ಶ್ರೀರಂಗಪಟ್ಟಣ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾ ಅವರ ಆಪ್ತೆ ಶಶಿಕಲಾ ನಟರಾಜನ್ ಹಾಗೂ ಅವರ ಬೆಂಬಲಿಗರು ಶುಕ್ರವಾರ ಗಂಜಾಂ ನಿಮಿಷಾಂಬಾ ಸೇರಿದಂತೆ ಇತರ ದೇಗುಲಗಳಿಗೆ ಭೇಟಿ ನೀಡಿ ಹರಕೆ ತೀರಿಸಿದರು.
ನಿಮಿಷಾಂಬಾ ದೇವಿಗೆ ಸೀರೆ ಸಮರ್ಪಿಸಿದರು. ದೇವಾಲಯದ ಅರ್ಚಕರು ಶಶಿಕಲಾ ಹೆಸರಿನಲ್ಲಿ ವಿಶೇಷ ಅರ್ಚನೆ ಮಾಡಿದರು. ಬಳಿಕ ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ದೇವರು ದರ್ಶನ ಪಡೆದರು. ಅರ್ಚಕರೊಬ್ಬರ ಸಲಹೆಯಂತೆ ತಾಲ್ಲೂಕಿನ ಆರತಿ ಉಕ್ಕಡದ ಅಹಲ್ಯಾದೇವಿ ಮಾರಮ್ಮನ ದೇವಾಲಯಕ್ಕೂ ಶಶಿಕಲಾ ಭೇಟಿ ನೀಡಿದ್ದರು. ಕಂಟಕ ನಿವಾರಣೆಗಾಗಿ ಅಲ್ಲಿ ‘ತಡೆ’ ಒಡೆಸಿದರು.
‘ಶಶಿಕಲಾ ಅವರು ಜೈಲಿನಲ್ಲಿದ್ದಾಗ ಅವರ ಬಿಡುಗಡೆಗೆ ಪ್ರಾರ್ಥಿಸಿ ಅವರ ಬೆಂಬಲಿಗರು ನಿಮಿಷಾಂಬಾ ದೇವಿಗೆ ಹರಕೆ ಹೊತ್ತಿದ್ದರು. ಶಶಿಕಲಾ ಅವರು ಶುಕ್ರವಾರ ಬಂದು ಹರಕೆ ತೀರಿಸಿದ್ದಾರೆ’ ಎಂದು ನಿಮಿಷಾಂಬಾ ದೇವಾಲಯದ ಅರ್ಚಕ ಸೂರ್ಯನಾರಾಯಣಭಟ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.