃಹ ಸಚಿವರಾದರು. 565 ರಾಜಪ್ರಭುತ್ವದ ರಾಜ್ಯಗಳನ್ನು ಹೊಸದಾಗಿ ಸ್ವತಂತ್ರ ಭಾರತಕ್ಕೆ ಸಂಯೋಜಿಸುವಲ್ಲಿ ಸರ್ದಾರ್ ಪಟೇಲ್ ಅವರ ಕೊಡುಗೆ ಅವಿಸ್ಮರಣೀಯ. ಅವರು ಭಾರತದ ಉಕ್ಕಿನ ಮನುಷ್ಯ ಎಂದು ಜನಪ್ರಿಯರಾಗಿದ್ದಾರೆ ಎಂದು ಬಣ್ಣಿಸಿದರು. 

ADVERTISEMENT

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಸಂದರ್ಭದಲ್ಲಿ ಮೈಸೂರು ಪ್ರಾಂತ್ಯ, ಮದ್ರಾಸ್‌ ಪ್ರಾಂತ್ಯ ಎಂಬುದಾಗಿ ಹಲವು ಭಾಗಗಳಾಗಿ ರಾಜರ ಆಳ್ವಿಕೆ ಇತ್ತು. ಇದನ್ನು ಒಗ್ಗೂಡಿಸಲು ಬಹಳ ಕಷ್ಟಪಡಬೇಕಾಯಿತು. ಈ ಎಲ್ಲ ಸವಾಲುಗಳನ್ನು ಎದುರಿಸುವ ಮೂಲಕ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರು ದೇಶವನ್ನು ಒಗ್ಗೂಡಿಸಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ದೇಶದಲ್ಲಿ ಭದ್ರತೆ ಎನ್ನುವ ಮಾತು ಬಂದಾಗ ಆಂತರಿಕ ಭದ್ರತೆ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿದೆ. ಮಿಲಿಟರಿ ಪಡೆಗಳು ಸದಾ ಸನ್ನದ್ಧರಾಗಿರುತ್ತವೆ. ದೇಶದೊಳಗೆ ಇದ್ದುಕೊಂಡೇ ಭಯೋತ್ಪಾದನೆ ಚಟುವಟಿಕೆ ನಡೆಸಲಾಗುತ್ತಿದೆ. ಇದರ ವಿರುದ್ಧ ಎಲ್ಲರೂ ಹೋರಾಟ ಮಾಡುವುದು ಅಗತ್ಯ ಇದೆ. ನಮ್ಮ ಪೊಲೀಸ್‌ ಇಲಾಖೆಯು ಬಹಳ ಅಚ್ಚುಕಟ್ಟಾಗಿ ಕೆಲಸ ಮಾಡುತ್ತಿದೆ. ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದರು.

ಏಕತಾ ಓಟ ಹಮ್ಮಿಕೊಳ್ಳುವ ಮೂಲಕ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರಿಗೆ ಗೌರವ ನಿಟ್ಟಿನಲ್ಲಿ ಈ ದಿನ ಆಚರಿಸಲಾಗುತ್ತಿದೆ. ಎಲ್ಲರೂ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದ್ದೀರಾ, ನಿಮ್ಮ ಪ್ರೋತ್ಸಾಹವನ್ನು ನಾನು ಗೌರವಿಸುತ್ತೇನೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.