ADVERTISEMENT

ಇಂದಿನಿಂದ ದೇವರ ದರ್ಶನಕ್ಕೆ ಅವಕಾಶ

ರಾತ್ರಿ 9ರವರೆಗೆ ವ್ಯಾಪಾರ ನಡೆಸಲು ಅನುಮತಿ, ವಾಣಿಜ್ಯ ಚಟುವಟಿಕೆ ಗರಿಗೆದರುವ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2021, 3:49 IST
Last Updated 5 ಜುಲೈ 2021, 3:49 IST

ಮಂಡ್ಯ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಲಾಕ್‌ಡೌನ್‌ ಸಡಿಲಿಕೆಯಾಗಿದ್ದು, ಸೋಮವಾರದಿಂದ ಮುಜರಾಯಿ ಇಲಾಖೆ ಸೇರಿದಂತೆ ಇತರ ದೇವಸ್ಥಾನಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಕೇವಲ
ದೇವರ ದರ್ಶನಕ್ಕೆ ಮಾತ್ರ ಸೀಮಿತವಾಗಿದ್ದು, ಇತರ ಸೇವೆಗಳು ಲಭ್ಯ ಇರುವುದಿಲ್ಲ.

ಇತಿಹಾಸ ಪ್ರಸಿದ್ಧ ಮೇಲುಕೋಟೆ ಚಲುವನಾರಾಯಣ ಸ್ವಾಮಿ ದೇವಸ್ಥಾನ ಸೇರಿದಂತೆ ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ಭಾನುವಾರ ಸ್ವಚ್ಛತಾ ಕಾರ್ಯಗಳು ಭರದಿಂದ ಸಾಗಿತು. ಕಳೆದ ಎರಡೂವರೆ ತಿಂಗಳಿನಿಂದ ದೇವಸ್ಥಾನಗಳು ಬಾಗಿಲು ಮುಚ್ಚಿದ್ದವು. ಯಾವುದೇ ಜಾತ್ರಾ ಮಹೋತ್ಸವ ದೇವರ ದರ್ಶನ ಇಲ್ಲದೆ ಭಕ್ತಾದಿಗಳು ಪರದಾಡುತ್ತಿದ್ದರು. ದೇವರ ದರ್ಶನಕ್ಕೆ ನೀಡಿರುವ ಅವಕಾಶ ಭಕ್ತಾದಿಗಳ, ಅರ್ಚಕರ ಮೊಗದಲ್ಲಿ ಮಂದಹಾಸ ಮೂಡಿಸಿದ್ದು, ನಾಳೆಯಿಂದ ದೇವರ ದರ್ಶನ ಪಡೆದು ಪುನೀತರಾಗಲಿದ್ದಾರೆ.

ಉಳಿದಂತೆ ರಾತ್ರಿ 9ರವರೆಗೆ ವ್ಯಾಪಾರ ನಡೆಸಲು ಅವಕಾಶ ನೀಡಲಾಗಿದ್ದು, ವ್ಯವಹಾರ ಚಟುವಟಿಕೆಗಳು ಗರಿಗೆದರುವ ಸಾಧ್ಯತೆ ಇದೆ. ಮೊದಲ ಹಂತದಲ್ಲಿ ಮಧ್ಯಾಹ್ನ 2 ಗಂಟೆ ವರೆಗೆ, ಎರಡನೇ ಹಂತದಲ್ಲಿ ಸಂಜೆ 5ರವರೆಗೆ ವ್ಯಾಪಾರ ಮಾಡಲು ಅವಕಾಶ ನೀಡಲಾಗಿತ್ತು. ಸೋಮವಾರದಿಂದ ರಾತ್ರಿ 9ರವರೆಗೆ ನೀಡಿರುವ ಅವಕಾಶ ವ್ಯಾಪಾರಿಗಳಲ್ಲಿ ಸಮಾಧಾನ ತಂದಿದ್ದು, ಗ್ರಾಹಕರು ಆಗಮಿಬೇಕಿದೆ.

ADVERTISEMENT

ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಆಸನಗಳನ್ನು ಭರ್ತಿ ಮಾಡಿ ಸಂಚರಿಸಲು ಅವಕಾಶ ನೀಡಲಾಗಿದ್ದು, ಸೋಮವಾರದಿಂದ ಇನ್ನಷ್ಟು ಮಾರ್ಗಗಳಲ್ಲಿ ಬಸ್‌ಗಳು ಸಂಚರಿಸುವ ಸಾಧ್ಯತೆ ಇದೆ. ಪೂರ್ಣ ಆಸನ ಭರ್ತಿಗೆ ಅವಕಾಶ ನೀಡಿದ್ದರೂ ಪ್ರಯಾಣಿಕರು ಮುಖಗವಸು, ಸ್ಯಾನಿಟೈಸರ್‌ ಬಳಸಿ, ವೈಯಕ್ತಿಯ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ತಾಲ್ಲೂಕು ಕೇಂದ್ರದಿಂದ ಜಿಲ್ಲಾ ಕೇಂದ್ರಗಳಿಗೆ ಬಸ್‌ಗಳು ಸಂಚರಿಸುತ್ತಿದ್ದು, ನಾಳೆಯಿಂದ ಪ್ರಯಾಣಿಕರ ಲಭ್ಯತೆ ಆಧಾರದ ಮೇಲೆ ಗ್ರಾಮಾಂತರ ಪ್ರದೇಶಗಳಿಗೆ ಬಸ್‌ ಸಂಚಾರ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.