ADVERTISEMENT

ಖಾಸಗಿ ಆಸ್ಪತ್ರೆಗಳಲ್ಲಿ ಆಮ್ಲಜನಕ ಪೂರೈಕೆ ಸ್ಥಗಿತ

ಪ್ರಾಣವಾಯುವಿಗಾಗಿ ಹಾಹಾಕಾರ, ಹಾಸಿಗೆ ಮೀಸಲಿಟ್ಟಿದ್ದರೂ ಚಿಕಿತ್ಸೆ ನೀಡಲಾಗದ ದುಸ್ಥಿತಿ

ಎಂ.ಎನ್.ಯೋಗೇಶ್‌
Published 4 ಮೇ 2021, 13:01 IST
Last Updated 4 ಮೇ 2021, 13:01 IST
ಆಮ್ಲಜನಕ ಪೂರೈಕೆ ಪೈಪ್‌ಲೈನ್‌ ವ್ಯವಸ್ಥೆ (ಸಾಂದರ್ಭಿಕ ಚಿತ್ರ)
ಆಮ್ಲಜನಕ ಪೂರೈಕೆ ಪೈಪ್‌ಲೈನ್‌ ವ್ಯವಸ್ಥೆ (ಸಾಂದರ್ಭಿಕ ಚಿತ್ರ)   

ಮಂಡ್ಯ: ನಗರದ ಖಾಸಗಿ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆ ಸ್ಥಗಿತಗೊಂಡಿದ್ದು ಕೋವಿಡ್‌ ರೋಗಿಗಳನ್ನು ದಾಖಲೆ ಮಾಡಲು ಸಾಧ್ಯವಾಗುತ್ತಿಲ್ಲ. ಹಾಸಿಗೆ ಮೀಸಲಿಟ್ಟದ್ದರೂ ಆಮ್ಲಜನಕ ಇಲ್ಲದ ಪರಿಣಾಮ ಸರ್ಕಾರಿ ಆಸ್ಪತ್ರೆಗಳ ಮೇಲಿನ ಹೊರೆ ತೀವ್ರಗೊಳ್ಳುತ್ತಿದೆ.

ಬೆಳ್ಳೂರು ಕ್ರಾಸ್‌ನ ಆದಿಚುಂಚನಗಿರಿ ಆಸ್ಪತ್ರೆ ಆವರಣದಲ್ಲಿ 2 ಕಿಲೋ ಲೀಟರ್‌ ಸಾಮರ್ಥ್ಯದ ದ್ರವರೂಪದ ಆಮ್ಲಜನಕ ಘಟಕವಿದೆ. ಇದೊಂದು ಆಸ್ಪತ್ರೆ ಹೊರತುಪಡಿಸಿ ಜಿಲ್ಲೆಯ ಯಾವುದೇ ಆಸ್ಪತ್ರೆಯಲ್ಲಿ ಆಮ್ಲಜನಕ ಸಂಗ್ರಹ ಘಟಕಗಳಿಲ್ಲ. ಎಲ್ಲಾ ಆಸ್ಪತ್ರೆಗಳು ಜಂಬೂ ಸಿಲಿಂಡರ್‌ ಅವಲಂಬಿಸಿವೆ. ಸದ್ಯದ ಪರಿಸ್ಥಿತಿಯಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಪ್ರಾಣವಾಯು ಪೂರೈಕೆ ಸ್ಥಗಿತವಾಗಿರುವ ಕಾರಣ ರೋಗಿಗಳನ್ನು ದಾಖಲು ಮಾಡಿಕೊಳ್ಳಲು ನಿರಾಕರಣೆ ಮಾಡಲಾಗುತ್ತಿದೆ.

ಜಿಲ್ಲಾಡಳಿತ ಗುರುತಿಸಿರುವ ಆಸ್ಪತ್ರೆಗಳು ಶೇ 50ರಷ್ಟು ಹಾಸಿಗೆಗಳನ್ನು ಕೋವಿಡ್‌ಗಾಗಿ ಮೀಸಲಿಟ್ಟಿದ್ದು ರೋಗಿಗಳ ದಾಖಲಾತಿ ಆರಂಭವಾಗಿತ್ತು. ಏಕಾಏಕಿ ಆಮ್ಲಜನಕ ಪೂರೈಕೆ ಸ್ಥಗಿತಗೊಂಡ ನಂತರ ಖಾಸಗಿ ಆಸ್ಪತ್ರೆ ಸಿಬ್ಬಂದಿ ರೋಗಿಗಳನ್ನು ವಾಪಸ್‌ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಆಮ್ಲಜನಕ ಅವಶ್ಯಕತೆ ಇಲ್ಲದ ಕೋವಿಡ್‌ ರೋಗಿಗಳಿಗೆ ಮಾತ್ರ ಚಿಕಿತ್ಸೆ ಮುಂದುವರಿಸಲಾಗುತ್ತಿದೆ.

ADVERTISEMENT

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಪ್ರಾಣವಾಯುವಿನ ಕೊರತೆಯಿಂದ ರೋಗಿಗಳು ಮೃತಪಟ್ಟ ನಂತರ ಖಾಸಗಿ ಆಸ್ಪತ್ರೆ ವೈದ್ಯರು ಭಯಭೀತರಾಗಿದ್ದಾರೆ. ಆಮ್ಲಜನಕ ಪೂರೈಕೆ ಇಲ್ಲದೆ ಯಾವುದೇ ಕಾರಣಕ್ಕೂ ರೋಗಿಗಳನ್ನು ದಾಖಲು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಿದ್ದಾರೆ.

ರೋಗಿಗಳ ಪ್ರಾಣಕ್ಕೆ ಕುತ್ತಾದರೆ ಜನರು ಆಸ್ಪತ್ರೆ ಆಡಳಿತಮಂಡಳಿ, ವೈದ್ಯರ ಮೇಲೆ ಹಲ್ಲೆ ಮಾಡಿದ ಪ್ರಕರಣಗಳಿಗೆ ಮಂಡ್ಯದಲ್ಲಿ ಕೊರತೆ ಇಲ್ಲ. ಹೀಗಾಗಿ ಕೋವಿಡ್‌ ರೋಗಿಗಳನ್ನು ದಾಖಲು ಮಾಡಿಕೊಳ್ಳಲು ಸ್ಪಷ್ಟವಾಗಿ ನಿರಾಕರಿಸುತ್ತಿದ್ದಾರೆ.

ಅಶೋಕ್‌ನಗರದಲ್ಲಿರುವ ಎಂಎಂಎಚ್‌ ಆಸ್ಪತ್ರೆಯಲ್ಲಿ ಆಮ್ಲಜನಕ ಅವಶ್ಯಕತೆಯುಳ್ಳ 15 ರೋಗಿಗಳನ್ನು ದಾಖಲು ಮಾಡಿಕೊಳ್ಳಲಾಗಿತ್ತು. ದಾಖಲಾದ ದಿನವೇ ಆಮ್ಲಜನಕ ಕೊರತೆಯುಂಟಾಗಿ ರೋಗಿಗಳ ಪ್ರಾಣಕ್ಕೆ ಕುತ್ತು ಬಂದಿತ್ತು. ತಕ್ಷಣವೇ ಜಿಲ್ಲಾಸ್ಪತ್ರೆಯ ಗಮನಕ್ಕೆ ತಂದು ಬದಲಿ ವ್ಯವಸ್ಥೆ ಮಾಡಲಾಯಿತು. ಜಿಲ್ಲಾಧಿಕಾರಿಗಳ ಆದೇಶ ಪಾಲನೆ ದೃಷ್ಟಿಯಿಂದ ಹಾಸಿಗೆ ಮೀಸಲಿಟ್ಟಿದ್ದರೂ ಆಮ್ಲಜನಕ ಪೂರೈಕೆಯಿಂದ ರೋಗಿಗಳಿಗೆ ಚಿಕಿತ್ಸೆ ನೀಡಲಾಗದ ಸ್ಥಿತಿ ನಿರ್ಮಾಣವಾಗಿದೆ.

‘ಬೆಂಗಳೂರಿನ ಪೈ ಇಂಡಸ್ಟ್ರೀಸ್‌ ಮೂಲಕ ವೈದ್ಯಕೀಯ ಆಮ್ಲಜನಕ ತರಿಸುತ್ತಿದ್ದೆವು. ಈಗ ಅಲ್ಲಿ ಪೂರೈಕೆ ಸ್ಥಗಿತಗೊಳಿಸಿದ್ದಾರೆ. ಮೈಸೂರು ನಗರದಲ್ಲೂ ಅನ್ಯಜಿಲ್ಲೆ ಖಾಸಗಿ ಆಸ್ಪತ್ರೆಗಳಿಗೆ ಸಿಲಿಂಡರ್‌ ಕೊಡುತ್ತಿಲ್ಲ, ಜಿಲ್ಲಾಧಿಕಾರಿ ಆದೇಶವಿದೆ ಎನ್ನುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಜಿಲ್ಲಾಡಳಿತವೇ ಆಮ್ಲಜನಕಕ್ಕೆ ವ್ಯವಸ್ಥೆ ಮಾಡಬೇಕು. ನಾವು 20 ರೋಗಿಗಳನ್ನು ದಾಖಲು ಮಾಡಿಕೊಂಡರೆ ದಿನಕ್ಕೆ 40 ಸಿಲಿಂಡರ್‌ ಅವಶ್ಯಕತೆ ಇದೆ’ ಎಂದು ಎಂಎಂಎಚ್‌ ಆಡಳಿತಾಧಿಕಾರಿ ಡಾ.ಸುಮನ್‌ ಕಲ್ಯಾಣ್‌ ಹೇಳಿದರು.

ಸ್ಯಾಂಜೊ ಆಸ್ಪತ್ರೆ, ಪ್ರಶಾಂತ್‌ ನರ್ಸಿಂಗ್‌ ಹೋಂ, ಸುರಭಿ ಆಸ್ಪತ್ರೆಯಲ್ಲೂ ಇದೇ ಪರಿಸ್ಥಿತಿ ಉಂಟಾಗಿದೆ. ಮೊದಲು ಆಮ್ಲಜನಕ ಪೂರೈಸಿ, ನಂತರವಷ್ಟೇ ರೋಗಿಗಳನ್ನು ಕಳುಹಿಸಿ ಎಂದು ಜಿಲ್ಲಾ ಆರೋಗ್ಯಾಧಿಕಾರಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ. ಸಂಕಷ್ಟ ಸಮಯದಲ್ಲಿ ಖಾಸಗಿ ಆಸ್ಪತ್ರೆಗಳನ್ನು ಬಳಸಿಕೊಳ್ಳಲಾಗದ ಪರಿಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ.

‘50 ಹಾಸಿಗೆಗಳನ್ನು ಕೋವಿಡ್‌ ರೋಗಿಗಳಿಗೆ ಮೀಸಲಿಟ್ಟಿದ್ದೇವೆ. ಆದರೆ ಆಮ್ಲಜನಕದ ಕೊರತೆಯಾಗಿರುವ ಹೊಸದಾಗಿ ರೋಗಿಗಳನ್ನು ದಾಖಲು ಮಾಡಿಕೊಳ್ಳುತ್ತಿಲ್ಲ’ ಎಂದು ಜಿ.ಮಾದೇಗೌಡ ಆಸ್ಪತ್ರೆ ಮುಖ್ಯಸ್ಥ ಮಧು ಜಿ ಮಾದೇಗೌಡ ಹೇಳಿದರು.

*********

ಖಾಸಗಿ ಆಸ್ಪತ್ರೆ ಸಿಬ್ಬಂದಿ ರಾಜೀನಾಮೆ

ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳು ದಾಖಲಾಗುತ್ತಾರೆ ಎಂಬ ಸುದ್ದಿ ತಿಳಿದೊಡನೆ ಅಲ್ಲಿಯ ಸಿಬ್ಬಂದಿ ಕರ್ತವ್ಯ ನಿರ್ವಹಿಸಲು ಹಿಂದೇಟು ಹಾಕುತ್ತಿದ್ದಾರೆ. ಕೆಲವರು ಈಗಾಗಲೇ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಮೊದಲ ದಿನ 10 ರೋಗಿಗಳನ್ನು ದಾಖಲು ಮಾಡಿಕೊಂಡೊಡನೆ ನಾಲ್ವರು ಸಿಬ್ಬಂದಿ ರಾಜೀನಾಮೆ ಸಲ್ಲಿಸಿದ್ದಾರೆ. ಕೋವಿಡ್‌ ಕರಾಳತೆ ತೀವ್ರಗೊಂಡಿದ್ದು ವೈದ್ಯರು ಹಾಗೂ ಇತರ ಸಿಬ್ಬಂದಿ ಚಿಕಿತ್ಸೆ ನೀಡಲು ಭಯಪಡುತ್ತಿದ್ದಾರೆ’ ಎಂದು ಖಾಸಗಿ ಆಸ್ಪತ್ರೆಯೊಂದರ ಆಡಳಿತಾಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.