ADVERTISEMENT

ಮಂಡ್ಯ: ಮೈಷುಗರ್‌ ಉಳಿವಿಗಾಗಿ ರೈತ ಜಾಗೃತಿ ಯಾತ್ರೆ ಇಂದಿನಿಂದ

130 ಹಳ್ಳಿಗಳಲ್ಲಿ ಸಂಚಾರ, ಪ್ರತಿ ರೈತರಿಂದ ₹ 1 ಸಂಗ್ರಹಿಸಿ ಸರ್ಕಾರಕ್ಕೆ ನೀಡಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2020, 12:49 IST
Last Updated 9 ಮಾರ್ಚ್ 2020, 12:49 IST
ಮೈಷುಗರ್‌ ಕಾರ್ಖಾನೆ (ಸಂಗ್ರಹ ಚಿತ್ರ)
ಮೈಷುಗರ್‌ ಕಾರ್ಖಾನೆ (ಸಂಗ್ರಹ ಚಿತ್ರ)   

ಮಂಡ್ಯ: ‘ರೈತ ಮತ್ತು ಕನ್ನಡ ಸಂಘಟನೆಗಳ ಒಕ್ಕೂಟದ ವತಿಯಿಂದ ಮೈಷುಗರ್‌ ಕಾರ್ಖಾನೆ ಉಳಿವಿಗಾಗಿ ಮಾರ್ಚ್‌ 10ರಿಂದ ಕಾರ್ಖಾನೆ ವ್ಯಾಪ್ತಿಯ 130 ಹಳ್ಳಿಗಳಲ್ಲಿ ರೈತ ಜಾಗೃತಿ ಯಾತ್ರೆ ಹಮ್ಮಿಕೊಳ್ಳಲಾಗಿದೆ‘ ಎಂದು ಸಾಮಾಜಿಕ ಹೋರಾಟಗಾರ ಡಾ.ಎಚ್‌.ಎನ್‌.ರವೀಂದ್ರ ಸೋಮವಾರ ಹೇಳಿದರು.

‘ಪ್ರತಿ ರೈತರಿಂದ ತಲಾ ₹ 1 ಸಂಗ್ರಹಿಸಿ, ಸರ್ಕಾರಕ್ಕೆ ನೀಡಿ ಕಾರ್ಖಾನೆಯನ್ನು ಖಾಸಗೀಕರಣಗೊಳಿಸದೇ ಸರ್ಕಾರಿ ಸ್ವಾಮ್ಯದಲ್ಲೇ ಉಳಿಸಿಕೊಳ್ಳಬೇಕು ಎಂದು ಒತ್ತಾಯ ಮಾಡಲಾಗುವುದು’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ರಾಜ್ಯ ಸರ್ಕಾರದಿಂದ ಕಾರ್ಖಾನೆ ಪ್ರಾರಂಭಿಸುವ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಮುಂದೆ ಬರುವ ಕಬ್ಬು ಅರೆಯುವ ಹಂಗಾಮಿಗೆ ಕಾರ್ಖಾನೆ ಆರಂಭಿಸುವುದು ಅನಿವಾರ್ಯವಾಗಿದೆ. ಇದಕ್ಕಾಗಿ ಜಾಗೃತಿ ಯಾತ್ರೆ, ಜಾಥಾ ಹಮ್ಮಿಕೊಳ್ಳಲಾಗಿದೆ. ಸರ್ಕಾರ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಮಾರ್ಚ್‌ 20ರಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು’ ಎಂದರು.

ADVERTISEMENT

‘ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲೇ ಉಳಿಸಿಕೊಳ್ಳಲು ಹಣಕಾಸಿನ ತೊಂದರೆ ಎದುರಾಗಿದ್ದರೆ, ರೈತರೇ ಹಣ ಸಂಗ್ರಹಿಸಿ ನೀಡುತ್ತೇವೆ. ಜೊತೆಗೆ ನಮ್ಮ ಜಮೀನುಗಳನ್ನು ಅಡ ಇಟ್ಟುಕೊಂಡು, ₹ 50ಕೋಟಿ ಸಾಲದೊಂದಿಗೆ ಕಾರ್ಖಾನೆ ಪ್ರಾರಂಭಿಸಬಹುದು. ದಕ್ಷ ಅಧಿಕಾರಿ ನೇಮಿಸಿದರೆ ಕಾರ್ಖಾನೆ ಖಂಡಿತಾ ಉಳಿಯುತ್ತದೆ’ ಎಂದರು.

‘ಮಾರ್ಚ್‌ 10ರಂದು ಬೆಳಿಗ್ಗೆ 11.05ಕ್ಕೆ ಮೈಷುಗರ್‌ ಕಾರ್ಖಾನೆಯ ಆವರಣದಲ್ಲಿ ಯಾತ್ರೆ ಪ್ರಾರಂಭವಾಗಿ ನಗರದಾದ್ಯಂತ ಜಾಥಾ ನಡೆಯಲಿದೆ. ಮಾರ್ಚ್‌ 11, 12ರಂದು ದುದ್ದ ಹೋಬಳಿ, ಮಾರ್ಚ್‌ 13‌, 14ರಂದು ಕೆರಗೋಡು ವ್ಯಾಪ್ತಿ, ಮಾರ್ಚ್‌ 15ರಂದು ಭಾರತೀನಗರ ರಸ್ತೆ, ಮಾರ್ಚ್‌ 16ರಂದು ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಸುತ್ತಮುತ್ತಲ ಹಳ್ಳಿಗಳಲ್ಲಿ, ಮಾರ್ಚ್‌ 17, 18ರಂದು ಕೊತ್ತತ್ತಿ ಹೋಬಳಿ ವ್ಯಾಪ್ತಿಯ ಹಳ್ಳಿಗಳಲ್ಲಿ ಜಾಗೃತಿ ಜಾಥಾ ನಡೆಯಲಿದೆ’ ಎಂದರು.

ಮೈಷುಗರ್‌, ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು 40ವರ್ಷಗಳ ಅವಧಿಗೆ ಖಾಸಗಿಯವರಿಗೆ ಗುತ್ತಿಗೆ ನೀಡುವ ಸರ್ಕಾರ ಕ್ರಮ ಖಂಡಿಸುತ್ತೇವೆ. ಸರ್ಕಾರಿ ಸ್ವಾಮ್ಯದಲ್ಲೇ ಕಾರ್ಖಾನೆ ಮುಂದುವರಿಯಬೇಕು. ಇಲ್ಲದಿದ್ದರೆ ರೈತರು ಜಿಲ್ಲೆಯಾದ್ಯಂತ ಉಗ್ರ ಹೋರಾಟ ನಡೆಸಲಿದ್ದಾರೆ’ ಎಂದು ಹೇಳಿದರು.

ಕಬ್ಬು ನಿಯಂತ್ರಣ ಮಂಡಳಿ ಸದಸ್ಯ ಎಸ್‌. ಕೃಷ್ಣ, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಂಭೂನಹಳ್ಳಿ ಸುರೇಶ್‌, ರೈತ ನಾಯಕಿ ಲತಾ ಶಂಕರ್‌, ದಸಂಸ ಮುಖಂಡ ಗುರುಪ್ರಸಾದ್‌ ಕೆರಗೋಡು, ಮುಖಂಡರಾದ ಎಂ.ಬಿ.ನಾಗಣ್ಣಗೌಡ, ಮುನಾವರ್‌ ಖಾನ್‌, ನಟರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.