ADVERTISEMENT

ಎರಡು ಮನೆಗಳಿಗೆ ನುಗ್ಗಿದ ದುಷ್ಕರ್ಮಿಗಳು: ಚಿನ್ನಾಭರಣ, ನಗದು ದರೋಡೆ

ಮಹಿಳೆಯರನ್ನು ಬೆದರಿಸಿ ಕೃತ್ಯ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 7:58 IST
Last Updated 7 ನವೆಂಬರ್ 2025, 7:58 IST
ಶ್ರೀರಂಗಪಟ್ಟಣ ತಾಲ್ಲೂಕಿನ ಕೂಡಲಕುಪ್ಪೆ ಗ್ರಾಮದ ಸುವರ್ಣ ಮತ್ತು ಮೀನಾಕ್ಷಿ ಎಂಬವರ ಮನೆಗಳಲ್ಲಿ ಗುರುವಾರ ಮುಂಜಾನೆ ಕಳವು ಪ್ರಕರಣ ನಡೆದಿದ್ದು, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲಿಸಿದರು
ಶ್ರೀರಂಗಪಟ್ಟಣ ತಾಲ್ಲೂಕಿನ ಕೂಡಲಕುಪ್ಪೆ ಗ್ರಾಮದ ಸುವರ್ಣ ಮತ್ತು ಮೀನಾಕ್ಷಿ ಎಂಬವರ ಮನೆಗಳಲ್ಲಿ ಗುರುವಾರ ಮುಂಜಾನೆ ಕಳವು ಪ್ರಕರಣ ನಡೆದಿದ್ದು, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲಿಸಿದರು   

ಶ್ರೀರಂಗಪಟ್ಟಣ: ತಾಲ್ಲೂಕಿನ ಕೂಡಲಕುಪ್ಪೆ ಗ್ರಾಮದ ಎರಡು ಮನೆಗಳಿಗೆ ಗುರುವಾರ ಮುಂಜಾನೆ ನುಗ್ಗಿದ ದುಷ್ಕರ್ಮಿಗಳು ಚಿನ್ನಾಭರಣ ಮತ್ತು ನಗದು ದೋಚಿದ್ದಾರೆ.

ಗ್ರಾಮದ ಸುವರ್ಣ ಮತ್ತು ನಿಸರ್ಗ ಎಂಬವರ ಮನೆಗಳ ಬಾಗಿಲು ಮುರಿದು ಒಳ ನುಗ್ಗಿರುವ ದುಷ್ಕರ್ಮಿಗಳು 60 ಗ್ರಾಂ ಚಿನ್ನಾಭರಣ ಮತ್ತು ₹1.05ಲಕ್ಷ ಹಣ ಕದ್ದೊಯ್ದಿದ್ದಾರೆ. ಮೊದಲು ನಿಸರ್ಗ ಅವರ ಮನೆಗೆ ನುಗ್ಗಿದ್ದು, ನಿಸರ್ಗ ಮತ್ತು ಅವರ ತಾಯಿ ಮೀನಾಕ್ಷಿ ಅವರನ್ನು ಬೆದರಿಸಿ ಅವರ ಬಳಿ ಇದ್ದ 40 ಗ್ರಾಂ ಚಿನ್ನಾಭರಣ ಮತ್ತು ₹1 ಲಕ್ಷ ನಗದು ಹಾಗೂ ಈ ಮನೆಗೆ ಹೊಂದಿಕೊಂಡಿರುವ ಮೀನಾಕ್ಷಿ ಅವರ ನಾದಿನಿ ಸುವರ್ಣ ಅವರ ಮನೆಯ ಬಾಗಿಲು ಮುರಿದು 20 ಗ್ರಾಂ ಚಿನ್ನಾಭರಣ ಮತ್ತು ₹5 ಸಾವಿರ ಹಣ ದೋಚಿ ಪರಾರಿಯಾಗಿದ್ದಾರೆ.

ಗುರುವಾರ ಮುಂಜಾನೆ ಸುಮಾರು ಎರಡು ಗಂಟೆ ಸಮಯದಲ್ಲಿ ಈ ಕೃತ್ಯ ನಡೆದಿದೆ. ಮೂರು ಮಂದಿ ಮನೆಗೆ ನುಗ್ಗಿದ್ದರು. ಕೊಲೆ ಮಾಡುವುದಾಗಿ ಬೆದರಿಸಿ ಚಿನ್ನಾಭರಣ ಮತ್ತು ಹಣ ಕಸಿದುಕೊಂಡರು ಎಂದು ನಿಸರ್ಗ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಸುವರ್ಣ ಅವರೂ ದೂರು ನೀಡಿದ್ದಾರೆ ಎಂದು ಗ್ರಾಮಾಂತರ ಠಾಣೆ ಸಿಪಿಐ ಆನಂದಕುಮಾರ್‌ ಎಚ್ ತಿಳಿಸಿದ್ದಾರೆ.

ADVERTISEMENT

ಕೃತ್ಯ ನಡೆದ ಒಂದು ತಾಸಿನಲ್ಲಿ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಹೆಚ್ಚುವರಿ ಎಸ್ಪಿಗಳಾದ ತಿಮ್ಮಯ್ಯ, ಗಂಗಾಧರಸ್ವಾಮಿ, ಡಿವೈಎಸ್ಪಿ ಶಾಂತಮಲ್ಲಪ್ಪ, ಸಿಪಿಐ ಆನಂದಕುಮಾರ್‌ ಸ್ಥಳಕ್ಕೆ ಭೇಟಿ ನೀಡಿದ್ದರು. ಶ್ವಾನದಳ ಮತ್ತು ಬೆರಳಚ್ಚು ತಜ್ಞರನ್ನು ಕರೆಸಲಾಗಿತ್ತು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.