ADVERTISEMENT

ಎಣ್ಣೆಹೊಳೆಕೊಪ್ಪಲು ಗ್ರಾಮಕ್ಕೆ ನುಗ್ಗಿದ ನೀರು

ಭಯಭೀತರಾದ ಗ್ರಾಮಸ್ಥರು; 50 ಎಕರೆ ಬೆಳೆ ಜಲಾವೃತ

​ಪ್ರಜಾವಾಣಿ ವಾರ್ತೆ
Published 27 ಜುಲೈ 2024, 14:31 IST
Last Updated 27 ಜುಲೈ 2024, 14:31 IST
ಪಾಂಡವಪುರ ತಾಲ್ಲೂಕಿನ ಎಣ್ಣೆಹೊಳೆಕೊಪ್ಪಲು ಗ್ರಾಮಕ್ಕೆ ನುಗ್ಗಿದ ಕಾವೇರಿ ನದಿ ನೀರು ನುಗ್ಗಿದ್ದು, ತಹಶೀಲ್ದಾರ್ ಎಸ್.ಸಂತೋಷ್ ಅವರೊಂದಿಗೆ ರೈತ ಮುಖಂಡರು ಚರ್ಚೆ ನಡೆಸಿದರು.
ಪಾಂಡವಪುರ ತಾಲ್ಲೂಕಿನ ಎಣ್ಣೆಹೊಳೆಕೊಪ್ಪಲು ಗ್ರಾಮಕ್ಕೆ ನುಗ್ಗಿದ ಕಾವೇರಿ ನದಿ ನೀರು ನುಗ್ಗಿದ್ದು, ತಹಶೀಲ್ದಾರ್ ಎಸ್.ಸಂತೋಷ್ ಅವರೊಂದಿಗೆ ರೈತ ಮುಖಂಡರು ಚರ್ಚೆ ನಡೆಸಿದರು.   

ಪಾಂಡವಪುರ: ಕೆಆರ್‌ಎಸ್ ಅಣೆಕಟ್ಟೆಯಿಂದ 1ಲಕ್ಷಕ್ಕೂ ಅಧಿಕ ಕ್ಯುಸೆಕ್ ನೀರನ್ನು ಕಾವೇರಿ ನದಿಗೆ ಹರಿಯಬಿಟ್ಟಿರುವುದರಿಂದ ನದಿ ಪಾತ್ರದ ತಾಲ್ಲೂಕಿನ ಎಣ್ಣೆಹೊಳೆಕೊಪ್ಪಲು ಗ್ರಾಮಕ್ಕೆ ನೀರು ನುಗ್ಗಿದ್ದು, ಗ್ರಾಮವು ಜಲಾವೃತಗೊಳ್ಳುವ ಭೀತಿ ಗ್ರಾಮಸ್ಥರಿಗೆ ಎದುರಾಗಿದೆ.

ಕಾವೇರಿ ಹೊಳೆಯ ದಡದ ಕೂಗಳತೆಯಲ್ಲಿರುವ ಎಣ್ಣೆಹೊಳೆ ಗ್ರಾಮದ ಮನೆಗಳ ಮಗ್ಗುಲಿಗೆ ನೀರು ಹರಿದು ಬಂದಿದೆ. ಮಕ್ಕಳು ಮಹಿಳೆಯರು ಭಯಭೀತರಾಗಿದ್ದಾರೆ. ಹೊಳೆ ನೀರು ಗ್ರಾಮದ ಕೆಲವು ಮನೆಗಳಿಗೆ, ಜಾನುವಾರು ಕೊಟ್ಟಿಗೆಗೆ, ಮೇವುಗಳ ಮೆದೆಗಳಿಗೆ ನುಗ್ಗಿದ್ದು, ರೋಗರುಜಿನಗಳು ಹರಡುವ ಭೀತಿ ಜನರನ್ನು ಕಾಡುತ್ತಿದೆ.

50 ಎಕರೆ ಬೆಳೆ ಮುಳುಗಡೆ: ಹೊಳೆ ಆಜುಬಾಜಿನಲ್ಲಿರುವ ರೈತರ ಸುಮಾರು 50 ಎಕರೆಯಷ್ಟು ಜಮೀನಿನ ಬೆಳೆಗಳು ಕೂಡ ಜಲಾವೃತಗೊಂಡಿದ್ದು, ರೈತರು ಸಂಕಷ್ಟದಲ್ಲಿದ್ದಾರೆ.

ADVERTISEMENT

ತಹಶೀಲ್ದಾರ್ ಭೇಟಿ: ತಹಶೀಲ್ದಾರ್ ಎಸ್.ಸಂತೋಷ್ ಅವರು ಎಣ್ಣೆಹೊಳೆಕೊಪ್ಪಲು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಗ್ರಾಮದ ಜನರಿಗೆ ಮುನ್ನೆಚ್ಚರಿಕೆ, ಸಲಹೆ ನೀಡಿದರು. ಗ್ರಾಮಕ್ಕೆ ಆಗಾಗ್ಗೆ ಭೇಟಿ ನೀಡಿ ಮುನ್ನೆಚ್ಚರಿಕೆ ಕ್ರಮವಹಿಸಬೇಕೆಂದು ಗ್ರಾಮ ಲೆಕ್ಕಿಗರು, ರಾಜಸ್ವ ನಿರೀಕ್ಷಕರು ಹಾಗೂ ಪಿಡಿಓಗಳಿಗೆ ಸೂಚನೆ ನೀಡಿದರು.

ತಡೆಗೋಡೆ ಪೂರ್ಣಗೊಳಿಸಲು ಒತ್ತಾಯ:

ಹೊಳೆ ದಂಡೆಯಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಈ ಹಿಂದೆ ಸುಮಾರು ₹ 7ಕೋಟಿ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ ಮಾಡಲಾಗಿತ್ತಾದರೂ, ಪೂರ್ಣಗೊಂಡಿಲ್ಲವಾದ್ದರಿಂದ ಹೊಳೆ ನೀರು ಗ್ರಾಮಕ್ಕೆ ನುಗ್ಗುತ್ತಿದೆ. ಕೂಡಲೇ ತಡೆಗೋಡೆಯನ್ನು ಪೂರ್ಣಗೊಳಿಸಿಕೊಡಿ, ವ್ಯವಸ್ಥಿತವಾದ ವೈಜ್ಞಾನಿಕ ಚರಂಡಿ ನಿರ್ಮಾಣ ಮಾಡಿಕೊಡಬೇಕು. ಜಲಾವೃತಗೊಂಡಿರುವ ರೈತರ ಬೆಳೆಗಳಿಗೆ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ತಹಶೀಲ್ದಾರ್ ಸಂತೋಷ್ ಅವರನ್ನು ಒತ್ತಾಯಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲ್ಲೂಕು ಅಧ್ಯಕ್ಷ ಕೆನ್ನಾಳು ನಾಗರಾಜು, ಮುಖಂಡರಾದ ಕೃಷ್ಣಪ್ಪ, ಮಂಜು, ರಘು, ರಾಘವೇಂದ್ರ, ಸುರೇಶ್ ಸೇರಿದಂತೆ ಗ್ರಾಮಸ್ಥರು ತಹಶೀಲ್ದಾರ್ ಎಸ್.ಸಂತೋಷ್ ಅವರೊಂದಿಗೆ ಚರ್ಚಿಸಿದರು.

ಪಾಂಡವಪುರ ತಾಲ್ಲೂಕಿನ ಎಣ್ಣೆಹೊಳೆಕೊಪ್ಪಲು ಗ್ರಾಮಕ್ಕೆ ಕಾವೇರಿ ನದಿ ನೀರು ನುಗ್ಗಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.