
ವೆಟ್‌ವೆಲ್ ಸ್ಥಳದಲ್ಲಿ ಒಂದು ತಾಸು ಪ್ರತಿಭಟನೆ | ವೆಟ್‌ವೆಲ್ ನಿರ್ಮಿಸಿದರೆ ಗಬ್ಬು ವಾಸನೆ ಸಮಸ್ಯೆ |ಎಂಜಿನಿಯರ್ ಬೀರೇಗೌಡ ತರಾಟೆಗೆ
ಶ್ರೀರಂಗಪಟ್ಟಣ: ಪಟ್ಟಣದ ಪಶ್ಚಿಮವಾಹಿನಿ ಬಳಿ, ಜನವಸತಿ ಸ್ಥಳದಲ್ಲಿ ವೆಟ್‌ವೆಲ್ ನಿರ್ಮಿಸಲಾಗುತ್ತಿದೆ ಎಂಬ ಹಿನ್ನೆಲೆಯಲ್ಲಿ ಸ್ಥಳೀಯರು ಬುಧವಾರ ಪ್ರತಿಭಟನೆ ನಡೆಸಿದರು.
ಪಶ್ಚಿಮವಾಹಿನಿಯ ರೈಲ್ವೆ ಹಳಿ ಮತ್ತು ಮೈಸೂರು ಒಡೆಯರ್ ವಂಶಸ್ಥರ ಸಮಾಧಿ ಸ್ಮಾರಕದ ನಡುವೆ ನಿರ್ಮಿಸುತ್ತಿರುವ ವೆಟ್‌ವೆಲ್ ಸ್ಥಳದಲ್ಲಿ ಒಂದು ತಾಸು ಪ್ರತಿಭಟನೆ ನಡೆಯಿತು. ಕಾಮಗಾರಿ ಮುಂದುವರಿಸದಂತೆ ಪ್ರತಿಭಟನಾಕಾರರು ಪಟ್ಟು ಹಿಡಿದರು. ಗುಂಡಿ ತೋಡುತ್ತಿದ್ದ ಯಂತ್ರಗಳನ್ನು ತಡೆದರು. ಸ್ಥಳದಲ್ಲಿದ್ದ ಎಂಜಿನಿಯರ್ ಬೀರೇಗೌಡ ಎಂಬವರನ್ನು ತರಾಟೆಗೆ ತೆಗೆದುಕೊಂಡರು. ಸ್ಥಳೀಯರ ಪ್ರತಿಭಟನೆ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಸ್ಥಗಿತಗೊಳಿಸಲಾಯಿತು.
‘ಪಶ್ಚಿಮವಾಹಿನಿ ಪ್ರಸಿದ್ಧ ಶ್ರದ್ಧಾ ಕೇಂದ್ರ. ಮಹಾತ್ಮ ಗಾಂಧಿ ಇತರ ಪ್ರಸಿದ್ಧ ವ್ಯಕ್ತಿಗಳ ಅಸ್ಥಿಯನ್ನು ಇಲ್ಲಿನ ಕಾವೇರಿ ನದಿಯಲ್ಲಿ ವಿಸರ್ಜನೆ ಮಾಡಲಾಗಿದೆ. ಪ್ರತಿ ದಿನ ನೂರಾರು ಯಾತ್ರಾರ್ಥಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿ ಸಾಕಷ್ಟು ಕುಟುಂಬಗಳು ಹಲವು ದಶಕಗಳಿಂದ ವಾಸ ಮಾಡುತ್ತಿವೆ. ವೆಟ್‌ವೆಲ್ ನಿರ್ಮಿಸಿದರೆ ಗಬ್ಬು ವಾಸನೆ ಬರಲಿದ್ದು, ವಾಸ ಮಾಡಲು ಕಿಷ್ಟವಾಗಲಿದೆ. ಹಾಗಾಗಿ ಉದ್ದೇಶಿತ ಕಾಮಗಾರಿಯನ್ನು ಕೈ ಬಿಡಬೇಕು’ ಎಂದು ಎನ್. ಸರಸ್ವತಿ, ಜ್ಯೋತಿ ಒತ್ತಾಯಿಸಿದರು.
‘ವೆಟ್‌ವೆಲ್ ನಿರ್ಮಿಸುತ್ತಿರುವ ಜಾಗವು ಪಾಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರಲಿದೆ. ಕೊಳಚೆ ನೀರು ಸಂಗ್ರಹಾಗಾರ ನಿರ್ಮಿಸದಂತೆ ಪಾಲಹಳ್ಳಿ ಗ್ರಾ.ಪಂ. ಕಚೇರಿಗೆ ದೂರು ನೀಡಲಾಗಿದೆ. ಆದರೆ ಶ್ರೀರಂಗಪಟ್ಟಣ ಪುರಸಭೆ ಇಲ್ಲಿ ವೆಟ್‌ವೆಲ್ ಕಾಮಗಾರಿ ಕೈಗೆತ್ತಿಕೊಂಡಿರುವುದು ಸರಿಯಲ್ಲ’ ಎಂದು ಹೇಳಿದರು.
‘ಪಶ್ಚಿಮವಾಹಿನಿಯ ಮನೆ, ಅಂಗಡಿ, ಹೋಟೆಲ್‌ಗಳ ಕೊಳಚೆ ನೀರು ಕಾವೇರಿ ನದಿಗೆ ಸೇರುವುದನ್ನು ತಡೆಯಲು ವೆಟ್‌ವೆಲ್ ನಿರ್ಮಿಸಲಾಗುತ್ತಿದೆ. ಇಲ್ಲಿಂದ ಚಂದಗಾಲು ರಸ್ತೆಯಲ್ಲಿರುವ ಘಟಕಕ್ಕೆ ಕೊಳಚೆ ನೀರನ್ನು ಸಾಗಿಸಲಾಗುತ್ತದೆ. ಆದರೆ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಕಾಮಗಾರಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದೇವೆ’ ಎಂದು ಕಾಮಗಾರಿ ಉಸ್ತುವಾರಿ ವಹಿಸಿರುವ ಎಂಜಿನಿಯರ್ ಬೋರೇಗೌಡ ತಿಳಿಸಿದರು. ಮುಖಂಡರಾದ ಅಭಿಷೇಕ್, ವಿಜಯ್, ರಾಜಣ್ಣ ಇದ್ದರು.
‘ಯಾರಿಗೂ ತೊಂದರೆ ಇಲ್ಲ'
'ಕಾವೇರಿ ನದಿಗೆ ಕೊಳಚೆ ನೀರು ಸೇರುವುದನ್ನು ತಡೆಯಲು ವೆಟ್ ವೆಲ್ ನಿರ್ಮಿಸಲಾಗುತ್ತಿದೆ. ಇದು ಎನ್‌ಜಿಟಿ ಯೋಜನೆಯಾಗಿದ್ದು ಹಣ ಕೂಡ ಬಿಡುಗಡೆಯಾಗಿದೆ. ಜನ ವಸತಿ ಸ್ಥಳದಿಂದ 150 ಮೀಟರ್ ದೂರದಲ್ಲಿ ಸರ್ಕಾರಿ ಖರಾಬು ಜಾಗದಲ್ಲಿ ವೆಟ್ ವೆಲ್ ನಿರ್ಮಿಸಲಾಗುತ್ತಿದೆ. ಇದರಿಂದ ಯಾರಿಗೂ ತೊಂದರೆ ಇಲ್ಲ' ಎಂದು ಪುರಸಭೆ ಮುಖ್ಯಾಧಿಕಾರಿ ಎಂ. ರಾಜಣ್ಣ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.