ADVERTISEMENT

ಕೊಪ್ಪ: ಟ್ಯಾಂಕ್ ನಿರ್ಮಾಣ ಕಾಮಗಾರಿ ಕಳಪೆ

ಬಹುಗ್ರಾಮ ಶುದ್ಧ ಕುಡಿಯುವ ನೀರಿನ ಯೋಜನೆಯಡಿ ಟ್ಯಾಂಕ್ ನಿರ್ಮಾಣ

ಬಿ.ಎ.ಮಧುಕುಮಾರ
Published 10 ಮಾರ್ಚ್ 2021, 2:09 IST
Last Updated 10 ಮಾರ್ಚ್ 2021, 2:09 IST
ಕೊಪ್ಪ ಹೋಬಳಿಯ ಗೊಲ್ಲರದೊಡ್ಡಿ ಗ್ರಾಮದ ಬಳಿ ನಿರ್ಮಾಣವಾಗುತ್ತಿರುವ ಕುಡಿಯುವ ನೀರಿನ ಟ್ಯಾಂಕ್‌ (ಎಡಚಿತ್ರ). ಹಳೆಯ ಟ್ಯಾಂಕ್‌
ಕೊಪ್ಪ ಹೋಬಳಿಯ ಗೊಲ್ಲರದೊಡ್ಡಿ ಗ್ರಾಮದ ಬಳಿ ನಿರ್ಮಾಣವಾಗುತ್ತಿರುವ ಕುಡಿಯುವ ನೀರಿನ ಟ್ಯಾಂಕ್‌ (ಎಡಚಿತ್ರ). ಹಳೆಯ ಟ್ಯಾಂಕ್‌   

ಕೊಪ್ಪ: ಬಹುಗ್ರಾಮ ಶುದ್ಧ ಕುಡಿಯುವ ನೀರಿನ ಯೋಜನೆಯಡಿ 48 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಲು ಕೊಪ್ಪ ಸಮೀಪದ ಗೊಲ್ಲರದೊಡ್ಡಿ ಗ್ರಾಮದ ಬಳಿ ನಿರ್ಮಾಣವಾಗುತ್ತಿರುವ ಮೇಜರ್ ಟ್ಯಾಂಕ್ ಕಾಮಗಾರಿ ಕಳಪೆಯಾಗಿದೆ. ಸರಿಯಾದ ರೀತಿಯಲ್ಲಿ ನಿರ್ವಹಣೆಯನ್ನೂ ಮಾಡುತ್ತಿಲ್ಲ ಎಂದು ಗೊಲ್ಲರದೊಡ್ಡಿ ಗ್ರಾಮಸ್ಥರು ಆರೋಪಿಸಿದ್ದಾರೆ.

ನೂತನವಾಗಿ ನಿರ್ಮಿಸುತ್ತಿರುವ ಟ್ಯಾಂಕ್ ಬಳಿ 2004ರಲ್ಲಿ ₹ 1.65 ಕೋಟಿ ವೆಚ್ಚದಲ್ಲಿ ಮೇಜರ್ ಟ್ಯಾಂಕ್ ಮತ್ತು ನೀರನ್ನು ಶುದ್ಧೀಕರಿಸುವ ಘಟಕ ನಿರ್ಮಿಸಲಾಗಿತ್ತು. ಆದರೆ, ಆ ಟ್ಯಾಂಕ್ ಮತ್ತು ಘಟಕಗಳು ಬಳಕೆಯಾಗಲೇ ಇಲ್ಲ. ಅಕ್ಕಪಕ್ಕದ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ ಸ್ಥಗಿತಗೊಂಡಿತ್ತು. ಹಳೆಯ ಟ್ಯಾಂಕ್ ನಿರ್ಮಾಣವಾದ ಸಮಯದಲ್ಲಿ ಸರ್ಕಾರಕ್ಕೆ ಸೇರಿದ ಹಲವು ವಸ್ತುಗಳು ಕಳವಾದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎನ್ನುವುಸು ಸ್ಥಳೀಯರ ದೂರು.

ಮದ್ದೂರು ತಾಲ್ಲೂಕಿನ ದೇಶಹಳ್ಳಿ ಗ್ರಾಮದ ಕೆರೆಯಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನ ಮಾಡಲು ನೀರಿನ ಸಂಗ್ರಹಕ್ಕಾಗಿ ಸುಮಾರು 6 ತಿಂಗಳಿಂದ ಮೇಜರ್ ವಾಟರ್ ಟ್ಯಾಂಕ್ ನಿರ್ಮಿಸ ಲಾಗುತ್ತಿದೆ. ಟ್ಯಾಂಕ್ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ. ಸರಿಯಾದ ಕ್ರಮದಲ್ಲಿ ನಿರ್ವಹಣೆ (ಕ್ಯೂರಿಂಗ್) ಮಾಡದಿರುವುದರಿಂದ ಟ್ಯಾಂಕ್ ಕೆಲವೇ ವರ್ಷಗಳಲ್ಲಿ ಕುಸಿಯುವ ಭೀತಿ ಎದುರಾಗಿದೆ. ಈ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಿ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಮುಂದಾಗಲಿ ಎನ್ನುತ್ತಾರೆ ಗೊಲ್ಲರದೊಡ್ಡಿ ಗ್ರಾಮದ ಮುಖಂಡರಾದ ಅಶೋಕ, ಜಗಾನಂದ, ಬೋರೇಗೌಡ, ದಾಸಪ್ಪ, ಉಮೆಶ್.

ADVERTISEMENT

₹25 ಲಕ್ಷ ವೆಚ್ಚದಲ್ಲಿ 1.5 ಲಕ್ಷ ಲೀಟರ್ ನೀರು ಸಂಗ್ರಹದ ಮೇಜರ್ ವಾಟರ್ ಟ್ಯಾಂಕ್ ನಿರ್ಮಿಸಲಾಗುತ್ತಿದೆ. ಹಳೆಯ ಟ್ಯಾಂಕ್ 1 ಲಕ್ಷ ಲೀಟರ್ ಸಾಮರ್ಥ್ಯವನ್ನು ಹೊಂದಿದ್ದು, ಗೊಲ್ಲರದೊಡ್ಡಿ ಗ್ರಾಮಕ್ಕೆ ನೀರು ಪೂರೈಸಲು ಬಳಸಿಕೊಳ್ಳಲಾಗುವುದು. ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಲಾಗುವುದು ಎಂದು ಕುಡಿಯುವ ನೀರು ಸರಬರಾಜು ವಿಭಾಗದ ಎಂಜಿನಿಯರ್ ಮಹದೇವು ಹೇಳಿದರು.

***

ಗೊಲ್ಲರದೊಡ್ಡಿಯಲ್ಲಿ ಹಳೆಯ ಟ್ಯಾಂಕ್ ಇರುವಾಗಲೇ ಅವೈಜ್ಞಾನಿಕವಾಗಿ ಮತ್ತೊಂದು ಟ್ಯಾಂಕ್ ನಿರ್ಮಿಸಿ ಸರ್ಕಾರದ ಹಣವನ್ನು ವ್ಯರ್ಥ ಮಾಡಲಾಗುತ್ತಿದೆ

–ಗೊಲ್ಲರದೊಡ್ಡಿ ಜಗಾನಂದ, ಸ್ಥಳೀಯ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.