ADVERTISEMENT

ಮಂಡ್ಯ | ಎಸ್‌ಎಸ್‌ಎಲ್‌ಸಿ ಫಲಿತಾಂಶ ವೃದ್ಧಿಗೆ ಶ್ರಮಿಸಿ: ಜಿಲ್ಲಾಧಿಕಾರಿ ಕುಮಾರ

ಮುಖ್ಯ ಶಿಕ್ಷಕರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಕುಮಾರ ಸೂಚನೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 5:50 IST
Last Updated 7 ಅಕ್ಟೋಬರ್ 2025, 5:50 IST
ಶಾಲಾ ಶಿಕ್ಷಣ ಇಲಾಖೆಯಿಂದ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರಲ್ಲಿ ಸೋಮವಾರ ನಡೆದ 10ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ ವಿಶ್ಲೇಷಣೆ ಸಭೆ ಮತ್ತು ಜಿಲ್ಲಾ ಮಟ್ಟದ ಪ್ರೌಢಶಾಲಾ ಮುಖ್ಯ ಶಿಕ್ಷಕರ ಪ್ರಗತಿ ಪರಿಶೀಲನಾ ಸಭೆಯನ್ನು ಜಿಲ್ಲಾಧಿಕಾರಿ ಕುಮಾರ ಉದ್ಘಾಟಿಸಿದರು. ಸಿಇಒ ಕೆ.ಆರ್‌.ನಂದಿನಿ, ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು
ಶಾಲಾ ಶಿಕ್ಷಣ ಇಲಾಖೆಯಿಂದ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರಲ್ಲಿ ಸೋಮವಾರ ನಡೆದ 10ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ ವಿಶ್ಲೇಷಣೆ ಸಭೆ ಮತ್ತು ಜಿಲ್ಲಾ ಮಟ್ಟದ ಪ್ರೌಢಶಾಲಾ ಮುಖ್ಯ ಶಿಕ್ಷಕರ ಪ್ರಗತಿ ಪರಿಶೀಲನಾ ಸಭೆಯನ್ನು ಜಿಲ್ಲಾಧಿಕಾರಿ ಕುಮಾರ ಉದ್ಘಾಟಿಸಿದರು. ಸಿಇಒ ಕೆ.ಆರ್‌.ನಂದಿನಿ, ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು   

ಮಂಡ್ಯ: ‘ಶಾಲೆಗೆ ಬರುವ ಮಕ್ಕಳನ್ನು ಶಿಕ್ಷಕರು ತಮ್ಮ ಮಕ್ಕಳಂತೆ ಕಾಣಬೇಕು, ನಿಮ್ಮ ಮಕ್ಕಳ ಜೀವನ ರೂಪಿಸುವಲ್ಲಿ ನೀವು ಎಷ್ಟು ಮುಖ್ಯ ಪಾತ್ರ ವಹಿಸುತ್ತಿರೋ ಅಷ್ಟೇ ಪ್ರಮುಖವಾದ ಪಾತ್ರವನ್ನು ಶಾಲೆಗೆ ಬರುವ ವಿದ್ಯಾರ್ಥಿಗಳ ಜೀವನ ರೂಪಿಸಲು ಶ್ರಮ ವಹಿಸಬೇಕು’ ಎಂದು ಜಿಲ್ಲಾಧಿಕಾರಿ ಕುಮಾರ ಹೇಳಿದರು.

ಶಾಲಾ ಶಿಕ್ಷಣ ಇಲಾಖೆಯಿಂದ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರಲ್ಲಿ ಸೋಮವಾರ ಆಯೋಜಿಸಿದ್ದ 10ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ ವಿಶ್ಲೇಷಣೆ ಸಭೆ ಮತ್ತು ಜಿಲ್ಲಾ ಮಟ್ಟದ ಪ್ರೌಢಶಾಲಾ ಮುಖ್ಯ ಶಿಕ್ಷಕರ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಕಳೆದ ವರ್ಷ ರಾಜ್ಯದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆ 19ನೇ ಸ್ಥಾನ ಗಳಿಸಿತ್ತು. ಆದರೆ ಸದರಿ ವರ್ಷ 12ನೇ ಸ್ಥಾನ ಪಡೆದುಕೊಂಡಿದೆ. ಇದು ಶಿಕ್ಷಣ ಇಲಾಖೆಯ ಎಲ್ಲ ಸಿಬ್ಬಂದಿ, ಅಧಿಕಾರಿಗಳು ಹಾಗೂ ಶಾಲಾ ಶಿಕ್ಷಕರ ಪರಿಶ್ರಮದಿಂದ ಸಾಧ್ಯವಾಗಿದೆ ಎಂದು ಶ್ಲಾಘಿಸಿದರು.

ADVERTISEMENT

2,864 ವಿದ್ಯಾರ್ಥಿಗಳು ನಪಾಸು: ಜಿಲ್ಲೆಯಲ್ಲಿ ಒಟ್ಟು 472 ಪ್ರೌಢಶಾಲೆಗಳಿದ್ದು ಅದರಲ್ಲಿ ಸರ್ಕಾರಿ 251, ಅನುದಾನಿತ 92, ಅನುದಾನರಹಿತ 132 ಪ್ರೌಢಶಾಲೆಗಳಿವೆ. ಸದರಿ ವರ್ಷದ ಎಸ್‌ಎಸ್‌ಎಲ್‌ಸಿ ರಾಜ್ಯದ ಫಲಿತಾಂಶ ಶೇ 66.14 ಇದ್ದರೆ ಜಿಲ್ಲೆಯದ್ದು ಶೇ 69.26 ಇದೆ. ಎಸ್‌ಎಸ್‌ಎಲ್‌ಸಿ– 3ನೇ ಹಂತದ ಪರೀಕ್ಷೆ ನಡೆಸಿದರೂ 2024-25ನೇ ಸಾಲಿನಲ್ಲಿ ಜಿಲ್ಲೆಯ 2,864 ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುವುದು ಯೋಚಿಸಬೇಕಿರುವ ಸಂಗತಿ ಎಂದು ಅಭಿಪ್ರಾಯಪಟ್ಟರು.

ಮುಖ್ಯಶಿಕ್ಷಕರಿಗೆ ನೋಟಿಸ್‌: ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಶೇ40 ಕ್ಕಿಂತ ಕಡಿಮೆ ಫಲಿತಾಂಶ ಬಂದಿರುವ ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರನ್ನು ಕರೆಸಿ ಸಭೆ ನಡೆಸಬೇಕು. ಈಗಾಗಲೇ ಶೇ 40ಕ್ಕಿಂತ ಕಡಿಮೆ ಫಲಿತಾಂಶ ಪಡೆದಿರುವ ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರಿಗೆ ನೋಟಿಸ್ ನೀಡಲಾಗಿದೆ. ಜಿಲ್ಲೆಯಲ್ಲಿ ಶೂನ್ಯ ಫಲಿತಾಂಶ ಕೊಟ್ಟಿರುವ ಎರಡು ಶಾಲೆಗಳಿವೆ. ಇವೆಲ್ಲವನ್ನೂ ಗಮನಿಸಿದರೆ ಶಿಕ್ಷಕರಲ್ಲಿ ಇಚ್ಛಾಶಕ್ತಿಯ ಕೊರತೆ ಕಾಣುತ್ತದೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್. ನಂದಿನಿ ಮಾತನಾಡಿ, ‍‘ಉಪವಿಭಾಗದ ಮಟ್ಟದಲ್ಲಿ ಶೇ 40ಕ್ಕಿಂತ ಕಡಿಮೆ ಫಲಿತಾಂಶ ಹೊಂದಿರುವ ಶಾಲೆಗಳು ಹೇಗೆ ತಮ್ಮ ಫಲಿತಾಂಶವನ್ನು ವೃದ್ಧಿಸಬಹುದು ಎಂಬ ಬಗ್ಗೆ ಕ್ರಿಯಾಯೋಜನೆ ಸಿದ್ಧಪಡಿಸಿ. ಗಣಿತ, ವಿಜ್ಞಾನ, ಸಮಾಜ ವಿಜ್ಞಾನದಂತಹ ವಿಷಯಗಳಿಗೆ ನೀಡುವ ಪ್ರಾಮುಖ್ಯತೆಯಷ್ಟೇ ಭಾಷಾ ವಿಷಯಗಳಿಗೂ ನೀಡಿ ಎಂದು ಸಲಹೆ ನೀಡಿದರು.

ನಂತರ 2022-23 ಹಾಗೂ 2023-2024ನೇ ಸಾಲಿನಲ್ಲಿ ಶೇ 100 ಫಲಿತಾಂಶ ಪಡೆದ ಜಿಲ್ಲೆಯ ಎಲ್ಲ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರಿಗೆ ಪ್ರಶಸ್ತಿ ಫಲಕವನ್ನು ವಿತರಣೆ ಮಾಡಲಾಯಿತು. 

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಹಾದೇವ, ಸೌಭಾಗ್ಯ, ಜಿಲ್ಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಪುಟ್ಟರಾಜು, ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕರಾದ ಸಿದ್ದರಾಜು ಸೇರಿದಂತೆ ಪ್ರೌಢಶಾಲೆಯ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕರಿಗೆ ಪ್ರಶಸ್ತಿ ಫಲಕ ವಿತರಣೆ ಕಳೆದ ವರ್ಷ ಜಿಲ್ಲೆಗೆ 19ನೇ ಸ್ಥಾನ ಸದರಿ ವರ್ಷ 12ನೇ ಸ್ಥಾನ

ಕಲಿಕಾ ಹಂತದಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಬಗ್ಗೆ ವಿಶೇಷ ಗಮನ ಹರಿಸಲಾಗಿದೆ. ನಿರಂತರ ಪರಿಹಾರ ಬೋಧನೆ ವಿಶೇಷ ತರಗತಿ ಸಂಭವನೀಯ ಪ್ರಶ್ನೆಗಳನ್ನು ಅಭ್ಯಾಸ ಮಾಡಿಸಲಾಗುತ್ತಿದೆ
– ಲೋಕೇಶ್ ಡಿಡಿಪಿಐ ಮಂಡ್ಯ

‘ಮಾತೃಭಾಷೆಯಲ್ಲೇ 3187 ವಿದ್ಯಾರ್ಥಿಗಳು ನಪಾಸು’

 ‘ನಮ್ಮ ಮಾತೃ ಭಾಷೆಯಾದ ಕನ್ನಡದಲ್ಲೇ ಸರಿಸುಮಾರು 3187 ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುವುದು ದುಃಖದ ಸಂಗತಿ. ವರದಿಯ ಪ್ರಕಾರ ಸರ್ಕಾರಿ ಶಾಲೆಗಳ ಫಲಿತಾಂಶಕ್ಕಿಂತ ಅನುದಾನಿತ ಶಾಲೆಗಳ ಫಲಿತಾಂಶ ಕಡಿಮೆ ಇದೆ. ಅನುದಾನಿತ ಶಾಲೆಗಳ ಕುರಿತು ಅಧಿಕಾರಿಗಳು ವಿಶೇಷ ನಿಗಾ ವಹಿಸಬೇಕು. ಅನುದಾನಿತ ಶಾಲೆಗಳ ಆಡಳಿತಾಧಿಕಾರಿಗಳ ಮೇಲೂ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಕುಮಾರ ಸೂಚಿಸಿದರು. 

ಆಪ್ತ ಸಮಾಲೋಚಕರ ನೇಮಕ ‘

ವಿದ್ಯಾರ್ಥಿಗಳು ಮಾನಸಿಕ ಒತ್ತಡಕ್ಕೆ ಒಳಗಾಗಿ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಮಕ್ಕಳ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಅತಿ ಮುಖ್ಯ. ಸುಪ್ರೀಂ ಕೋರ್ಟ್ ಆದೇಶದಂತೆ ಪ್ರತಿ ಶಾಲೆಗಳಲ್ಲಿ ಮಾನಸಿಕ ಒತ್ತಡ ಹಾಗೂ ನಕಾರಾತ್ಮಕ ಭಾವನೆ ಹೊಂದಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿ ಶಾಲೆಯಲ್ಲಿ ತರಬೇತಿ ಪಡೆದ ಒಬ್ಬ ಶಿಕ್ಷಕರನ್ನು ಆಪ್ತ ಸಮಾಲೋಚಕರಾಗಿ ನೇಮಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಕುಮಾರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.