ADVERTISEMENT

ನಿಯಮ ಉಲ್ಲಂಘನೆ: ಪರವಾನಗಿಯಿಲ್ಲದೆ ಕಾರ್ಯ, ಏಳು ಕ್ರಷರ್‌ ಸೀಲ್‌: ತಹಶೀಲ್ದಾರ್

​ಪ್ರಜಾವಾಣಿ ವಾರ್ತೆ
Published 27 ಜುಲೈ 2020, 15:17 IST
Last Updated 27 ಜುಲೈ 2020, 15:17 IST
ನಾಗಮಂಗಲ ತಾಲ್ಲೂಕಿನ ಹೊಣಕೆರೆ ಹೋಬಳಿಯ ಗಂಗಸಮುದ್ರ ಗ್ರಾಮದಲ್ಲಿರುವ ಮಾರುತಿ ಕ್ರಷರ್ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಸೀಲ್ ಮಾಡಿದರು
ನಾಗಮಂಗಲ ತಾಲ್ಲೂಕಿನ ಹೊಣಕೆರೆ ಹೋಬಳಿಯ ಗಂಗಸಮುದ್ರ ಗ್ರಾಮದಲ್ಲಿರುವ ಮಾರುತಿ ಕ್ರಷರ್ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಸೀಲ್ ಮಾಡಿದರು   

ನಾಗಮಂಗಲ: ಸರ್ಕಾರದ ನಿಯಮ ಉಲ್ಲಂಘಿಸಿ ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿದ್ದ ಜಲ್ಲಿ ಕ್ರಷರ್‌ಗಳ ಮೇಲೆ ತಹಶೀಲ್ದಾರ್ ಕುಂಞಿ ಅಹಮದ್ ಮತ್ತು ಅಧಿಕಾರಿಗಳು ದಾಳಿ ನಡೆಸಿ 7 ಕ್ರಷರ್‌ಗಳನ್ನು ಸೀಲ್ ಮಾಡಿದ್ದಾರೆ.

ತಾಲ್ಲೂಕಿನ ಕಬ್ಬಿನಕೆರೆಯ ನರೇಂದ್ರ ಮಾಲೀಕತ್ವದ ಕ್ರಷರ್, ಗಂಗಸಮುದ್ರ ಗ್ರಾಮದ ರವಿಕುಮಾರ್ ಅವರ ಕ್ರಷರ್, ಕೆಂಪನಕೊಪ್ಪಲು ಗ್ರಾಮದ ದೇವರಾಜ್ ಮಾಲೀಕತ್ವದ ವೆಂಕಟೇಶ್ವರ ಸ್ಟೋನ್ ಕ್ರಷರ್, ವಡ್ಡರಹಳ್ಳಿಯ ಅಯ್ಯಪ್ಪ ಸ್ಟೋನ್ ಕ್ರಷರ್‌ಗಳು ಸೇರಿದಂತೆ ಬೇಗಮಂಗಲ ಮತ್ತು ವಡೇರಪುರ ಗ್ರಾಮಗಳಲ್ಲಿ ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿದ್ದ‌ 7 ಜಲ್ಲಿ ಕ್ರಷರ್‌ಗಳ‌ ಮೇಲೆ ಸೋಮವಾರ ಬೆಳಿಗ್ಗೆ ತಹಶೀಲ್ದಾರ್, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಾದ ಉದಯರವಿ ಮತ್ತು ಪ್ರಸನ್ನ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಭೂ‌ಪರಿವರ್ತನೆಯಾಗದ ಹಿನ್ನೆಲೆಯಲ್ಲಿ ಸೀಲ್ ಮಾಡಿದ್ದಾರೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ತಹಶೀಲ್ದಾರ್ ಕುಂಞಿ ಅಹಮದ್, ‘ಜಿಲ್ಲಾಧಿಕಾರಿ ಆದೇಶದಂತೆ ತಾಲ್ಲೂಕಿನ ಎಲ್ಲೆಲ್ಲಿ ಅಕ್ರಮವಾಗಿ ನಡೆಸಲಾಗುತ್ತಿರುವ ಕ್ರಷರ್‌ಗಳನ್ನು ಕಂದಾಯ ಇಲಾಖೆ, ಪೋಲಿಸ್ ಇಲಾಖೆ, ಅರಣ್ಯ ಇಲಾಖೆ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆಗಳು ಜಂಟಿ ಕಾರ್ಯಚರಣೆ ನಡೆಸಿ ಭೂ ಪರಿವರ್ತನೆಯಾಗದ ಕ್ರಷರ್‌ಗಳನ್ನು ಸೀಜ್ ಮಾಡಲಾಗಿದೆ’ ಎಂದರು.

ADVERTISEMENT

ಭೂವಿಜ್ಞಾನಿ ಪ್ರಸನ್ನ ಮಾತನಾಡಿ, ‘ಭೂ ಪರಿವರ್ತನೆ ಮಾಡದೇ ನಡೆಸುತ್ತಿರುವ ಕ್ರಷರ್‌ಗಳಿಗೆ ಈಗಾಗಲೇ ಬೀಗ ಹಾಕಲಾಗಿದ್ದು, ಅವರು ಎಷ್ಟು ಪ್ರಮಾಣದ ಕಲ್ಲು ಒಡೆದಿದ್ದಾರೆ ಎಂಬುದರ ಅಧಾರದ ಮೇಲೆ ದಂಡ ವಸೂಲಿ‌ ಮಾಡುತ್ತೇವೆ’ ಎಂದರು.

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉದಯರವಿ, ಉಪವಲಯ ಅರಣ್ಯಾಧಿಕಾರಿ ಕೆ.ಆರ್.ಮಂಜು, ಅರಣ್ಯ ರಕ್ಷಕ ಪುನೀತ್ ಕುಮಾರ್, ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್‌ಐ ರಾಮಚಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.