ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಸೆ.25ರಿಂದ 4 ದಿನ ನಡೆಯಲಿರುವ ದಸರಾ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಪಟ್ಟಣದಲ್ಲಿ ‘ಜಲ ನಿರೋಧಕ ತಾತ್ಕಾಲಿಕ ಸಭಾಂಗಣ’ ನಿರ್ಮಾಣ ಕಾರ್ಯ ಆರಂಭವಾಗಿದೆ.
ಇಲ್ಲಿನ ಶ್ರೀರಂಗನಾಥಸ್ವಾಮಿ ದೇವಾಲಯ ಮೈದಾನದಲ್ಲಿ 140 ಅಡಿ ಅಗಲ ಮತ್ತು 300 ಅಡಿ ಉದ್ದದ ವೇದಿಕೆಯ ನಿರ್ಮಾಣ ಕಾರ್ಯ ಆರಂಭವಾಗಿದೆ. ‘ಇರದಲ್ಲಿ ಏಕ ಕಾಲಕ್ಕೆ 7 ಸಾವಿರ ಮಂದಿ ಕುಳಿತು ವೀಕ್ಷಿಸಬಹುದು. ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನದ ವೇದಿಕೆ 60 ಅಡಿ ಅಗಲ ಮತ್ತು 80 ಅಡಿ ಉದ್ದ ಇರಲಿದೆ. ಪ್ರಧಾನ ವೇದಿಕೆಯ ಹಿಂದೆ ಕಲಾವಿದರಿಗಾಗಿ ಗ್ರೀನ್ ರೂಂ ಮತ್ತು ಜನರೇಟರ್ ರೂಂಗಳು ಇರುತ್ತವೆ. ವೇದಿಕೆಯ ಮುಂದೆ ಪತ್ರಕರ್ತರಿಗೆ ಹಾಗೂ ಗಣ್ಯರಿಗೆ ಪ್ರತ್ಯೇಕ ಆಸನಗಳ ವ್ಯವಸ್ಥೆ ಇರುತ್ತದೆ’ ಎಂದು ವೇದಿಕೆ ನಿರ್ಮಾಣದ ಉಸ್ತುವಾರಿ ವಹಿಸಿರುವ ಪುರಸಭೆ ಸದಸ್ಯ ಎಸ್.ಎನ್. ದಯಾನಂದ್ ತಿಳಿಸಿದರು.
‘ವೇದಿಕೆಯ ಮುಂದೆ ಮತ್ತು ಎಡ ಭಾಗದಲ್ಲಿ 150 ವಸ್ತುಪ್ರದರ್ಶನ ಮಳಿಗೆಗಳು ಇರಲಿದ್ದು, ಅವುಗಳ ನಿರ್ಮಾಣ ಕಾರ್ಯ ಕೂಡ ಆರಂಭವಾಗಿದೆ. ಈ ಮಳಿಗೆಗಳಲ್ಲಿ ಕೃಷಿ, ತೋಟಗಾರಿಕೆ, ಆರೋಗ್ಯ, ರೇಷ್ಮೆ, ವಿದ್ಯುತ್, ಹೈನುಗಾರಿಕೆ ಇನ್ನಿತರ ಇಲಾಖೆಗಳು ತಮ್ಮ ಮಾದರಿಗಳನ್ನು ಪ್ರದರ್ಶಿಸಲಿವೆ. ಮಹಿಳಾ ಸಂಘಗಳು ಉತ್ಪಾದಿಸುವ ಉತ್ಪನ್ನಗಳನ್ನು ಮಾರಾಟ ಮಾಡಲು ಕೆಲವು ಮಳಿಗೆಗಳನ್ನು ಮೀಸಲಿಡಲಾಗುತ್ತದೆ’ ಎಂದು ಅವರು ಹೇಳಿದರು.
‘ಪ್ರಧಾನ ವೇದಿಕೆಯ ಹಿಂದೆ ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಮಾಡಲಾಗುತ್ತದೆ. ವೇದಿಕೆಯಲ್ಲಿ ಡಿಜಿಟಲ್ ಪರದೆಯ ಮೂಲಕ ರಾಜ್ಯ ಸರ್ಕಾರದ ಮಹತ್ವದ ಯೋಜನೆಗಳನ್ನು ಬಿಂಬಿಸಲಾಗುತ್ತದೆ. 4 ದಿನಗಳಲ್ಲಿ ವೇದಿಕೆಯ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ’ ಎಂದು ದಯಾನಂದ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.