
ಮಳವಳ್ಳಿ: ನಮ್ಮೆಲ್ಲರ ಧಾರ್ಮಿಕ ಪರಂಪರೆಯ ಸಂಕೇತವಾಗಿ ಡಿ.15ರಿಂದ 22ರವರೆಗೆ ನಡೆಯುವ ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಯವರ 1066ನೇ ಜಯಂತ್ಯುತ್ಸವದಲ್ಲಿ ಸರ್ವ ಜನಾಂಗದವರು ಪಾಲ್ಗೊಳ್ಳಬೇಕು ಎಂದು ಮನ್ ಮುಲ್ ನಿರ್ದೇಶಕ ಆರ್.ಎನ್.ವಿಶ್ವಾಸ್ ಕರೆ ನೀಡಿದರು.
ಪಟ್ಟಣದ ಮೈಸೂರು ರಸ್ತೆಯ ಸುತ್ತೂರು ಜಯಂತ್ಯುತ್ಸವದ ಕಚೇರಿಯಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
‘ಉತ್ಸವದ ಉದ್ಘಾಟನೆಗೆ ಡಿ.16ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಗಮಿಸುತ್ತಿರುವುದು ನಮ್ಮ ತಾಲ್ಲೂಕಿನ ಗೌರವಾಗಿದೆ. ನಮ್ಮ ರಾಷ್ಟ್ರದ ಪ್ರಥಮ ಪ್ರಜೆ ಸ್ವಾಗತಕ್ಕೆ ಎಲ್ಲರೂ ಸಜ್ಜುಗೊಳ್ಳಬೇಕಿದೆ’ ಎಂದು ಹೇಳಿದರು.
ತಾ.ಪಂ.ಮಾಜಿ ಉಪಾಧ್ಯಕ್ಷ ಸಿ.ಮಾಧು ಮಾತನಾಡಿ, ಕಾರ್ಯಕ್ರಮಕ್ಕೆ ರಾಷ್ಟ್ರಪತಿ ಅವರು ಬರುತ್ತಿರುವುದು ಇತಿಹಾಸದ ದಿನಗಳಲ್ಲಿ ಉಳಿಯಲಿದೆ ಎಂದು ಹೇಳಿದರು.
ಜಯಂತ್ಯುತ್ಸವದ ಸಂಚಾಲಕ ಮಹದೇವಸ್ವಾಮಿ ಮಾತನಾಡಿ, ‘ಡಿ.15ರಂದು ತಾಲ್ಲೂಕಿನ ಗಡಿ ಭಾಗ ಮಾರ್ಗವಾದ ಬೆಳಕವಾಡಿ ಮೂಲಕ ಆಗಮಿಸುವ ಉತ್ಸವಮೂರ್ತಿಯ ಸ್ವಾಗತಕ್ಕೆ ಎಲ್ಲರೂ ಅಣಿಗೊಳ್ಳಬೇಕು. ಅಂದು ಮಧ್ಯಾಹ್ನ 3ಗಂಟೆಗೆ ವೇಳೆ ಮಳವಳ್ಳಿ ಪಟ್ಟಣಕ್ಕೆ ಬರಲಿದೆ’ ಎಂದರು.
ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಸಿ.ಪಿ.ರಾಜು, ಕಾಂಗ್ರೆಸ್ ಮುಖಂಡರಾದ ಚನ್ನಪಿಳ್ಳೇಕೊಪ್ಪಲು ಸಿದ್ದೇಗೌಡ, ಕೃಷ್ಣ, ಎಂ.ಎನ್.ಜಯರಾಜು, ಬಸವಪ್ಪ, ಎನ್.ಡಿ.ಗೌಡ, ಕೆ.ಎಸ್.ಪ್ರಕಾಶ್, ತಳಗವಾದಿ ಟಿ.ಎಸ್.ಕಾಳಪ್ಪ ಮಾತನಾಡಿದರು.
ವೀರಶೈವ ಮಹಾಸಭಾದ ಕುಂದೂರು ಮೂರ್ತಿ ಪಾಲ್ಗೊಂಡಿದ್ದರು.
ಸಿಇಒ ಕೆ.ಆರ್.ನಂದಿನಿ ಪರಿಶೀಲನೆ
ವೇದಿಕೆ ಕಾರ್ಯಕ್ರಮ ನಡೆಯುವ ಶಾಂತಿ ಕಾಲೇಜು ಮುಂಭಾಗದ ಪ್ರದೇಶಕ್ಕೆ ಜಿ.ಪಂ.ಸಿಇಒ ಕೆ.ಆರ್.ನಂದಿನಿ ಅವರು ಶುಕ್ರವಾರ ಭೇಟಿ ನೀಡಿ ಕಾರ್ಯಕ್ರಮದ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿದರು. ಡಿ.16ರಂದು ರಾಷ್ಟ್ರಪತಿಗಳ ಭೇಟಿ ನೀಡುವ ಹಿನ್ನೆಲೆಯಲ್ಲಿ ಪೂರ್ವ ಸಿದ್ಧತೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಇದೇ ವೇಳೆ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಸಾರ್ವಜನಿಕರಿಗೆ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ನೀಡುವ ಹಾಗೂ ಸ್ವ-ಸಹಾಯ ಸಂಘಗಳು ಉತ್ಪಾದಿಸುವ ಉತ್ಪನ್ನಗಳನ್ನು ಮಾರಾಟ ಮಳಿಗೆಗಳನ್ನು ತೆರೆಯುವ ಬಗ್ಗೆ ಅಧಿಕಾರಿಗಳಿಗೆ ಕೆಲ ಸಲಹೆ ಸೂಚನೆಗಳನ್ನು ನೀಡಿದರು. ಆರೋಗ್ಯ ಶಿಕ್ಷಣ ಕೃಷಿ ತೋಟಗಾರಿಕೆ ರೇಷ್ಮೆ ಮೀನುಗಾರಿಕೆ ಪಶು ಸಂಗೋಪನೆ ಅರಣ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿದಂತೆ ಇತರೆ ಯೋಜನೆಗಳ ಕುರಿತು ಮಾಹಿತಿ ನೀಡುವ 18 ಹಾಗೂ ಸ್ವ-ಸಹಾಯ ಸಂಘಗಳು ಉತ್ಪಾದಿಸುವ ಉತ್ಪನ್ನಗಳನ್ನು ಮಾರಾಟ ಮಾಡುವ 25 ಮಳಿಗೆಗಳನ್ನು ತೆರೆಯುವ ಮೂಲಕ ಸ್ವ-ಸಹಾಯ ಸಂಘಗಳ ಆರ್ಥಿಕ ಬಲವರ್ಧನೆಗೆ ಕ್ರಮ ವಹಿಸಲಾಗಿದೆ ಎಂದು ಹೇಳಿದರು. 3 ದಿನಗಳ ಮಂಡ್ಯ ಕೃಷಿ ಮೇಳದಲ್ಲಿ ಸ್ವ-ಸಹಾಯ ಸಂಘಗಳು ₹17.50 ಲಕ್ಷದಷ್ಟು ವಹಿವಾಟು ನಡೆಸಿವೆ. ಕೃಷಿ ಮೇಳದ ಯಶಸ್ಸಿನಂತೆ ಮಳವಳ್ಳಿಯಲ್ಲಿ ನಡೆಯುವ ಜಯಂತ್ಯುತ್ಸವದಲ್ಲಿ ಸೂಕ್ತ ಸ್ಥಳದಲ್ಲಿ ಮಾರಾಟ ಮಳಿಗೆಗಳನ್ನು ತೆರೆಯಲಾಗುವುದು ಎಂದು ವಿವರಿಸಿದರು. ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಕೆ.ಎಸ್.ರೂಪಶ್ರೀ ಸಹಾಯಕ ಯೋಜನಾಧಿಕಾರಿ ಶ್ರೀಹರ್ಷ ತಾ.ಪಂ.ಇಒ ಎಚ್.ಜಿ.ಶ್ರೀನಿವಾಸ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.