ADVERTISEMENT

ಶ್ರೀರಂಗಪಟ್ಟಣ | ನಿರ್ಲಕ್ಷ: ಸೊರಗಿದ ‘ಗ್ಯಾರಿಸನ್ ಆಸ್ಪತ್ರೆ’

ಶ್ರೀರಂಗಪಟ್ಟಣ: ಸ್ಮಾರಕ ಸುತ್ತ ಬೆಳೆದ ಮುಳ್ಳಿನ ಪೊದೆ

ಗಣಂಗೂರು ನಂಜೇಗೌಡ
Published 7 ಅಕ್ಟೋಬರ್ 2025, 5:10 IST
Last Updated 7 ಅಕ್ಟೋಬರ್ 2025, 5:10 IST
ಶ್ರೀರಂಗಪಟ್ಟಣದ ರೈಲ್ವೆ ನಿಲ್ದಾಣದ ಎದುರು, ಒಬೆಲಿಸ್ಕ್‌ ಸ್ಮಾರಕದ ಸಮೀಪ ಇರುವ ಗ್ಯಾರಿಸನ್‌ ಆಸ್ಪತ್ರೆ ಸ್ಮಾರಕ ಮುಳ್ಳು ಗಿಡಗಳಿಂದ ಮುಚ್ಚಿ ಹೋಗಿದೆ
ಶ್ರೀರಂಗಪಟ್ಟಣದ ರೈಲ್ವೆ ನಿಲ್ದಾಣದ ಎದುರು, ಒಬೆಲಿಸ್ಕ್‌ ಸ್ಮಾರಕದ ಸಮೀಪ ಇರುವ ಗ್ಯಾರಿಸನ್‌ ಆಸ್ಪತ್ರೆ ಸ್ಮಾರಕ ಮುಳ್ಳು ಗಿಡಗಳಿಂದ ಮುಚ್ಚಿ ಹೋಗಿದೆ   

ಶ್ರೀರಂಗಪಟ್ಟಣ: ಕಲ್ಲು ಕಲ್ಲೂ ಕತೆ ಹೇಳುವ ಪಾರಂಪರಿಕ ಪಟ್ಟಣದಲ್ಲಿ ಗತ ವೈಭವ ಸಾರುವ ಸ್ಮಾರಕಗಳು ಒಂದೊಂದಾಗಿ ಕಣ್ಮರೆಯಾಗುತ್ತಿದ್ದು, ಇದೀಗ ಗ್ಯಾರಿಸನ್ ಹಾಸ್ಪಿಟಲ್‌ (ಸೈನಿಕರ ಆಸ್ಪತ್ರೆ) ಸ್ಮಾರಕ ಕೂಡ ಮುಚ್ಚಿ ಹೋಗುವ ಹಂತ ತಲುಪಿದೆ.

ದ್ವೀಪ ಪಟ್ಟಣದ ಪಶ್ಚಿಮ ಭಾಗದಲ್ಲಿ, ರೈಲ್ವೆ ನಿಲ್ದಾಣಕ್ಕೆ ಕೂಗಳತೆ ದೂರದಲ್ಲಿರುವ ಗ್ಯಾರಿಸನ್‌ ಹಾಸ್ಪಿಟಲ್‌ ಸ್ಮಾರಕದ ಸುತ್ತಲೂ ಮುಳ್ಳಿನ ಪೊದೆ ಬೆಳೆದಿವೆ. ಒಳಗೆ ಕಾಲಿಡಲು ಆಗದಷ್ಟು ಗಿಡ ಗಂಟಿಗಳು ದಟ್ಟವಾಗಿ ಬೆಳೆದಿವೆ. ಹಂದಿಗಳು ಆವಾಸ ಸ್ಥಾನ ಮಾಡಿಕೊಂಡಿವೆ. ಹಾವು, ಹಲ್ಲಿಗಳು ಹರಿದಾಡುತ್ತಿವೆ. ದಶಕದ ಹಿಂದೆ ಸ್ಪಷ್ಟವಾಗಿ ಗೋಚರಿಸುತ್ತಿದ್ದ ಈ ಸ್ಮಾರಕದ ಗೋಡೆಯ ಹೊರ ಭಾಗ ಮಾತ್ರ ಕಾಣುತ್ತಿದೆ.

ನಾಲ್ಕನೇ ಆಂಗ್ಲೋ– ಮೈಸೂರು ಯುದ್ಧ (1799)ದಲ್ಲಿ ಟಿಪ್ಪು ಸುಲ್ತಾನ್‌ ಬ್ರಿಟಿಷರ ಗುಂಡಿಗೆ ಬಲಿಯಾಗಿ ಶ್ರೀರಂಗಪ‍ಟ್ಟಣ ಪತನಗೊಂಡ ನಂತರ ಬ್ರಿಟಿಷ್‌ ಸೈನಿಕರ ತುಕಡಿ ಇಲ್ಲಿ ಉಳಿದಿತ್ತು. ಸುಮಾರು 6 ದಶಕಗಳ ಕಾಲ, ಅಂದರೆ 1860ರ ವರೆಗೆ ಯುರೋಪಿಯನ್‌ ಸೇನೆಯ ಅಧಿಕಾರಿಗಳು ಮತ್ತು ಸೈನಿಕರ ಪಡೆ ಈ ಊರಿನಲ್ಲಿ ಬೀಡು ಬಿಟ್ಟಿತ್ತು. ಇಲ್ಲಿ ಉಳಿದಿದ್ದ ಅಧಿಕಾರಿಗಳು, ಸೈನಿಕರು ಮತ್ತು ಅವರ ಕುಟುಂಬ ಸದಸ್ಯರ ಚಿಕಿತ್ಸೆಗಾಗಿ ಮೈಸೂರು ಸಂಸ್ಥಾನದಲ್ಲಿ ಸಹಯೋಗದಲ್ಲಿ ಬ್ರಿಟಿಷ್‌ ಆಡಳಿತ ಆಸ್ಪತ್ರೆಯನ್ನು ತೆರೆದಿತ್ತು. ಅದೇ ಗ್ಯಾರಿಸನ್ ಹಾಸ್ಪಿಟಲ್!

ADVERTISEMENT

ಪಟ್ಟಣದ ಸುತ್ತಲೂ ಇರುವ ಕಂದಕದಲ್ಲಿ ನೀರು ತುಂಬಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ ಮಲೇರಿಯಾ, ಕಾಲರಾ ಇತರೆ ಬೇನೆಗಳು ಶುರುವಾದವು. ರೋಗಿಗಳಿಗೆ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೂ ನೂರಾರು ಮಂದಿ ಯುರೋಪಿಯನ್ನರು ಅಸುನೀಗಿದರು. ರೋಗ ನಿಯಂತ್ರಣಕ್ಕೆ ಬಾರದ ಕಾರಣ ಯುರೋಪಿಯನ್ನರು ಈ ಪಟ್ಟಣವನ್ನು ತೊರೆದರು. ಅಂದಿನಿಂದ ಈ ಆಸ್ಪತ್ರೆ ಪಾಳು ಬಿದ್ದಿದ್ದು, ಅವಶೇಷಗಳು ಮಾತ್ರ ಉಳಿದಿವೆ.

ಈ ಆಸ್ಪತ್ರೆಯ ಒಳಗೆ ವಿಶಾಲ ಸಭಾಂಗಣ, ಬಾವಿಗಳು ಹಾಗೂ ಸುತ್ತಲೂ ಹತ್ತಾರು ಕೊಠಡಿಗಳು ಇದ್ದವು ಎಂಬುದಕ್ಕೆ ಕುರುಹುಗಳು ಈಗಲೂ ಉಳಿದಿವೆ. ಗ್ಯಾರಿಸನ್‌ ಸೆಮೆಟರಿ (ಯುರೋಪಿಯನ್ನರ ಸ್ಮಶಾನ) ದಲ್ಲಿರುವ ಸಮಾಧಿಗಳನ್ನು ಮೈಸೂರಿನ ಕ್ರೈಸ್ತ ಸಂಸ್ಥೆಯೊಂದು ನಿರ್ವಹಣೆ ಮಾಡುತ್ತಿದೆ. ಆದರೆ ಗ್ಯಾರಿಸನ್‌ ಆಸ್ಪತ್ರೆಗೆ ದಿಕ್ಕು, ದೆಸೆಯೇ ಇಲ್ಲದಂತಾಗಿದೆ.

‘ಗ್ಯಾರಿಸನ್‌ ಆಸ್ಪತ್ರೆ ಸ್ಮಾರಕ ಏಳೆಂಟು ವರ್ಷಗಳ ಹಿಂದೆ ಸ್ಪಷ್ಟವಾಗಿ ಕಾಣುತ್ತಿತ್ತು. ಪ್ರಾಂಗಣದಲ್ಲಿ ಸಲೀಸಾಗಿ ಓಡಾಡಬಹುದಾಗಿತ್ತು. ಆದರೆ ಈಗ ಮುಚ್ಚಿ ಹೋಗುವ ಸ್ಥಿತಿಯಲ್ಲಿದೆ. ವಿದೇಶಿ ಪ್ರವಾಸಿಗರು ಈ ಸ್ಮಾರಕ ನೋಡಲು ಹುಡುಕಾಡುವ ಸ್ಥಿತಿ ಬಂದಿದೆ. ಈ ಸ್ಮಾರಕ ಎಲ್ಲಿದೆ ಎಂಬುದು ಸ್ಥಳೀಯರಿಗೇ ಗೊತ್ತಿಲ್ಲ. ಪಟ್ಟಣದಲ್ಲಿರುವ ಶಸ್ತ್ರಾಗಾರಗಳನ್ನು ಜೀರ್ಣೋದ್ಧಾರ ಮಾಡಿರುವ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಗ್ಯಾರಿಸನ್‌ ಆಸ್ಪತ್ರೆ ಸ್ಮಾರಕವನ್ನು ನಿರ್ಲಕ್ಷಿಸಿದೆ. ಇದೇ ಧೋರಣೆ ಮುಂದುವರೆದರೆ ಮಹತ್ವದ ಸ್ಮಾರಕಗಳು ಕಣ್ಮರೆಯಾಗಲಿವೆ’ ಎಂದು ಸಮರ್ಪಣಾ ಟ್ರಸ್ಟ್‌ ಅಧ್ಯಕ್ಷ ಕೆ.ಎಸ್‌. ಜಯಶಂಕರ್‌ ಆತಂಕ ವ್ಯಕ್ತಪಡಿಸುತ್ತಾರೆ.

‘ಗ್ಯಾರಿಸನ್‌ ಆಸ್ಪತ್ರೆ ಸ್ಮಾರಕದ ಒಳಗೆ ಮತ್ತು ಹೊರಗೆ ಅಪಾರ ಪ್ರಮಾಣದ ಗಿಡಗಳು ಬೆಳೆದಿವೆ. ಸ್ಮಾರಕದ ಆವರಣದ ಸ್ವಚ್ಛತೆ ಮತ್ತು ಸಂರಕ್ಷಣೆಗೆ ಪೂರಕವಾದ ಕ್ರಿಯಾ ಯೋಜನೆ ರೂಪಿಸಲು ಸಿದ್ಧತೆ ನಡೆದಿದೆ. ಅನುದಾನ ದೊರೆತರೆ ಒಂದೆರಡು ತಿಂಗಳಲ್ಲಿ ಈ ಸ್ಮಾರಕಕ್ಕೆ ಕಾಯಕಲ್ಪ ನೀಡಲಾಗುವುದು’ ಎಂದು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಸಹಾಯಕ ಎಂಜಿನಿಯರ್‌ ಕೆ. ರವಿ ‘ಪ್ರಜಾವಾಣಿ’ಗೆ ‍ಪ್ರತಿಕ್ರಿಯಿಸಿದರು.

ಹಂದಿಗಳ ಆವಾಸ ಸ್ಥಾನ ಗೋಡೆ ಹೊರ ಭಾಗ ಮಾತ್ರ ಕಾಣುತ್ತಿದೆ ಬ್ರಿಟಿಷರು ಆರಂಭಿಸಿದ ಆಸ್ಪತ್ರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.