ನಾಗಮಂಗಲ ಪಟ್ಟಣದಲ್ಲಿ ಸುಮಾರು ₹10 ಕೋಟಿ ವೆಚ್ಚದಲ್ಲಿ ಎಬಿ ಕೇಬಲ್ ಅಳವಡಿಕೆ ಕಾಮಗಾರಿಗೆ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ ನೀಡಿದರು
ನಾಗಮಂಗಲ: ‘ತಾಲ್ಲೂಕಿನಲ್ಲಿ ಅಂಚೆಚಿಟ್ಟನಹಳ್ಳಿ, ಬುರುಡುಗುಂಟೆ, ಮಾದಿಹಳ್ಳಿ, ಗೊಂಡೇನಹಳ್ಳಿ, ಬಾಳನಕೊಪ್ಪಲು ಸೇರಿದಂತೆ ಇರುಬನಹಳ್ಳಿಗಳಲ್ಲಿ ಆರು ಹೊಸ ವಿದ್ಯುತ್ ವಿತರಣಾ ಕೇಂದ್ರಗಳನ್ನು ಸ್ಥಾಪಿಸಲು ಕ್ರಮವಹಿಸಲಾಗಿದೆ’ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಪಟ್ಟಣದ ಸೌಮ್ಯಕೇಶವ ಸ್ವಾಮಿ ದೇವಾಲಯದ ಬಳಿ ಸೋಮವಾರ ಪಟ್ಟಣದ ವ್ಯಾಪ್ತಿಯಲ್ಲಿ ಆಯ್ದ ಸ್ಥಳಗಳಲ್ಲಿ ಸುಮಾರು ₹ 10 ಕೋಟಿ ವೆಚ್ಚದಲ್ಲಿ ಎಬಿ ಕೇಬಲ್ ಅಳವಡಿಕೆ ಕಾಮಗಾರಿ ಮತ್ತು ಮಂಡ್ಯ ರಸ್ತೆಯಲ್ಲಿ ಅಲ್ಪಸಂಖ್ಯಾತರ ಇಲಾಖೆಯ ವತಿಯಿಂದ ₹ 2 ಕೋಟಿ ವೆಚ್ಚದಲ್ಲಿ ಮುಸ್ಲಿಂ ಕಾಲೊನಿಗಳಿಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಚಾಲನೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಚುನಾವಣೆಯಲ್ಲಿ ಸೋತ ಅವಧಿಯಲ್ಲಿ ತಾಲ್ಲೂಕಿನಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ಕೊನೆಯ ಪಕ್ಷ ಅನುಮೋದನೆ ಸಿಕ್ಕಿದ್ದ ವಿದ್ಯುತ್ ವಿತರಣಾ ಕೇಂದ್ರವನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ತಾಲ್ಲೂಕು ಕ್ರೀಡಾಂಗಣದಲ್ಲಿ ಈಗಾಗಲೇ ಒಂದು ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದ್ದು, ಮತ್ತೆ ₹ 50 ಲಕ್ಷದ ಅವಶ್ಯಕತೆಯಿದೆ ಎಂದು ತಿಳಿಸಿದ್ದು, ಅದನ್ನು ಬಿಡುಗಡೆ ಮಾಡುವ ಕೆಲಸವನ್ನು ಮಾಡುತ್ತೇನೆ’ ಎಂದರು.
‘ತಾಲ್ಲೂಕಿನಲ್ಲಿ 150 ಹಳ್ಳಿಗಳಲ್ಲಿ ಹೈಮಾಸ್ಟ್ ವಿದ್ಯುತ್ ದೀಪಗಳನ್ನು ಅಳವಡಿಸಲು ಕ್ರಮವಹಿಸಿದ್ದೇನೆ. ತಾಲ್ಲೂಕಿನಲ್ಲಿ ಆಗುವ ಅಭಿವೃದ್ಧಿ ಕಾಮಗಾರಿಗಳಿಗೆ ಪೂಜೆ ನೆರವೇರಿಸುವುದು ಮತ್ತು ಕೆಲಸ ಮಾಡುತ್ತಿದ್ದೇನೆ ಎಂದು ತೋರಿಸಿಕೊಳ್ಳುವುದು ನನಗೆ ಮುಜುಗರವಾಗುತ್ತದೆ. ಆದ್ದರಿಂದ ಕೃಷಿ ಇಲಾಖೆಯಲ್ಲಿ ರಾಜ್ಯದಾದ್ಯಂತ ಕೈತುಂಬ ಕೆಲಸವಿದ್ದು, ಉತ್ತಮವಾಗಿ ಕೆಲಸ ಮಾಡುವ ಕಡೆಗೆ ಆದ್ಯತೆ ನೀಡುತ್ತೇನೆ’ ಎಂದರು.
‘ತಾಲ್ಲೂಕಿನಲ್ಲಿ ಏನೆಲ್ಲಾ ಅಭಿವೃದ್ಧಿ ಕೆಲಸಗಳಾಗಬೇಕು ಅವುಗಳಿಗೆ ಅನುದಾನವನ್ನು ತಂದು ಕೆಲಸ ಮಾಡುತ್ತೇನೆ. ಜೊತೆಗೆ ತಾಲ್ಲೂಕು ಹಳ್ಳಿಗಳಿಗೆ ಕುಡಿಯುವ ನೀರಿಗಾಗಿ ಸಮಗ್ರ ಅಭಿವೃದ್ಧಿ ಮಾಡುತ್ತಿದ್ದೇವೆ. ಗೂಡೆಹೊಸಹಳ್ಳಿ ಏತ ನೀರಾವರಿ ಯೋಜನೆಯಿಂದ ಕೆ.ಆರ್.ಪೇಟೆ, ನಾಗಮಂಗಲ, ಚನ್ನರಾಯಪಟ್ಟಣ ತಾಲ್ಲೂಕುಗಳಿಗೆ ಕೆರೆ ತುಂಬಿಸುವ ನೀರಾವರಿ ಯೋಜನೆಯನ್ನು ಹಿಂದೆ ಅಧಿಕಾರದಲ್ಲಿದ್ದವರು ಪೂರ್ಣ ಮಾಡಲು ಸಾಧ್ಯವಾಗಲಿಲ್ಲ. ಈಗ ಈ ಯೋಜನೆಯನ್ನು ಪೂರ್ಣಗೊಳಿಸಲು ಹೆಚ್ಚುವರಿಯಾಗಿ ₹ 130 ಕೋಟಿ ಅನುದಾನವನ್ನು ಬಿಡುಗಡೆ ಮಾಡಿಸಿದ್ದೇನೆ’ ಎಂದರು.
ರಸ್ತೆ ಅಭಿವೃದ್ಧಿ ಕಾಮಗಾರಿಯ ಕುರಿತು ಮುಸ್ಲಿಂ ವಾರ್ಡ್ ನಿವಾಸಿಗಳು ಸರ್ವೇ ಮಾಡಿಸಿದ ನಂತರವೇ ರಸ್ತೆ ಕಾಮಗಾರಿ ಆರಂಭಿಸಿ ಎಂದು ಸಚಿವರಿಗೆ ಮನವಿ ಮಾಡಿದರು.
ಅದಕ್ಕೆ ಸ್ಪಂದಿಸಿದ ಸಚಿವರು ಪುರಸಭೆ ಮುಖ್ಯಾಧಿಕಾರಿಗೆ ಸರ್ವೇ ಮಾಡಿಸಿ ನಂತರ ಕಾಮಗಾರಿಗೆ ಕ್ರಮವಹಿಸುವಂತೆ ಸೂಚನೆ ನೀಡಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮುಂದಿನ ತಾ.ಪಂ ಮತ್ತು ಜಿ.ಪಂ ಚುನಾವಣೆಗಳ ಕುರಿತು ಚರ್ಚೆ ನಡೆಸಿದರು.
ಮನ್‌ಮುಲ್ ನಿರ್ದೇಶಕರಾದ ಅಪ್ಪಾಜಿಗೌಡ, ಲಕ್ಷ್ಮೀನಾರಾಯಣ್, ಪುರಸಭೆ ಅಧ್ಯಕ್ಷ ಅಲಿ ಅನ್ಸರ್ ಪಾಷಾ, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್, ಸಚಿನ್ ಚಲುವರಾಯಸ್ವಾಮಿ, ಮದಲಹಳ್ಳಿ ಸಂಪತ್, ಮಕ್ಬೂಲ್ ಅಹಮದ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.