ADVERTISEMENT

ಓಮೈಕ್ರಾನ್‌ ವೈರಸ್‌ ಭೀತಿ; ಸರಳ ಗಿಡದ ಜಾತ್ರೆಗೆ ತೀರ್ಮಾನ

ಯಜಮಾನರ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2021, 16:19 IST
Last Updated 3 ಡಿಸೆಂಬರ್ 2021, 16:19 IST
ನಾಗಮಂಗಲ ಪಟ್ಟಣದಲ್ಲಿ ಶುಕ್ರವಾರ ದಾಸಪ್ಪರು, ಕಳಶಪೂಜೆ ಹೊತ್ತು ಮೆರವಣಿಗೆ ನಡೆಸಿದ ಕಟ್ಟೆಮನೆ ಯಜಮಾನರು ಸರಳ ಗಿಡದ ಜಾತ್ರೆಯ ಬಗ್ಗೆ ತಾಲ್ಲೂಕಿನ ಭಕ್ತರಿಗೆ ಮಾಹಿತಿ ನೀಡಿದರು
ನಾಗಮಂಗಲ ಪಟ್ಟಣದಲ್ಲಿ ಶುಕ್ರವಾರ ದಾಸಪ್ಪರು, ಕಳಶಪೂಜೆ ಹೊತ್ತು ಮೆರವಣಿಗೆ ನಡೆಸಿದ ಕಟ್ಟೆಮನೆ ಯಜಮಾನರು ಸರಳ ಗಿಡದ ಜಾತ್ರೆಯ ಬಗ್ಗೆ ತಾಲ್ಲೂಕಿನ ಭಕ್ತರಿಗೆ ಮಾಹಿತಿ ನೀಡಿದರು   

ನಾಗಮಂಗಲ: ಡಿ.24ರಂದು ವೈಭವದಿಂದ ಜರುಗಬೇಕಿದ್ದ ನಾಗನಕೆರೆ ಗಿಡದ ಜಾತ್ರೆಯನ್ನು ಓಮೈಕ್ರಾನ್ ರೂಪಾಂತರಿ ವೈರಸ್ ಭೀತಿಯಿಂದಾಗಿ ಸಾಂಪ್ರದಾಯಿಕ ಪೂಜೆ ಪುರಸ್ಕಾರಗಳಿಗೆ ಸೀಮಿತವಾಗಿಸಿ ಸರಳವಾಗಿ ನಡೆಸಲು ತೀರ್ಮಾನಿಸಲಾಗಿದೆ ಎಂದು ನಾಗಮಂಗಲ ಕಟ್ಟೆಮನೆ ಯಜಮಾನರ ಕುಟುಂಬಸ್ಥರು ತಿಳಿಸಿದ್ದಾರೆ.

ತಾಲ್ಲೂಕಿನಲ್ಲಿ ಚಿಕ್ಕತಿರುಪತಿ ಎಂದು ಪ್ರಸಿದ್ಧಿ ಪಡೆದಿರುವ ದೇವಲಾಪುರ ಹೋಬಳಿಯ ಎಚ್.ಎನ್.ಕಾವಲ್‍ನ ನಾಗನಕೆರೆಯಲ್ಲಿ ನಡೆಯುವ ಗಿಡದ ಜಾತ್ರೆಗೆ 20ದಿನಗಳ ಮೊದಲೇ ಸಂಪ್ರದಾಯದಂತೆ ಕಳಶಪೂಜೆ ಹೊತ್ತು ಹರಿಭಕ್ತರಾದ ದಾಸಪ್ಪರೆಲ್ಲರೂ ಸೇರಿ ಪಟ್ಟಣದಲ್ಲಿ ಶುಕ್ರವಾರ ಮೆರವಣಿಗೆ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ನಾಗಮಂಗಲ ಕಟ್ಟೆಮನೆ ಯಜಮಾನರ ಕುಟುಂಬಸ್ಥ ಎನ್.ಕೆ.ರಾಜು, ಈ ಬಾರಿಯೂ ಡಿ.24ಕ್ಕೆ ವಿಜೃಂಭಣೆಯಿಂದ ಜಾತ್ರೆ ಜರುಗಬೇಕಿತ್ತು. ಆದರೆ, ರಾಜ್ಯದ ವಿವಿಧೆಡೆಗಳಿಂದ 25 ರಿಂದ 30 ಸಾವಿರಕ್ಕೂ ಅಧಿಕ ಭಕ್ತರು ಬರುವುದರಿಂದ ಕೋವಿಡ್‌ ಮುನ್ನೆಚ್ಚರಿಕೆ ಕ್ರಮವಾಗಿ ರದ್ದು ಮಾಡಿ ಸಾಂಪ್ರದಾಯಿಕ ಪೂಜೆಗಳಿಗೆ ಸೀಮಿತ ಮಾಡಲಾಗಿದೆ ಎಂದರು.

ADVERTISEMENT

ಗಿಡದಜಾತ್ರೆ ಹಿನ್ನಲೆಯಲ್ಲಿ ತಾಲ್ಲೂಕಿನ ಭೈರನಹಳ್ಳಿಯ ವೆಂಕಟರ ಮಣಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜಾ ಸೇವೆ ಮತ್ತು ಅನ್ನಸಂತರ್ಪಣೆ ನಡೆಯುತ್ತಿತ್ತು. ಗದ್ದೇಭೂವನಹಳ್ಳಿಯ ಗುಂಡುಕಲ್ಲುಜಾತ್ರೆ, ಬೊಮ್ಮನಹಳ್ಳಿ ಭೂತಾಳೆ ಜಾತ್ರೆಗಳನ್ನು ಒಳಗೊಂಡಂತೆ ತಾಲ್ಲೂಕಿನ ವಿವಿಧೆಡೆ ಹಲವು ಗ್ರಾಮಗಳಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದ್ದವು. ಈ ಬಾರಿ ಜನರು ತಮ್ಮ ಗ್ರಾಮಗಳ ವ್ಯಾಪ್ತಿಯಲ್ಲೇ ಸರಳವಾಗಿ ದೇವರ ಪೂಜಾ ಕಾರ್ಯಗಳನ್ನು ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.