ADVERTISEMENT

ಪಾಂಡವಪುರ: ಸ್ವರಾಜ್ ಉತ್ಸವ ಇಂದು

ಭಾಗವಹಿಸಲಿವೆ 40ಕ್ಕೂ ಹೆಚ್ಚು ಸರ್ಕಾರೇತರ ಸಂಸ್ಥೆಗಳು

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 5:12 IST
Last Updated 13 ಸೆಪ್ಟೆಂಬರ್ 2025, 5:12 IST
ಪಾಂಡವಪುರ ಪಾಂಡವ ಕ್ರೀಡಾಂಗಣದಲ್ಲಿ ಆಯೋಜಿಸಿರುವ ‘ಸ್ವರಾಜ್ ಉತ್ಸವ’ದಲ್ಲಿ ಪ್ರಾತ್ಯಕ್ಷಿಕೆ ನಡೆಸಲು ಮಾಡಿರುವ ಸಿದ್ಧತೆ 
ಪಾಂಡವಪುರ ಪಾಂಡವ ಕ್ರೀಡಾಂಗಣದಲ್ಲಿ ಆಯೋಜಿಸಿರುವ ‘ಸ್ವರಾಜ್ ಉತ್ಸವ’ದಲ್ಲಿ ಪ್ರಾತ್ಯಕ್ಷಿಕೆ ನಡೆಸಲು ಮಾಡಿರುವ ಸಿದ್ಧತೆ    

ಪಾಂಡವಪುರ: ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಫೌಂಡೇಷನ್ ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ಸಹಯೋಗದಲ್ಲಿ ಆಯೋಜಿಸಿರುವ ‘ಸ್ವರಾಜ್ ಉತ್ಸವ’ದಲ್ಲಿ 40ಕ್ಕೂ ಹೆಚ್ಚು ಸರ್ಕಾರೇತರ ಸಂಸ್ಥೆಗಳು ಪಾಲ್ಗೊಳ್ಳಲಿದ್ದು, ಗ್ರಾಮೀಣ ಬದುಕಿನ ಹಲವು ಮಗ್ಗಲುಗಳನ್ನು ತಮ್ಮ ಅಧ್ಯಯನ, ಸಂಶೋಧನೆಯ ಆಧಾರದಲ್ಲಿ ಅನಾವರಣ ಮಾಡಲಿವೆ. ಜತೆಗೆ ಪರಿಹಾರತ್ಮಕ ವಿಷಯಗಳನ್ನು ಪರಿಚಯಿಸಲಿವೆ.

ಕೃಷಿ ಸಂಕಷ್ಟ, ಲಿಂಗ ಅಸಮಾನತೆ, ಸರ್ಕಾರಿ ಸೇವೆ ಜನರಿಗೆ ತಲುಪುವಲ್ಲಿ ಇರುವ ತೊಡಕುಗಳು, ನಿರುದ್ಯೊಗ ಮುಂತಾದ ಸಮಸ್ಯೆಗಳು ಹಳ್ಳಿಗಳನ್ನು ಬಾಧಿಸುತ್ತಿವೆ.ಈ ಸಮಸ್ಯೆಗಳಿಗೆ ಶಾಸ್ವತ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳಲು, ಸ್ವತ: ಗ್ರಾಮಸ್ಥರೇ ಭಾಗವಹಿಸುಂತಾಗಬೇಕು’ ಎಂಬುದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಅಭಿಪ್ರಾಯ.

ಉತ್ಸವದಲ್ಲಿ 50ಕ್ಕೂ ಹೆಚ್ಚು ಮಳಿಗೆಗಳಿದ್ದು, ಬೀಜ ವೈವಿಧ್ಯ ಮೇಳ, ಮಹಿಳಾ ನಾಯಕತ್ವ ಮತ್ತು ಯುವಜನ ಉದ್ಯಮಶೀಲತೆ ಕುರಿತು ಹೆಚ್ಚು ಚರ್ಚೆಗಳು, ತ್ಯಾಜ್ಯ ಮರುಬಳಕೆ ಪ್ರದರ್ಶನಗಳು, ಶಿಕ್ಷಣದಲ್ಲಿ ಎಇ ಮತ್ತು ವಿವಿಧ ಗ್ರಾಮೀಣ ಸಮಸ್ಯೆಗಳಿಗೆ ತಂತ್ರಜ್ಞಾನ ಆಧಾರಿತ ಪರಿಹಾರಗಳು, ಜೊತೆಗೆ ಸಾರ್ವಜನಿಕರಲ್ಲಿ ಕುತೂಹಲ ಹಾಗೂ ಅಸಕ್ತಿ ಮೂಡಿಸುವ ಸಂವಾದಗಳು, ಆಟಗಳು ಹಾಗೂ ಕಲಾ ಪ್ರದರ್ಶನಗಳೂ ನಡೆಯಲಿವೆ.

ADVERTISEMENT

‘ಕೃಷಿಯಲ್ಲಿ ಬೆಳೆ ಮತ್ತು ಬೆಲೆ ಸಮಸ್ಯೆ, ನಿರುದ್ಯೋಗ, ಆರ್ಥಿಕ ಸಂಕಷ್ಟಗಳು ಸೇರಿದಂತೆ ವಿವಿಧ ಕಾರಣಗಳಿಗೆ ಹಳ್ಳಿಗಳ ಬಗ್ಗೆ ನಿರಾಸೆ ಉಪೇಕ್ಷೆಗಳು ಹೆಚ್ಚಿವೆ. ಈ ಮನಸ್ಥಿತಿ ಬದಲಿಸಿ, ‘ನಮ್ಮ ಹಳ್ಳಿ ನಮ್ಮ ಹೆಮ್ಮೆ’ ಎಂಬ ಭಾವನೆ ಮೂಡಬೇಕು. ‘ನಮ್ಮ ಬದುಕು ನಮ್ಮ ಕೈಯಲ್ಲಿ’ ಎಂಬ ವಿಶ್ವಾಸ ಮೂಡಿಸಬೇಕು ಎಂಬುದು ಈ ಉತ್ಸವದ ಉದ್ದೇಶ. ಈಗ ಆರಂಭಿಸುತ್ತಿದ್ದೇವೆ. ಈ ಪ್ರಯತ್ನ ರಾಜ್ಯದೆಲ್ಲೆಡೆಗೆ ವಿಸ್ತರಿಸುವುದಕ್ಕೆ ಪ್ರಯತ್ನಿಸಲಾಗುವುದು ಎಂದು ಪುಟ್ಟಣ್ಣಯ್ಯ ಫೌಂಡೇಶನ್, ಕಾರ್ಯನಿರ್ಹಕ ನಿರ್ದೇಶಕ ರಣಜಿತ್ ಹಿರೇಮರಳಿ ಹೇಳುತ್ತಾರೆ.

ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಬೆಳಿಗ್ಗೆ ಗಂಟೆಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮೀಣ ಪ್ರದೇಶದ ಸಾವಿರಾರು ರೈತರು, ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.