ADVERTISEMENT

ಅನುತ್ತೀರ್ಣರಾದ ಮಕ್ಕಳನ್ನು ಶಾಲೆಗೆ ನೋಂದಾಯಿಸಿ: ಜಿಲ್ಲಾಧಿಕಾರಿ ಕುಮಾರ

ಎಸ್ಸೆಸ್ಸೆಲ್ಸಿ ಪರೀಕ್ಷೆ–3ಕ್ಕೆ 3,845 ವಿದ್ಯಾರ್ಥಿಗಳು ನೋಂದಣಿ: ಜಿಲ್ಲಾಧಿಕಾರಿ ಕುಮಾರ

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 5:09 IST
Last Updated 4 ಜುಲೈ 2025, 5:09 IST
ಮಂಡ್ಯ ಜಿಲ್ಲಾ ಪಂಚಾಯಿತಿಯಲ್ಲಿ ಗುರುವಾರ ಎಸ್.ಎಸ್.ಎಲ್.ಸಿ ಪರೀಕ್ಷೆ -3 ಪೂರ್ವ ಸಿದ್ಧತಾ ಸಭೆಯು ಜಿಲ್ಲಾಧಿಕಾರಿ ಕುಮಾರ ಅಧ್ಯಕ್ಷತೆಯಲ್ಲಿ ನಡೆಯಿತು 
ಮಂಡ್ಯ ಜಿಲ್ಲಾ ಪಂಚಾಯಿತಿಯಲ್ಲಿ ಗುರುವಾರ ಎಸ್.ಎಸ್.ಎಲ್.ಸಿ ಪರೀಕ್ಷೆ -3 ಪೂರ್ವ ಸಿದ್ಧತಾ ಸಭೆಯು ಜಿಲ್ಲಾಧಿಕಾರಿ ಕುಮಾರ ಅಧ್ಯಕ್ಷತೆಯಲ್ಲಿ ನಡೆಯಿತು    

ಮಂಡ್ಯ: ಎಸ್.ಎಸ್.ಎಲ್.ಸಿ ಪರೀಕ್ಷೆ- 3 ಜುಲೈ ತಿಂಗಳಲ್ಲಿ ನಡೆಯಲಿದ್ದು, ಸದರಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳನ್ನು ಪುನಃ 10ನೇ ತರಗತಿಗೆ ನೋಂದಾಯಿಸಿ ಎಂದು ಜಿಲ್ಲಾಧಿಕಾರಿ ಕುಮಾರ ಹೇಳಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಗುರುವಾರ ಆಯೋಜಿಸಲಾಗಿದ್ದ ಎಸ್.ಎಸ್.ಎಲ್.ಸಿ ಪರೀಕ್ಷೆ -3 ಪೂರ್ವ ಸಿದ್ಧತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  ಜುಲೈ 5ರಿಂದ ಜುಲೈ 12ರವರೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆ -3 ನಡೆಯಲಿದೆ. ಜಿಲ್ಲೆಯಲ್ಲಿ 4,094 ಮಕ್ಕಳು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ. ಅವರ ಪೈಕಿ ಪ್ರಸ್ತುತ 3,845 ಮಕ್ಕಳು ಎಸ್.ಎಸ್.ಎಲ್.ಸಿ ಪರೀಕ್ಷೆ -3 ಅನ್ನು ಬರೆಯಲು ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಅನುತ್ತೀರ್ಣವಾಗುವ ವಿದ್ಯಾರ್ಥಿಗಳು ವಿದ್ಯಾಭ್ಯಾಸ ನಿಲ್ಲಿಸಿ, ಯಾವುದಾದರೂ ಉದ್ಯೋಗಕ್ಕೆ ಸೇರುವ ಸಾಧ್ಯತೆ ಇರುತ್ತದೆ. ಅನುತ್ತೀರ್ಣರಾದ ವಿದ್ಯಾರ್ಥಿಗಳ ಪಟ್ಟಿ ಪಡೆದು ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ವಿದ್ಯಾರ್ಥಿಗಳ ಪೋಷಕರ ಮನವೊಲಿಸಿ ಅವರನ್ನು ಪುನಃ ಹತ್ತನೇ ತರಗತಿಗೆ ದಾಖಲಿಸಿಕೊಂಡು ಮುಂದಿನ ವರ್ಷ ಪರೀಕ್ಷೆ ಬರೆಸಿದರೆ ಖಂಡಿತ ಉತ್ತೀರ್ಣರಾಗುತ್ತಾರೆ ಎಂದು ಅಭಿಪ್ರಾಯಪಟ್ಟರು. 

ADVERTISEMENT

ಪರೀಕ್ಷೆ-3ಕ್ಕೆ ಪರೀಕ್ಷೆ-2ರಲ್ಲಿ ಅನುತ್ತೀರ್ಣರಾದ ಅಂದಾಜು 249 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿರುವುದಿಲ್ಲ. ಸದರಿ ವಿದ್ಯಾರ್ಥಿಗಳ ಬಗ್ಗೆ ವಿಶೇಷ ನಿಗಾ ವಹಿಸಿ ಅವರನ್ನು ಸಹ ಶಾಲೆಗೆ ಕರೆತನ್ನಿ ಎಂದರು.

ಸದರಿ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ 50ಕ್ಕಿಂತ ಕಡಿಮೆ ಫಲಿತಾಂಶ ಬಂದಿರುವ ಶಾಲೆಗಳ ಮುಖ್ಯೋಪಾಧ್ಯಾಯರ ಸಭೆ ನಡೆಸಿ ಅವರಿಗೆ ಮುಂದಿನ ಸಾಲಿನಲ್ಲಿ ಫಲಿತಾಂಶ ಉತ್ತಮ‌ ಪಡಿಸಲು ಕಾರ್ಯಾಗಾರ ನಡೆಸಿ ಎಂದರು.

ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವರಾಮೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸೌಭಾಗ್ಯ, ಚಂದ್ರಶೇಖರ್, ಚಂದ್ರಕಾಂತ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Highlights - ಎಸ್ಸೆಸ್ಸೆಲ್ಸಿ ಪರೀಕ್ಷೆ–3ಕ್ಕೆ 12 ಪರೀಕ್ಷಾ ಕೇಂದ್ರಗಳು  ಕೇಂದ್ರಗಳಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ‘ಸ್ಟ್ರಾಂಗ್‌ ರೂಮ್‌’ಗೆ ಪೊಲೀಸ್‌ ಬಂದೋಬಸ್ತ್‌ 

‘ಲೋಪವಿಲ್ಲದಂತೆ ಪರೀಕ್ಷೆ ನಡೆಸಿ’

ಈ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆಯು 12 ಕೇಂದ್ರಗಳಲ್ಲಿ ನಡೆಯಲಿದ್ದು ಪರೀಕ್ಷೆಯಲ್ಲಿ ಯಾವುದೇ ಲೋಪವಾಗದಂತೆ ನಡೆಸಲು ಎಲ್ಲಾ ಕೇಂದ್ರಗಳಿಗೂ ಪ್ರೌಢಶಾಲೆಯ ಮುಖ್ಯ ಶಿಕ್ಷಕರನ್ನು ಅಧೀಕ್ಷಕರನ್ನಾಗಿ ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕುಮಾರ ತಿಳಿಸಿದರು. ಪರೀಕ್ಷೆಯ ದಿನದಂದು ಪ್ರಶ್ನಪತ್ರಿಕೆಯನ್ನು ಕೊಂಡೊಯ್ಯಲು ಮಾರ್ಗಾಧಿಕಾರಿಗಳನ್ನು ನೇಮಿಸಲಾಗಿದೆ ಜೊತೆಗೆ ಪೊಲೀಸ್ ಭದ್ರತೆಯನ್ನು ಕಲ್ಪಿಸಲಾಗಿದೆ. 12 ಪರೀಕ್ಷಾ ಕೇಂದ್ರಗಳಲ್ಲೂ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಲೈವ್ ವೆಬ್ ಕ್ಯಾಸ್ಟಿಂಗ್ ಮೂಲಕ‌ ವೀಕ್ಷಿಸಲಾಗುವುದು.  ಪರೀಕ್ಷಾ ಕೇಂದ್ರದ 200 ಮೀಟರ್ ಸುತ್ತಲಿನ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗುವುದು. ಪರೀಕ್ಷೆ ಮುಗಿದ ನಂತರ ಉತ್ತರ ಪತ್ರಿಕೆಗಳನ್ನು ಸಂರಕ್ಷಿಸಿಡಲು ‘ಸ್ಟ್ರಾಂಗ್ ರೂಮ್’ ನಿರ್ಮಿಸಲಾಗಿದ್ದು 24 ಗಂಟೆಗಳ ಕಾಲ ಪೊಲೀಸ್ ಬಂದೋಬಸ್ತ್ ನೀಡಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.