ADVERTISEMENT

‘ಸಮಾಜಮುಖಿ ಕಾರ್ಯ; ಮುಂಚೂಣಿಯಲ್ಲಿ ಮಠ’: ನಾಗತಿಹಳ್ಳಿ ಚಂದ್ರಶೇಖರ್

ಡಾ.ಜೆ.ಎನ್‌.ರಾಮಕೃಷ್ಣೇಗೌಡ ಅವರ ಅಭಿನಂದನಾ ಕಾರ್ಯಕ್ರಮ; ನಾಗತಿಹಳ್ಳಿ ಚಂದ್ರಶೇಖರ್ ಅಭಿಮತ

​ಪ್ರಜಾವಾಣಿ ವಾರ್ತೆ
Published 3 ಜನವರಿ 2022, 2:27 IST
Last Updated 3 ಜನವರಿ 2022, 2:27 IST
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಡಾ.ಜೆ.ಎನ್‌.ರಾಮಕೃಷ್ಣೇಗೌಡ ಅವರನ್ನು ಮಂಡ್ಯ ನಗರದ ಗಾಂಧಿ ಭವನದಲ್ಲಿ ಅಭಿನಂದಿಸಲಾಯಿತು. ಜಿ.ವಿ.ನರಸಿಂಹಯ್ಯ, ಎಂ.ಎಸ್‌.ಆತ್ಮಾನಂದ, ವಿ.ಗೋಪಾಲಗೌಡ, ನಾಗತಿಹಳ್ಳಿ ಚಂದ್ರಶೇಖರ್, ಸಿ.ಕೆ.ರವಿಕುಮಾರ ಚಾಮಲಾಪುರ ಇದ್ದಾರೆ
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಡಾ.ಜೆ.ಎನ್‌.ರಾಮಕೃಷ್ಣೇಗೌಡ ಅವರನ್ನು ಮಂಡ್ಯ ನಗರದ ಗಾಂಧಿ ಭವನದಲ್ಲಿ ಅಭಿನಂದಿಸಲಾಯಿತು. ಜಿ.ವಿ.ನರಸಿಂಹಯ್ಯ, ಎಂ.ಎಸ್‌.ಆತ್ಮಾನಂದ, ವಿ.ಗೋಪಾಲಗೌಡ, ನಾಗತಿಹಳ್ಳಿ ಚಂದ್ರಶೇಖರ್, ಸಿ.ಕೆ.ರವಿಕುಮಾರ ಚಾಮಲಾಪುರ ಇದ್ದಾರೆ   

ಮಂಡ್ಯ: ‘ಪ್ರಸ್ತುತದಲ್ಲಿ ಒಂದು ಸಂಸ್ಥೆಯನ್ನು ಬೆಳೆಸುವುದು ಎಷ್ಟು ಕಷ್ಟ ಎಂಬುದು ನನಗೆ ಅರಿವಾಗಿದೆ. ಆದರೆ, ಅದೆಲ್ಲವನ್ನೂ ಮೀರಿ ಆದಿಚುಂಚನಗಿರಿ ಮಠ ಸಮಾಜಮುಖಿ ಕೆಲಸಗಳಲ್ಲಿ ಬೃಹತ್‌ ಮಠವಾಗಿ ಬೆಳೆದು ನಿಂತಿದೆ’ ಎಂದು ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು.

ನಗರದ ಗಾಂಧಿ ಭವನದಲ್ಲಿಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋ ಗದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಡಾ.ಜೆ.ಎನ್‌.ರಾಮಕೃಷ್ಣೇಗೌಡ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆದಿಚುಂಚನಗಿರಿ ಮಠದ ನೆರಳಿನಲ್ಲಿ ಬಂದ ರಾಮಕೃಷ್ಣೇಗೌಡ ಅವರು, ಮಠಕ್ಕೆ ಅಸಾಮಾನ್ಯ ಸೇವೆ ಮಾಡುತ್ತಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ಕೇವಲ ಸಾಹಿತಿಗಳಿಗೆ ಅಥವಾ ಒಂದು ಕ್ಷೇತ್ರಕ್ಕೆ ಸೀಮಿತವಲ್ಲ. ಸಮಾಜಮುಖಿಯಾಗಿ ಕೆಲಸ ಮಾಡುವ ವ್ಯಕ್ತಿಗಳಿಗೆ ನೀಡುವ ಮೌಲ್ಯಯುತವಾದ ಪ್ರಶಸ್ತಿ ಎಂದು ಬಣ್ಣಿಸಿದರು.

ADVERTISEMENT

ಮಠವು ವಿಶೇಷವಾಗಿ ಮೆಡಿಕಲ್‌ ಕಾಲೇಜುಗಳ ಸ್ಥಾಪನೆ, ಕರ್ನಾಟಕ ವನ ಸಂವರ್ಧನೆ, ಹಲವು ಗೋಶಾಲೆಗಳು, ಉತ್ತರ ಕರ್ನಾಟಕದಲ್ಲಿ ಮಠ ಮಾಡಿರುವ ಕೆಲಸ, ಕಾಶಿಯನ್ನು ಒಳಗೊಂಡಂತೆ ಉತ್ತರ ಭಾರತದಲ್ಲಿ ಮಾಡಿರುವ ಕೆಲಸ, ವೃದ್ಧರಿಗೆ, ಮಹಿಳೆಯರಿಗೆ, ಮಕ್ಕಳಿಗೆ ಅನೇಕ ಬಗೆಯ ಶಿಕ್ಷಣ ದಾಸೋಹ ಹಾಗೂ ಅಕ್ಷರ ದಾಸೋಹಗಳನ್ನು ಮಠದ ಮೂಲಕ ಹಿರಿಯ ಸ್ವಾಮೀಜಿ ಮಾಡಿದ್ದರು. ಅವರಿಗೆ ದೂರದೃಷ್ಟಿ ಇತ್ತು. ಕಾಯಕಲ್ಪದ ಗುಣ ಇತ್ತು. ಆ ನಿಟ್ಟಿನಲ್ಲಿ ಪ್ರಸ್ತುತ ನಿರ್ಮಲಾನಂದನಾಥ ಸ್ವಾಮೀಜಿ ಸಾಗುತ್ತಿದ್ದಾರೆ ಎಂದು ಅವರು ಹೇಳಿದರು.

ಇದಕ್ಕೂ ಮುನ್ನ ನಗರಸಭೆ ಆವರಣ ದಿಂದ ಜಾನಪದ ಕಲಾ ತಂಡದೊಂದಿಗೆ ಬೆಳ್ಳಿ ಸಾರೋಟಿನಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಡಾ.ಜೆ.ಎನ್‌.ರಾಮಕೃಷ್ಣೇಗೌಡ ಅವರನ್ನು ವೇದಿಕೆ ಬಳಿ ಕರೆತರಲಾಯಿತು.

ಮಾಜಿ ಸಚಿವ ಎಂ.ಎಸ್‌.ಆತ್ಮಾನಂದ,ನಿವೃತ್ತ ನ್ಯಾಯಾಧೀಶ ವಿ.ಗೋಪಾಲಗೌಡ, ಚಲನಚಿತ್ರ ನಿರ್ದೇಶಕ ಜಿ.ವಿ.ನರಸಿಂಹಯ್ಯ, ಮೈಸೂರಿನ ಪ್ರಾದೇಶಿಕ ಆಯುಕ್ತ ಜಿ.ಸಿ.ಪ್ರಕಾಶ್, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ರವಿಕುಮಾರ ಚಾಮಲಾಪುರ, ಮುಖಂಡ ಇಂಡುವಾಳು ಸಚ್ಚಿದಾನಂದ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.