ADVERTISEMENT

ಶಿಕ್ಷಕರ ಶ್ರಮದಿಂದ ಬದಲಾವಣೆ ಸಾಧ್ಯ: ಸಚಿವ ನಾರಾಯಣಗೌಡ ಅಭಿಮತ

ಶಿಕ್ಷಕರ ದಿನಾಚರಣೆ, ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2020, 13:25 IST
Last Updated 5 ಸೆಪ್ಟೆಂಬರ್ 2020, 13:25 IST
ಶಿಕ್ಷಕರ ದಿನಾಚರಣೆ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಶಿಕ್ಷಕರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಿದರು
ಶಿಕ್ಷಕರ ದಿನಾಚರಣೆ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಶಿಕ್ಷಕರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಿದರು   

ಮಂಡ್ಯ: ‘ವಿದ್ಯಾದಾನ ಅತ್ಯಂತ ಶ್ರೇಷ್ಠವಾಗಿದ್ದು ಅದಕ್ಕಿಂತ ಮಿಗಿಲಾದ ಇನ್ನೊಂದು ದಾನವಿಲ್ಲ. ಶಿಕ್ಷಕರ ಶ್ರಮದಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ತರಬಹುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.

ಜಿಲ್ಲಾಡಳಿತದ ವತಿಯಿಂದ ನಗರದ ಗಾಂಧಿ ಭವನದಲ್ಲಿ ಶನಿವಾರ ನಡೆದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಶಿಕ್ಷಣ ಕ್ಷೇತ್ರಕ್ಕೆ ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಕೊಡುಗೆ ಅಪಾರವಾಗಿದೆ. ಅವರು ಸಮಾಜಕ್ಕೆ ಶಕ್ತಿಯಾಗಿದ್ದಾರೆ. ಜಿಲ್ಲೆಯಲ್ಲಿನ ಶಿಕ್ಷಕರ ಪರಿಶ್ರಮದಿಂದ ಸಾಕಷ್ಟು ಬದಲಾವಣೆಯಾಗಿದೆ. ಜಿಲ್ಲೆಯು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ 2 ವರ್ಷದ ಹಿಂದೆ 20ನೇ ಸ್ಥಾನ ಪಡೆದಿತ್ತು, ಕಳೆದ ವರ್ಷ 10ನೇ ಸ್ಥಾನ ಈ ವರ್ಷ 4ನೇ ಸ್ಥಾನ ಗಳಿಸಿದೆ. ಇದಕ್ಕೆ ಶ್ರಮಿಸಿದ ಎಲ್ಲಾ ಶಿಕ್ಷಕರೂ ಅಭಿನಂದನಾರ್ಹರು’ ಎಂದು ಹೇಳಿದರು.

ADVERTISEMENT

ವಿಧಾನ ಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ ‘ಸರ್ವಪಲ್ಲಿ ರಾಧಾಕೃಷ್ಣನ್‌ ಅವರು ಶ್ರೇಷ್ಠ ತತ್ವಜ್ಞಾನಿ, ಗಟ್ಟಿ ವ್ಯಕ್ತಿತ್ವ ಹೊಂದಿದ್ದರು. ಒಬ್ಬ ಶಿಕ್ಷಕ ತನ್ನ ಬದುಕಿನಲ್ಲಿ ಏನೆಲ್ಲಾ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಶಿಕ್ಷಣಕ್ಕೆ ಬದುಕನ್ನು ರೂಪಿಸುವ ಅಗಾಧ ಶಕ್ತಿ ಇದೆ. ಒಬ್ಬ ಶಿಕ್ಷಕನಿಲ್ಲದೆ ಎಂಜಿನಿಯರ್‌, ವಕೀಲ ಸೇರಿದಂತೆ ಯಾರೂ ಇರಲು ಸಾಧ್ಯವಿಲ್ಲ. ಶಿಕ್ಷಕ ದೇಶದ ಭವಿಷ್ಯದ ನಿರ್ಮಾತೃ’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ 24 ಶಿಕ್ಷರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಶಾಸಕ ಎಂ.ಶ್ರೀನಿವಾಸ್‌ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಎಸ್‌.ನಾಗರತ್ನಾ ಸ್ವಾಮಿ, ಉಪಾಧ್ಯಕ್ಷೆ ಪಿ.ಕೆ.ಗಾಯತ್ರಿ, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌, ಜಿಪಂ ಸಿಇಒ ಜುಲ್ಫಿಕರ್‌ ಉಲ್ಲಾ, ತಾಪಂ ಅಧ್ಯಕ್ಷೆ ಎಚ್‌.ಎಸ್‌.ಶಿವಕುಮಾರಿ, ಡಿಡಿಪಿಐ ಆರ್‌. ರಘುನಂದನ್‌ ಇದ್ದರು.

ಮಾಂಡವ್ಯ ಕಾಲೇಜು: ‘ರಾಧಾಕೃಷ್ಣನ್ ಮಹಾನ್‌ ಚಿಂತಕರಾಗಿದ್ದು, ಅವರ ದೂರದೃಷ್ಟಿತ್ವ ಎಲ್ಲಾ ಶಿಕ್ಷಕರಿಗೂ ದಾರಿ ದೀಪವಾಗಿದೆ’ ಎಂದು ಸಾಹಿತಿ ಜಗದೀಶ್‌ ಕೊಪ್ಪ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕ, ಎಸ್‌ಬಿ ಎಜುಕೇಷನ್‌ ಟ್ರಸ್ಟ್‌ ವತಿಯಿಂದ ಮಾಂಡವ್ಯ ಎಕ್ಸಲೆನ್ಸ್‌ ಪಿಯು ಕಾಲೇಜಿನಲ್ಲಿ ನಡೆದ ಶಿಕ್ಷಣ ದಿನಾಚರಣೆ, ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಒಬ್ಬ ಶಿಕ್ಷಕನ ಮಹತ್ವವನ್ನು ಮತ್ತು ಕಾಲದ ಮಹತ್ವವನ್ನು ಪರಿಚಯಿಸಿದ ಕೀರ್ತಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ ಅವರಿಗೆ ಸಲ್ಲುತ್ತದೆ. ಜಗತ್ತು ಕಂಡ ಅಪರೂಪದ ಶಿಕ್ಷಕ ರಾಧಾಕೃಷ್ಣನ್‌. ಶಿಕ್ಷಕರ ದಿನಾಚರಣೆಯಲ್ಲಿ ಅವರನ್ನು ನೆನಪಿಸುವ ಕಾರ್ಯ ನಡೆಯುತ್ತಿದ್ದು, ಇದು ನಿರಂತರವಾಗಿರಬೇಕು’ ಎಂದರು.

ಎಸ್‌ಬಿ ಎಜುಕೇಷನ್‌ ಟ್ರಸ್ಟ್‌ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಕೆ.ರವಿಕುಮಾರ್‌ ಚಾಮಲಾಪುರ, ತಾಲ್ಲೂಕು ಘಟಕದ ಅಧ್ಯಕ್ಷ ಸುಂಡಹಳ್ಳಿ ಮಹೇಶ್‌, ಬಿಜೆಪಿ ಮುಖಂಡ ಬಿ.ನಾಗೇಶ್‌ ಹೊಸಹಳ್ಳಿ, ಶ್ರೀನಿವಾಸ್‌, ಎಂ.ಆರ್‌.ಮಂಜು ಇದ್ದರು.

ಕಾಳೇಗೌಡ ಪ್ರೌಢಶಾಲೆ: ಮಂಡ್ಯ ನಗರದ ಡಾ.ಎಂ.ಎಸ್‌.ರಾಜೇಂದ್ರ ಪ್ರಸಾದ್‌ ಸ್ಮಾರಕ ವಿದ್ಯಾ ಸಂಸ್ಥೆ, ಕಾಂಗ್ರೆಸ್‌ ಎಸ್‌ಸಿ ಘಟಕದ ವತಿಯಿಂದ ನಗರದ ಕಾಳೇಗೌಡ ಪ್ರೌಢಶಾಲೆಯಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ ಜನ್ಮ ದಿನದ ಅಂಗವಾಗಿ ಶಿಕ್ಷಕರ ದಿನಾಚಾರಣೆ ಆಚರಿಸಲಾಯಿತು.

ಸಮಾಜ ವಿಜ್ಞಾನ ಶಿಕ್ಷಕ ಕೆ.ಸಿ.ಚನ್ನಕೇಶವ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾಂಗ್ರೆಸ್‌ ಮುಖಂಡ ಎಂ.ಎಸ್‌.ಆತ್ಮಾನಂದ, ಸಂಸ್ಥೆಯ ಕಾರ್ಯದರ್ಶಿ ನಾಗರತ್ನಾ, ನಿರ್ದೇಶಕ ಎಂ.ಡಿ.ಜಯರಾಂ, ಆಡಳಿತ ಅಧಿಕಾರಿ ಎಸ್‌.ಚಂದ್ರಪ್ರಭಾ, ಮುಖ್ಯ ಶಿಕ್ಷಕ ಜಿ.ಸಿ.ಗೋವಿಂದರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.