ಶ್ರೀರಂಗಪಟ್ಟಣ: ‘ವಿದ್ಯಾರ್ಥಿಗಳಿಗೆ ಕೌಶಲ ಆಧಾರಿತ ಶಿಕ್ಷಣ ಅನಿವಾರ್ಯ. ಅದರೊಂದಿಗೆ ಮಾನವೀಯ ಮೌಲ್ಯಗಳು ಮಿಳಿತವಾಗಿರಬೇಕು’ ಎಂದು ರಾಮ್‌ಮನೋಹರ್ ಲೋಹಿಯಾ ವಿಚಾರ ವೇದಿಕೆ ಅಧ್ಯಕ್ಷ ಬಿ.ಎಸ್. ಶಿವಣ್ಣ ತಿಳಿಸಿದರು.
ತಾಲ್ಲೂಕಿನ ಬೆಳವಾಡಿ ಬಳಿಯ ಮಹಾರಾಜ ತಾಂತ್ರಿಕ ಮಹಾ ವಿದ್ಯಾಲಯ ಮೈಸೂರು (ಎಂಐಟಿಎಂ) ಸಂಸ್ಥೆಯಲ್ಲಿ ಶನಿವಾರ ಏರ್ಪಡಿಸಿದ್ದ ಸಂಕಲ್ಪ ದಿನ (ಓರಿಯಂಟೇಷನ್ ಪ್ರೋಗ್ರಾಂ) ಉದ್ಘಾಟಿಸಿ ಅವರು ಮಾತನಾಡಿದರು. ‘ಜಾತಿ, ವರ್ಗ, ವರ್ಣ, ಲಿಂಗ ಬೇಧವಿಲ್ಲದ ಸಮಾಜಕ್ಕಾಗಿ ಯುವ ಜನರಲ್ಲಿ ವಿಶ್ವ ಮಾನವತ್ವ ಬೆಳೆಸಿಕೊಳ್ಳಬೇಕು. ಉತ್ತಮ ಶಿಕ್ಷಣ ನೀಡುವ ಜತೆಗೆ ಗಾಂಧಿ, ಬುದ್ಧ, ಅಂಬೇಡ್ಕರ್ ವಿಚಾರಗಳನ್ನೂ ಬಿತ್ತಬೇಕು ’ ಎಂದು ಹೇಳಿದರು.
ಪತ್ರಕರ್ತ ಅಜಿತ್ ಹನುಮಕ್ಕನವರ್ ಪ್ರಧಾನ ಭಾಷಣ ಮಾಡಿ, ‘ಹಣ, ಆಸ್ತಿವಂತರ ಕಾಲ ಹೋಗಿ ಬುದ್ಧಿವಂತರ ಕಾಲ ಬಂದಿದೆ. ಸ್ಟಾರ್ಟ್‌ಅಪ್‌ಗಳನ್ನು ಶುರು ಮಾಡಿ ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಗಳಿಸುವ ಮಾರ್ಗಗಳು ತೆರೆದುಕೊಂಡಿದ್ದು, ವಿದ್ಯಾರ್ಥಿಗಳಿಗೆ ತೋರಿಸಬೇಕು. ನಿರಂತರ ಕುಸಿದು ಬಿದ್ದರೂ ಮತ್ತೆ ಮೇಲೇಳುವ ಛಲ ಬೆಳೆಸಿಕೊಂಡರೆ ಯಶಸ್ಸು ಸಾಧ್ಯ ’ ಎಂದು ಅವರು ಸಲಹೆ ನೀಡಿದರು.
ಸಂಸ್ಥೆ ಅಧ್ಯಕ್ಷ ಬಿ.ಜಿ. ನರೇಶಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಎಸ್. ಮುರಳಿ, ಆಡಳಿತಾಧಿಕಾರಿ ಅನಿರುದ್ಧ, ಸಂಸ್ಥೆಯ ಉಪಾಧ್ಯಕ್ಷ ಜಿ. ಹೇಮಂತಕುಮಾರ್, ವೈ.ಟಿ. ಕೃಷ್ಣೇಗೌಡ, ಎಚ್.ಕೆ. ಚೇತನ್, ಟಿ. ವಾಸುದೇವ್, ಟಿಸಿಎಸ್ ಕಂಪೆನಿಯ ಪ್ರಾದೇಶಿಕ ಮುಖ್ಯಸ್ಥ ಪ್ರವೀಣ್ ಚಂದ್ರನ್, ಡಿ.ಎಸ್. ಗುರು, ಗಾಡ್‌ಪ್ರೇ ದೇವಪುತ್ರ ಪಾಲ್ಗೊಂಡಿದ್ದರು. ಪ್ರತಿಭಾವಂತರ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.