ADVERTISEMENT

ವೈರಮುಡಿ ಬ್ರಹ್ಮೋತ್ಸವಕ್ಕೆ ಮೇಲುಕೋಟೆ ಸಜ್ಜು

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2025, 5:31 IST
Last Updated 3 ಏಪ್ರಿಲ್ 2025, 5:31 IST
ವೈರಮುಡಿ ಕಿರೀಟ
ವೈರಮುಡಿ ಕಿರೀಟ   

ಮೇಲುಕೋಟೆ: ಮೊದಲನೇ ವೈಕುಂಠದಲ್ಲಿ ಏ. 7ರಂದು ಅದ್ದೂರಿ ವೈರಮುಡಿ ಬ್ರಹ್ಮೋತ್ಸವ ನಡೆಯಲಿದ್ದು, ಬ್ರಹ್ಮೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.

ಶ್ರೀ ಕ್ಷೇತ್ರ ಮದುವೆ ಮನೆಯಂತೆ ಸಿಂಗಾರಗೊಳ್ಳುತ್ತಿದೆ. ಲಕ್ಷಾಂತರ ಭಕ್ತರು ಸೇರುವ ನಿರೀಕ್ಷೆಯಿಂದ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ.

ಚೆಲುವನಾರಾಯಣ ಸ್ವಾಮಿ ದೇವಾಲಯದ ಸಂಪ್ರದಾಯದಂತೆ ಬುಧವಾರ ರಾತ್ರಿ ರೋಹಿಣಿ ನಕ್ಷತ್ರದಲ್ಲಿ ವಿಶ್ವ ವಿಖ್ಯಾತ ವೈರಮುಡಿ ಬ್ರಹ್ಮೋತ್ಸವಕ್ಕೆ ಅಂಕುರಾರ್ಪಣೆಯೊಂದಿಗೆ ಅಧಿಕೃತ ಚಾಲನೆ ನೀಡಲಾಗಿದೆ.

ADVERTISEMENT

ಏ 7ರ ರಾತ್ರಿ ಜಿಲ್ಲಾ ಖಜಾನೆಯಿಂದ ತಂದ ವಜ್ರಖಚಿತ ವೈರಮುಡಿ ಕಿರೀಟ ಹಾಗೂ ಗಂಡಭೇರುಂಡ ಪದಕ ಸೇರಿದ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಆಭರಣಗಳನ್ನು ಶ್ರೀದೇವಿ, ಭೂದೇವಿಯರೊಂದಿಗೆ ಗರುಢಾರೂಢನಾದ ಚಲುವನಾರಾಯಣಸ್ವಾಮಿಗೆ ಧರಿಸಿ ವಿಶೇಷ ಮಹಾಮಂಗಳಾರತಿ ನೆರವೇರಿಸಿ ಲೋಕಾ ಕಲ್ಯಾಣಾರ್ಥವಾಗಿ ಅರ್ಧ ಚಂದ್ರಾಕೃತಿಯ ವೈರಮುಡಿ ಬ್ರಹ್ಮೋತ್ಸವ ಸಂಭ್ರಮದಿಂದ ಜರುಗಲಿದೆ.

ಸಾಕ್ಷಾತ್ ಭಗವಂತನೇ ಧರೆಗಿಳಿದು ವೈರಮುಡಿ ಕಿರೀಟ ಧರಿಸಿ ಭಕ್ತರಿಗೆ ದರ್ಶನ ನೀಡುತ್ತಾನೆ. ಚಲುವನಾರಾಯಣಸ್ವಾಮಿಯನ್ನ ಕಣ್ತುಂಬಿಕೊಳ್ಳಲು ಹೊರ ರಾಜ್ಯದಿಂದಲ್ಲೂ ಭಕ್ತರು‌ ಬರಲಿದ್ದಾರೆ. ಎರಡನೇ ಭಾರಿ ವೈರಮುಡಿ ಬ್ರಹ್ಮೋತ್ಸವದಲ್ಲಿ‌ ಶಾಸಕ ದರ್ಶನ್ ‌ಪುಟ್ಟಣ್ಣಯ್ಯ, ಸಚಿವ ಎನ್. ಚೆಲುವರಾಯಸ್ವಾಮಿ, ಮಾಜಿ ಸಚಿವ ಎಚ್.ಡಿ. ರೇವಣ್ಣ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಬ್ರಹ್ಮೋತ್ಸವದಲ್ಲಿ ಭಾಗಿಯಾಗಲಿದ್ದಾರೆ.

ವಿಶೇಷ ದೀಪಾಲಂಕಾರ:

ಸಮೀಪದ ಜಕ್ಕನಹಳ್ಳಿಯಿಂದ ಮೇಲುಕೋಟೆ ಹೆದ್ದಾರಿಗೆ ದೀಪಾಲಂಕಾರ ವ್ಯವಸ್ಥೆ ಕೈಗೊಳ್ಳಲಾಗಿದೆ. ಇಲ್ಲಿನ ಅಕ್ಕತಂಗಿ ಕೊಳ, ಧನುಷ್ ಕೋಟೆ, ರಾಯಗೋಪುರ, ಪಂಚಕಲ್ಯಾಣಿ, ಯೋಗಾನರಸಿಂಹ ಸ್ವಾಮಿ ಬೆಟ್ಟ ಸೇರಿದಂತೆ ಅನೇಕ ತಾಣಗಳಿಗೆ ₹50 ಲಕ್ಷ ವೆಚ್ಚದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.

ಬಸ್ ವ್ಯವಸ್ಥೆ:

ಕೆಎಸ್ಆರ್‌ಟಿಸಿಯಿಂದ ಬಸ್ ಹಾಸನ, ಮಂಡ್ಯ, ಮೈಸೂರು, ಧರ್ಮಸ್ಥಳ, ಬೆಂಗಳೂರು, ಮೈಸೂರು, ತುಮಕೂರು, ಶ್ರವಣಬೆಳಗೊಳ, ಪಾಂಡವಪುರ, ನಾಗಮಂಗಲ, ಕೆ.ಆರ್.ಪೇಟೆಗಳಿಂದ ಹೆಚ್ಚಿನ ವ್ಯವಸ್ಥೆ ಕಲ್ಪಿಸಲಾಗಿದೆ.

ಅನ್ನ ಪ್ರಸಾದ ನಿಲಯದಲ್ಲಿ ನಿತ್ಯ ಪ್ರಸಾದ ವಿತರಣೆ, ವೈರಮುಡಿಯಂದು ವಿಶೇಷ ಮಂಗಳವಾದ್ಯ ಆಯೋಜನೆ, ದೇವಾಲಯಕ್ಕೆ ವಿಶೇಷ ಪುಷ್ಪಾಲಂಕಾರ, ವೈದ್ಯಕೀಯ ಸೇವೆ, ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಕೈಗೊಳ್ಳುವಂತೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮೇಲುಕೋಟೆ ವೈರಮುಡಿ ಬ್ರಹ್ಮೋತ್ಸವ (ಸಂಗ್ರಹ ಚಿತ್ರ)
ಜಾತ್ರೆಗೆ ಬರುವ ಭಕ್ತರಿಗೆ ನಿತ್ಯ ಪ್ರಸಾದ ಕುಡಿಯುವ ನೀರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಸ್ವಚ್ಛತೆಗೆ ಆದ್ಯತೆ ನೀಡಿದ್ದು ಈ ಬಾರಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ₹10 ಕೋಟಿ ವಿಶೇಷ ಅನುದಾನ ನೀಡಿರುವುದು ಹೆಚ್ಚು ಖುಷಿಕೊಟ್ಟಿದೆ
ದರ್ಶನ್ ಪುಟ್ಟಣ್ಣಯ್ಯ ಶಾಸಕ

ಏ.14ರವರೆಗೆ ವಿವಿಧ ಕಾರ್ಯಕ್ರಮ

ಏ‍ಪ್ರಿಲ್ 2ರಂದು ವೈರಮುಡಿ ಬ್ರಹ್ಮೋತ್ಸವಕ್ಕೆ ಅಂಕುರಾರ್ಪಣೆ, 3ರಂದು ಕಲ್ಯಾಣೋತ್ಸವ, 4ರಂದು ಧ್ವಜರೋಹಣ, ರಾಮಾನುಜಾಚಾರ್ಯರಿಗೆ ಅಭಿಷೇಕ, 5ರಂದು ಶೇಷವಾಹನ, 6ರಂದು ನಾಗವಲ್ಲಿ ಮಹೋತ್ಸವ, 7ರಂದು ವೈರಮುಡಿ ಕಿರೀಟಧಾರಣೆ ನಡೆಯಲಿವೆ. 8ರಂದು ಪ್ರಹ್ಲಾದ ಪರಿಪಾಲನ, 9ರಂದು ಗಜೇಂದ್ರ ಮೋಕ್ಷ, 10ರಂದು ರಥೋತ್ಸವ, 11ರಂದು ತೆಪ್ಪೋತ್ಸವ, 12ರಂದು ನಾರಾಯಣ ಸ್ವಾಮಿಗೆ ಜಯಂತಿ, 13ರಂದು ಚೆಲುವ ನಾರಾಯಣಸ್ವಾಮಿಗೆ ಅಭಿಷೇಕ, 14ರಂದು  ಯೋಗಾನರಸಿಂಹ ಸ್ವಾಮಿ ಹಾಗೂ ಅಮ್ಮನವರಿಗೆ ಮಹಾಭಿಷೇಕ ನಡೆಯಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.