ADVERTISEMENT

ಅಭಿವೃದ್ಧಿ ಕಾಣದ ಮದ್ದೂರಿನ ಧ್ವಜ ಸತ್ಯಾಗ್ರಹ ಸೌಧ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 5:09 IST
Last Updated 15 ಆಗಸ್ಟ್ 2025, 5:09 IST
ಮದ್ದೂರಿನಲ್ಲಿರುವ ಸ್ವಾತಂತ್ರ್ಯ ಹೋರಾಟದ ಸ್ಮಾರಕ ಧ್ವಜ ಸತ್ಯಾಗ್ರಹ ಸೌಧ
ಮದ್ದೂರಿನಲ್ಲಿರುವ ಸ್ವಾತಂತ್ರ್ಯ ಹೋರಾಟದ ಸ್ಮಾರಕ ಧ್ವಜ ಸತ್ಯಾಗ್ರಹ ಸೌಧ   

ಮದ್ದೂರು: ಇಲ್ಲಿನ ಶಿವಪುರದ ಧ್ವಜ ಸತ್ಯಾಗ್ರಹ ಸೌಧ ಮಂಡ್ಯ ಜಿಲ್ಲೆಯ ಹೆಮ್ಮೆಯ ಸ್ವಾತಂತ್ರ್ಯ ಹೋರಾಟದ ಸ್ಮಾರಕ. ಆದರೆ ದಶಕ ಕಳೆದರೂ ಅಭಿವೃದ್ಧಿ ಕಾಣದೇ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಬೆಂಗಳೂರು -ಮೈಸೂರು ಹೆದ್ದಾರಿಯಲ್ಲಿ ಇರುವ ಈ ಸ್ಮಾರಕವು ಸ್ವಾತಂತ್ರ್ಯಹೋರಾಟದ ಗುರುತು. 1937ರಲ್ಲಿ ಅಂದಿನ ಸ್ವಾತಂತ್ರ್ಯ ಹೋರಾಟಗಾರರಾದ ಎಚ್‌.‌ಕೆ. ವೀರಣ್ಣಗೌಡ, ಕೊಪ್ಪದ ಜೋಗಿಗೌಡ, ಸಾಹುಕಾರ ಚೆನ್ನಯ್ಯ ಸೇರಿದಂತೆ ಹಲವಾರು ಮಹನೀಯರ ನೇತೃತ್ವದಲ್ಲಿ ನಡೆದಿದ್ದ ಸ್ವಾತಂತ್ರ್ಯ ಹೋರಾಟದ ನೆನಪಿಗಾಗಿ ಈ ಸತ್ಯಾಗ್ರಹ ಸೌಧ ನಿರ್ಮಿಸಲಾಗಿದೆ.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಶಿoಷಾ ನದಿಯ ದಡದಲ್ಲಿರುವ ಮದ್ದೂರಿನ ಶಿವಪುರದಲ್ಲಿ ಹೋರಾಟವನ್ನು ನಡೆಸಲು ತೀರ್ಮಾನಿಸಲಾಯಿತು. ಹೋರಾಟಕ್ಕೆ ಅಂದಿನ ಕಾಲದಲ್ಲಿಯೇ ಸುಮಾರು 30ಸಾವಿರಕ್ಕೂ ಅಧಿಕ ಮಂದಿ ಸೇರಿದ್ದಕ್ಕೆ ಶಿವಪುರದ ತಿರುಮಲೆಗೌಡರು ತಮ್ಮ ಜಮೀನನ್ನು ನೀಡಿದ್ದರು. ಹೋರಾಟದಂದು ಕೋಲಾರದ ಸ್ವಾತಂತ್ರ್ಯ ಹೋರಾಟಗಾರ ಟಿ. ಸಿದ್ದಲಿಂಗಯ್ಯ ಬಾವುಟವನ್ನು ಹಾರಿಸಿದ್ದರು. ಈ ನೆನಪಿಗಾಗಿ 1979ರಲ್ಲಿ ನಿರ್ಮಾಣಗೊಂಡ ಈ ಸ್ಮಾರಕವನ್ನು ಅಂದಿನ ಮುಖ್ಯಮಂತ್ರಿಯಾದ್ದ ದೇವರಾಜ ಅರಸು ಉದ್ಘಾಟಿಸಿದ್ದರು.

ADVERTISEMENT

ಕೆಂಗಲ್ ಹನುಮಂತಯ್ಯ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಇಂತಹ ಸ್ಮಾರಕ ಸರ್ಕಾರಗಳ ಅಸಡ್ಡೆಗೆ ಒಳಗಾಗಿದೆ.

ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಸತ್ಯಾಗ್ರಹ ಸೌಧದ ಬಳಿ ಗ್ರಂಥಾಲಯಕ್ಕೆ ಕಟ್ಟಡ ನಿರ್ಮಿಸಿದ್ದನ್ನು ಬಿಟ್ಟರೆ, ಬೇರೆ ಯಾವ ಸರ್ಕಾರಗಳೂ ಇದರತ್ತ ಕಾಳಜಿ ವಹಿಸಿಲ್ಲ. ನಂತರದಲ್ಲಿ ಕಟ್ಟಡ ನಿರ್ವಹಣೆ ಕಾಣದೆ ಸೊರಗುತ್ತಿದೆ‌.

ಸತ್ಯಾಗ್ರಹ ಸೌಧದ ಆವರಣದ ಒಂದು ಭಾಗದಲ್ಲಿ ಮಳೆ ಹೆಚ್ಚಾದರೆ ಚರಂಡಿ ನೀರು ಹರಿಯುತ್ತದೆ, ಇರುವ ಉದ್ಯಾನವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಪ್ರವಾಸಿಗರು ಬಂದರೆ ಮಾಹಿತಿ ನೀಡಲು ‌‌ಒಬ್ಬ ನೌಕರನೂ ಇಲ್ಲ. ಸೌಧದ ಒಳಗಡೆ ಇರುವ ಚಿತ್ರಪಟಗಳು ಹಾಳಾಗಿದ್ದು, ಪೀಠೋಪಕರಣಗಳು ಹಾಳಾಗಿವೆ.

ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಐತಿಹಾಸಿಕ ಸ್ವಾತಂತ್ರ್ಯ ಸ್ಮಾರಕವನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಬೇಕು ಎಂಬುದು ಸ್ಥಳೀಯರ ಒತ್ತಾಯ.

ಅಭಿವೃದ್ಧಿ ಮರೀಚಿಕೆ

30 ವರ್ಷಗಳಿಂದ ಬಂದ ಎಲ್ಲಾ ಸರ್ಕಾರಗಳಿಗೂ ನಿರಂತರವಾಗಿ ಮನವಿ ಮಾಡುತ್ತಾ ಬಂದರೂ ಧ್ವಜ ಸತ್ಯಾಗ್ರಹ ಸೌಧದ ಅಭಿವೃದ್ಧಿ ಮರೀಚಿಕೆಯಾಗಿದೆ. ಸೌಧ ಒಂದು ಕಟ್ಟಡವಾಗಿಯೇ ಉಳಿದಿದ್ದು ಯಾವ ಉದ್ದೇಶಕ್ಕಾಗಿ ನಿರ್ಮಾಣವಾಯಿತೋ ಅದು ಕನಸಾಗಿ ಉಳಿದಿದೆ. ಜನಪ್ರತಿನಿಧಿಗಳು ಅಧಿಕಾರಿಗಳು ಇದರ ಅಭಿವೃದ್ಧಿಗೆ ಪ್ರಯತ್ನಿಸಬೇಕು ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಕೆ.ಟಿ.ಚಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.