ADVERTISEMENT

ಕಲ್ಲು ಗಣಿಗಾರಿಕೆಯಿಂದ ಮನೆ ಬಿರುಕು

ತಾಲ್ಲೂಕು ಕಚೇರಿ ಮುಂದೆ ಹಸು ಕಟ್ಟಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 4:44 IST
Last Updated 18 ಡಿಸೆಂಬರ್ 2025, 4:44 IST
ಶ್ರೀರಂಗಪಟ್ಟಣ ತಾಲ್ಲೂಕಿನ ಜಕ್ಕನಹಳ್ಳಿ ಗ್ರಾಮದ ರೈತ ಮನೋಜ್‌ ತಮ್ಮ ಬುಧವಾರ ಸಂಜೆ ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ತಮ್ಮ ಹಸುಗಳನ್ನು ಕಟ್ಟಿ ಪ್ರತಿಭಟನೆ ನಡೆಸಿದರು
ಶ್ರೀರಂಗಪಟ್ಟಣ ತಾಲ್ಲೂಕಿನ ಜಕ್ಕನಹಳ್ಳಿ ಗ್ರಾಮದ ರೈತ ಮನೋಜ್‌ ತಮ್ಮ ಬುಧವಾರ ಸಂಜೆ ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ತಮ್ಮ ಹಸುಗಳನ್ನು ಕಟ್ಟಿ ಪ್ರತಿಭಟನೆ ನಡೆಸಿದರು   

ಶ್ರೀರಂಗಪಟ್ಟಣ: ಕಲ್ಲು ಗಣಿಗಾರಿಕೆಗಾಗಿ ನಡೆಸುವ ಸ್ಫೋಟದಿಂದ ತೋಟದ ಮನೆಗೆ ಕಲ್ಲು ಬೀಳುತ್ತಿದ್ದು, ಮನೆ ಬಿರುಕು ಬಿಟ್ಟಿದೆ. ಕೃಷಿ ಜಮೀನಿನ ಪಕ್ಕದಲ್ಲಿ ನಡೆಯುತ್ತಿರುವ ಕಲ್ಲುಗಾರಿಕೆ, ಜಲ್ಲಿ ಕ್ರಷರ್‌ ಮತ್ತು ಡಾಂಬರು ಘಟಕಗಳನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ಜಕ್ಕನಹಳ್ಳಿ ಗ್ರಾಮದ ರೈತ ಮನೋಜ್‌ ಅಲಿಯಾಸ್ ಕಂಠಿ ತಮ್ಮ ಹಸುಗಳನ್ನು ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ಕಟ್ಟಿ ಬುಧವಾರ ಸಂಜೆ ಪ್ರತಿಭಟನೆ ನಡೆಸಿದರು.

ತಾಲ್ಲೂಕು ಕಚೇರಿಯ ದ್ವಾರದಲ್ಲಿ ಎರಡು ಹಸುಗಳನ್ನು ಕಟ್ಟಿ ತಮ್ಮ ಪತ್ನಿ ಮತ್ತು ಮಗುವಿನ ಜತೆ ಪ್ರತಿಭಟಿಸಿದರು. ಕಲ್ಲು ಗಣಿಗಾರಿಕೆ, ಜಲ್ಲಿ ಕ್ರಷರ್‌ ಮತ್ತು ಡಾಂಬರು ಘಟಕಗಳಿಂದ ತೊಂದರೆ ಉಂಟಾಗುತ್ತಿದ್ದು, ಎರಡು ವಾರದ ಹಿಂದೆಯೇ ಅಧಿಕಾರಿಗಳಿಗೆ ದೂರು ನೀಡಿದ್ದೇನೆ. ಆದರೂ ಕಲ್ಲು ಬಂಡೆ ಸ್ಫೋಟ ತಡೆಯಲು ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಅಕ್ರಮ ಚಟುವಟಿಕೆಗಳು ಅಡೆತಡೆಯಿಲ್ಲದೆ ನಡೆಯುತ್ತಿವೆ ಎಂದು ದೂರಿದರು.

‘ಜಕ್ಕನಹಳ್ಳಿ ಗ್ರಾಮದ ಸ.ನಂ. 83ರಲ್ಲಿ ಕಲ್ಲು ಗಣಿಗಾರಿಕೆ ನಡೆಸುವವರು ಕಲ್ಲು ಬಂಡೆಯನ್ನು ದೊಡ್ಡ ಪ್ರಮಾಣದಲ್ಲಿ ಬಂಡೆಗಳನ್ನು ಸ್ಫೋಟಿಸುತ್ತಿದ್ದಾರೆ. ಇದರಿಂದ ನಿದ್ರೆ ಮಾಡಲು ಆಗುತ್ತಿಲ್ಲ. ಹಸುವಿನ ಮೇಲೆ ಕಲ್ಲು ಬಿದ್ದು ನನ್ನ ಒಂದು ಹಸು ಮೃತಪಟ್ಟಿದೆ. ಕಲ್ಲು ಗಣಿ ಮತ್ತು ಜಲ್ಲಿ ಕ್ರಷರ್‌ಗಳಿಂದ ಬರುವ ಅಪಾಯಕಾರಿ ದೂಳಿನಿಂದ ಜಾನುವಾರುಗಳಿಗೆ ಮೇವು ಸಿಗುತ್ತಿಲ್ಲ. ನನ್ನ ಪತ್ನಿ ಮತ್ತು ಮಗು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಯಾವಾಗ ಕಲ್ಲು ಬೀಳುತ್ತದೆಯೋ ಎಂಬ ಭೀತಿಯಿಂದ ಜೀವ ಕೈಯಲ್ಲಿಡಿದು ಬದುಕುತ್ತಿದ್ದೇವೆ. ಸ್ಫೋಟ ನಡೆಸಬೇಡಿ ಎಂದು ಕೇಳಲು ಹೋದರೆ ಕಲ್ಲು ಗಣಿ ಮಾಲೀಕರು ಜೀವ ಬೆದರಿಕೆ ಒಡ್ಡುತ್ತಿದ್ದಾರೆ’ ಎಂದು ಸಮಸ್ಯೆ ತೋಡಿಕೊಂಡರು.

ADVERTISEMENT

ಮನೋಜ್ ಅವರ ಅಹವಾಲು ಆಲಿಸಿದ ಪಟ್ಟಣ ಠಾಣೆ ಪೊಲೀಸರು, ಗುರುವಾರ ಸ್ಥಳ ಪರಿಶೀಲನೆ ನಡೆಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.