ADVERTISEMENT

ಕ್ರೀಡಾ ಗ್ರಾಮ ಸ್ಥಾಪನೆಗೆ ಕ್ರಮ: ಸಚಿವ

ಕೆ.ಆರ್‌.ಪೇಟೆ ತಾಲ್ಲೂಕು ಕ್ರೀಡಾಂಗಣ ಮೇಲ್ದರ್ಜೆಗೆ: ನಾರಾಯಣಗೌಡ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2021, 2:06 IST
Last Updated 3 ಮಾರ್ಚ್ 2021, 2:06 IST
ಕೆ.ಆರ್.ಪೇಟೆ ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ತಾಲ್ಲೂಕುಮಟ್ಟದ ಪಿಯು ಕಾಲೇಜುಗಳ ವಾರ್ಷಿಕ ಕ್ರೀಡಾಕೂಟದ ಕಬಡ್ಡಿಯಲ್ಲಿ ಗೆದ್ದ ಆನೆಗೊಳ ತಂಡಕ್ಕೆ ಸಚಿವ ನಾರಾಯಣಗೌಡ ಪ್ರಶಸ್ತಿ ವಿತರಿಸಿದರು
ಕೆ.ಆರ್.ಪೇಟೆ ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ತಾಲ್ಲೂಕುಮಟ್ಟದ ಪಿಯು ಕಾಲೇಜುಗಳ ವಾರ್ಷಿಕ ಕ್ರೀಡಾಕೂಟದ ಕಬಡ್ಡಿಯಲ್ಲಿ ಗೆದ್ದ ಆನೆಗೊಳ ತಂಡಕ್ಕೆ ಸಚಿವ ನಾರಾಯಣಗೌಡ ಪ್ರಶಸ್ತಿ ವಿತರಿಸಿದರು   

ಕೆ.ಆರ್.ಪೇಟೆ: ಖೇಲೋ ಇಂಡಿಯ ಕಾರ್ಯಕ್ರಮದ ಅನ್ವಯ ತಾಲ್ಲೂಕಿನಲ್ಲಿ 25 ಎಕರೆ ಜಾಗದಲ್ಲಿ ಕ್ರೀಡಾ ಗ್ರಾಮ ನಿರ್ಮಿಸಲಾಗುವುದು. ಪಟ್ಟಣದ ತಾಲ್ಲೂಕು ಕ್ರೀಡಾಂಗಣವನ್ನು ₹ 6.5 ಕೋಟಿ ವೆಚ್ಚದಲ್ಲಿ ಮಾದರಿ ಕ್ರೀಡಾಂಗಣವಾಗಿ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಯುವಜನ ಸಬಲೀಕರಣ, ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.

ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ತಾಲ್ಲೂಕು ಮಟ್ಟದ ಪಿಯು ಕಾಲೇಜುಗಳ ವಿದ್ಯಾರ್ಥಿ - ವಿದ್ಯಾರ್ಥಿನಿಯರ ವಾರ್ಷಿಕ ಕ್ರೀಡಾಕೂಟದಲ್ಲಿ ಕಿಕ್ಕೇರಿ ಮತ್ತು ಆನೆಗೊಳ ಪದವಿಪೂರ್ವ ಕಾಲೇಜುಗಳ ಬಾಲಕರ ನಡುವೆ ನಡೆದ ಅಂತಿಮ ಕಬಡ್ಡಿ ಪಂದ್ಯ ವೀಕ್ಷಿಸಿದ ಸಚಿವರು ಗೆದ್ದವರಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಕೇಂದ್ರ ಸರ್ಕಾರದ ಖೇಲೋ ಇಂಡಿಯ ಕಾರ್ಯಕ್ರಮವನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಪಟ್ಟಣದ ಹೊರವಲಯದಲ್ಲಿ ಎಲ್ಲ ಬಗೆಯ ಕ್ರೀಡಾ ಚಟುವಟಿಕೆಗಳನ್ನು ಅಭ್ಯಾಸ ಮಾಡುವವರಿಗೆ ಅನುಕೂಲವಾಗುವ ರೀತಿಯಲ್ಲಿ ಕ್ರೀಡಾ ಗ್ರಾಮ ರೂಪಿಸಲಾಗುವುದು. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಆನುಮತಿ ನೀಡಿದ್ದು, ಕಾರ್ಯರೂಪಕ್ಕೆ ಬರಲಿದೆ ಎಂದರು.

ADVERTISEMENT

ಪಟ್ಟಣದ ತಾಲ್ಲೂಕು ಕ್ರಿಡಾಂಗಣದ ಆಧುನೀಕರಣಕ್ಕೆ ಈಗಾಗಲೇ ₹2.5 ಕೋಟಿ ಬಿಡುಗಡೆಯಾಗಿದ್ದು, ಒಟ್ಟು ₹ 6.5 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಜಿಲ್ಲೆಯಲ್ಲಿ ಕೈಗಾರಿಕೆಯನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಚರ್ಚಿಸಲು ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ಬಂದಿದ್ದರಿಂದ ಉದ್ಘಾಟನೆಗೆ ಬರಲಾಗಲಿಲ್ಲ ಎಂದು ಹೇಳಿದರು.

ಕೃಷಿ ಪ್ರಧಾನವಾದ ಮಂಡ್ಯ ಜಿಲ್ಲೆಯನ್ನು ಕೈಗಾರಿಕಾ ವಲಯವಾಗಿ ಪರಿವರ್ತಿಸಿ ಉದ್ಯೋಗ ಅವಕಾಶ ಒದಗಿಸಲು ಸರ್ಕಾರ ಶ್ರಮಿಸಲಿದೆ ಎಂದರು.

ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್, ಪುರಸಬೆಯ ಮಾಜಿ ಸದಸ್ಯ ಕೆ.ಆರ್.ನೀಲಕಂಠ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.