ADVERTISEMENT

ಶ್ರೀರಂಗಪಟ್ಟಣ| ತ್ಯಾಜ್ಯದ ರಾಶಿಗೆ ಬೆಂಕಿ: ಆಲೆಮನೆ, ಕಬ್ಬು ಬೆಳೆ ಭಸ್ಮ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 6:06 IST
Last Updated 23 ಜನವರಿ 2026, 6:06 IST
ಶ್ರೀರಂಗಪಟ್ಟಣ ತಾಲ್ಲೂಕಿನ ಕೆಂಗಾಲ್‌ಕೊ‍ಪ್ಪಲು ಬಳಿ ತ್ಯಾಜ್ಯದ ರಾಶಿ ಮತ್ತು ಆಲೆಮನೆಗೆ ಗುರುವಾರ ಬೆಂಕಿ ಬಿದ್ದಿದ್ದು, ಬೆಂಕಿ ಜ್ವಾಲೆ ವ್ಯಾಪಿಸಿತು
ಶ್ರೀರಂಗಪಟ್ಟಣ ತಾಲ್ಲೂಕಿನ ಕೆಂಗಾಲ್‌ಕೊ‍ಪ್ಪಲು ಬಳಿ ತ್ಯಾಜ್ಯದ ರಾಶಿ ಮತ್ತು ಆಲೆಮನೆಗೆ ಗುರುವಾರ ಬೆಂಕಿ ಬಿದ್ದಿದ್ದು, ಬೆಂಕಿ ಜ್ವಾಲೆ ವ್ಯಾಪಿಸಿತು   

ಶ್ರೀರಂಗಪಟ್ಟಣ: ತ್ಯಾಜ್ಯದ ರಾಶಿಗೆ ಬೆಂಕಿ ಬಿದ್ದ ಪರಿಣಾಮ ಆಲೆಮನೆ ಮತ್ತು ಪಕ್ಕದಲ್ಲಿದ್ದ ಕಬ್ಬು ಬೆಳೆ ಸುಟ್ಟು ಹೋಗಿರುವ ಘಟನೆ ತಾಲ್ಲೂಕಿನ ಕೆಂಗಾಲ್‌ಕೊಪ್ಪಲು ಗ್ರಾಮದ ಬಳಿ ಗುರುವಾರ ಮಧ್ಯಾಹ್ನ ನಡೆದಿದೆ.

ತಾಲ್ಲೂಕಿನ ದರಸಗುಪ್ಪೆ ಗ್ರಾಮದ ಕೆಂಪೇಗೌಡ ಎಂಬವರಿಗೆ ಸೇರಿದ ಆಲೆಮನೆ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಕೂಲಿ ಕಾರ್ಮಿಕರಿಗಾಗಿ ನಿರ್ಮಿಸಿದ್ದ ನಾಲ್ಕೈದು ಶೆಡ್‌ಗಳು ಕೂಡ ಸುಟ್ಟು ಹೋಗಿವೆ. ಆಲೆಮನೆಯ ಪಕ್ಕದಲ್ಲಿ ಬೆಳೆದಿದ್ದ ಕೆಂಗಾಲ್‌ಕೊಪ್ಪಲು ಗ್ರಾಮದ ಮರೀಗೌಡ ಅವರ ಕಬ್ಬು ಬೆಳೆಗೂ ಬೆಂಕಿಯ ಜ್ವಾಲೆ ಹರಡಿದ್ದು, ಅರ್ಧ ಎಕರೆ ಕಬ್ಬು ಬೆಳೆ ಮತ್ತು 5 ತೆಂಗಿನ ಮರಗಳು ಬೆಂದು ಹೋಗಿವೆ. ಬೆಂಕಿ ಬಿದ್ದ ಸಮಯದಲ್ಲಿ ಆಲೆಮನೆಯ ಒಳಗೆ ಇದ್ದ ಒಬ್ಬ ವ್ಯಕ್ತಿ ತಕ್ಷಣ ಹೊರಗೆ ದೌಡಾಯಿಸಿ ಅಪಾಯದಿಂದ ಪಾರಾಗಿದ್ದಾರೆ. ಅಗ್ನಿ ಶಾಮಕ ಸಿಬ್ಬಂದಿ ಸತತ ಎರಡು ತಾಸುಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು.

ಕೆಂಪೇಗೌಡ ಅವರು ಖಾಲಿ ಬಿಟ್ಟಿದ್ದ ತಮ್ಮ ಆಲೆಮನೆಯನ್ನು ಮೂರು ವರ್ಷಗಳ ಹಿಂದೆ ಮೈಸೂರಿನ ರೆಹಮಾನ್‌ ಎಂಬ ವ್ಯಕ್ತಿಗೆ ಬಾಡಿಗೆಗೆ ನೀಡಿದ್ದರು. ಬಾಡಿಗೆಗೆ ಪಡೆದಿದ್ದ ವ್ಯಕ್ತಿ ಆಲೆಮನೆಯ ಒಳಗೆ ಮತ್ತು ಹೊರಗೆ ನೂರಾರು ಟನ್‌ ತ್ಯಾಜ್ಯವನ್ನು ಸಂಗ್ರಹಿಸಿದ್ದರು. ಟೈರ್‌ಗಳು, ಪ್ಲಾಸ್ಟಿಕ್‌ ವಸ್ತುಗಳು, ಬಟ್ಟೆಗಳು, ಗಾಜಿನ ತ್ಯಾಜ್ಯವನ್ನು ಇಲ್ಲಿಗೆ ತಂದು ರಾಶಿ ಹಾಕಿದ್ದರು. ತ್ಯಾಜ್ಯದ ಗುಡ್ಡೆಗೆ ಬೆಂಕಿ ಹೊತ್ತಿಕೊಂಡಿದ್ದು ನಂತರ ಆಲೆಮೆನೆ ಮತ್ತು ಪಕ್ಕದ ಕಬ್ಬು ಬೆಳೆಗೆ ಬೆಂಕಿ ಆವರಿಸಿದೆ. ಬೆಂಕಿಯ ಜ್ವಾಲೆಯ ಜತೆಗೆ ನೂರಾರು ಅಡಿ ಎತ್ತರದವರೆಗೂ ದಟ್ಟ ಹೊಗೆ ಆವರಿಸಿತ್ತು. ಸ್ಥಳದಲ್ಲಿ ಅಕ್ಕಪಕ್ಕದ ಜನರು ಜಮಾಯಿಸಿದ್ದರು. ಈ ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.

ADVERTISEMENT

‘ಆಲಮನೆಯನ್ನು ಬಾಡಿಗೆಗೆ ಪಡೆದಿದ್ದ ವ್ಯಕ್ತಿ ಕೇರಳದಿಂದ ಲಾರಿಗಟ್ಟಲೆ ತ್ಯಾಜ್ಯವನ್ನು ಇಲ್ಲಿಗೆ ತಂದು ವಿಂಗಡಿಸಿ ಬೇರೆಡೆಗೆ ಕಳುಹಿಸುತ್ತಿದ್ದರು. ತ್ಯಾಜ್ಯದ ರಾಶಿಯಿಂದ ವಾಸನೆ ಬರುತ್ತಿರುವ ಬಗ್ಗೆ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದ್ದರೂ ಕ್ರಮ ವಹಿಸಿರಲಿಲ್ಲ. ಅಕ್ರಮವಾಗಿ ತ್ಯಾಜ್ಯ ಸಂಗ್ರಹ ಘಟಕ ನಡೆಸಲು ಅವಕಾಶ ನೀಡಿರುವ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು’ ಎಂದು ಗ್ರಾ.ಪಂ. ಸದಸ್ಯ ಮುರಳಿ ಒತ್ತಾಯಿಸಿದ್ದಾರೆ.

‘ತ್ಯಾಜ್ಯವನ್ನು ಅಕ್ರಮವಾಗಿ ಸಂಗ್ರಹಿಸಲಾಗಿತ್ತು ಎಂಬ ಮಾಹಿತಿ ತಿಳಿದು ಬಂದಿದೆ. ಈ ಸಂಬಂಧ ಕಂದಾಯ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಪಟ್ಟಣ ಠಾಣೆ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.