ADVERTISEMENT

ಕಬ್ಬು ಪೂರೈಕೆ ತಕ್ಕಂತೆ ಕಾರ್ಖಾನೆಗಳಿಲ್ಲ: ಸದಾನಂದಗೌಡ ವಿಷಾದ

ಸಮಗ್ರ ಸಾವಯವ ಸುಸ್ಥಿರ ಕೃಷಿ ಜನ ಜಾಗೃತಿಯಲ್ಲಿ ರೈತರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2025, 14:05 IST
Last Updated 3 ಮಾರ್ಚ್ 2025, 14:05 IST
ಮಂಡ್ಯ ನಗರ ಕರ್ನಾಟಕ ಸಂಘದ ಕೆವಿಎಸ್ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಮಗ್ರ ಸಾವಯವ ಕೃಷಿಕರನ್ನು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ಸನ್ಮಾನಿಸಿದರು
ಮಂಡ್ಯ ನಗರ ಕರ್ನಾಟಕ ಸಂಘದ ಕೆವಿಎಸ್ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಮಗ್ರ ಸಾವಯವ ಕೃಷಿಕರನ್ನು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ಸನ್ಮಾನಿಸಿದರು   

ಮಂಡ್ಯ: ‘ಮಂಡ್ಯ ಜಿಲ್ಲೆಯಲ್ಲಿ ಯೆಥೇಚ್ಚವಾಗಿ ಕಬ್ಬು ಬೆಳೆದರೂ ಅದಕ್ಕೆ ತಕ್ಕಂತೆ ಸಮರ್ಪಕ ಕಾರ್ಖಾನೆಗಳೇ ಇಲ್ಲ ಕೃಷಿಯಲ್ಲಿ ರೈತರಿಗೆ ಹಲವು ಸವಾಲುಗಳಿವೆ ಎನ್ನುವುದೇ ಇದು ಸಾಕ್ಷಿಯಾಗಿದೆ’ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ವಿಷಾದಿಸಿದರು.

ನಗರದ ಕರ್ನಾಟಕ ಸಂಘದ ಕೆವಿಎಸ್‌ ಭವನದಲ್ಲಿ ಸಮಗ್ರ ಸಾವಯವ ಸುಸ್ಥಿರ ಕೃಷಿ ಟ್ರಸ್ಟ್‌ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಸಮಗ್ರ ಸಾವಯವ ಸುಸ್ಥಿರ ಕೃಷಿ ಜನ ಜಾಗೃತಿ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ವಿಸಿ ನಾಲೆ ಆಧುನೀಕರಣ ಮಾಡಿದ್ದರೆ ಅಲ್ಲಿ 25 ಬಾರಿ ಬಂದು ನಾವೇ ಕಾಮಗಾರಿ ಮಾಡಿದ್ದು, ಎಂದು ರಾಜಕಾರಣಿಗಳು ಹೇಳುತ್ತಾರೆ. ಇಲ್ಲಿ ನಿಜವಾಗಿಯೂ ಕಾಮಗಾರಿ ಯಾರು ಮಾಡಿದ್ದಾರೆ ಎಂಬುದೇ ಮುಖ್ಯ. ಮದ್ಯದ ಬೆಲೆ ಏರಿಳಿತವಾದರೆ ಒಟ್ಟಾಗಿ ಹೋರಾಟ ಮಾಡುತ್ತಾರೆ, ಕಾಮಗಾರಿಗಳ ಗುತ್ತಿಗೆ ಸಿಗದಿದ್ದರೂ ಲಾಬಿ ಮಾಡಲಾಗುತ್ತದೆ. ಆದರೆ, ದೇಶದಲ್ಲಿ ಶೇ 60ರಷ್ಟು ರೈತರು ಇದ್ದು, ಇವರು ಮಾತ್ರ ಯಾವ ಕ್ಷೇತ್ರದಲ್ಲಿಯೂ ಲಾಬಿ ಮಾಡಲಿಲ್ಲ. ಇವರಿಗೆ ಲಾಬಿ ಮಾಡಿಯಾದರೂ ಕೃಷಿ ಕ್ಷೇತ್ರದಲ್ಲಿ ನ್ಯಾಯ ಕೊಡಿಸಬೇಕು’ ಎಂದು ಅಭಿಪ್ರಾಯಪಟ್ಟರು.

ADVERTISEMENT

ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಏಳು ಫರ್ಟಿಲೈಸರ್‌ ಕಂಪನಿಗಳನ್ನು ನನ್ನ ಅವಧಿಯಲ್ಲಿ ಮಾಡಲಾಯಿತು. ರಸಗೊಬ್ಬರದ ಸಬ್ಸಿಡಿಯನ್ನು ಹೆಚ್ಚು ಮಾಡಲಾಯಿತು. ಆದರೆ ಇದಕ್ಕೆ ಬೇಕಿರುವ ಅಗತ್ಯ ವಸ್ತುಗಳೇ ಸಿಗುತ್ತಿಲ್ಲ ಹಾಗಾಗಿ ವಿದೇಶದಿಂದ ಆಮದು ಮಾಡಲಾಗುತ್ತಿತ್ತು’ ಎಂದು ವಿವರಿಸಿದರು.

‘ನಗರ ಪ್ರದೇಶಗಳಲ್ಲಿ ಕಾರ್ಖಾನೆಗಳು ಬೆಳೆಯುತ್ತಿವೆ. ಆದರೆ ಗ್ರಾಮೀಣ ಭಾಗದಲ್ಲಿ ಕಾರ್ಖಾನೆಗಳ ಆರಂಭಕ್ಕೆ ಯಾರೂ ಮನಸ್ಸು ಮಾಡಲಿಲ್ಲ, ಇದರಿಂದ ಕಾರ್ಖಾನೆ ಅಭಿವೃದ್ಧಿ ಸಾಧ್ಯವಾಗಿಲ್ಲ. ಯಾವ ಭಾಗದಲ್ಲಿ ರೈತರಿಗೆ ಸಹಕಾರ ಇದೆಯೋ ಅಲ್ಲಿ ಪ್ರೋತ್ಸಾಹ ಸಿಗುತ್ತಿಲ್ಲ. ತೋಟಗಾರಿಕೆ ಬೆಳೆ ಸೇರಿದಂತೆ ಇತರೆ ಬೆಳೆಗಳಿಗೆ ಉತ್ತಮ ಬೆಲೆ ಸಿಗುತ್ತಿದೆ. ಇನ್ನುಳಿದಂತೆ ಯಾಂತ್ರೀಕೃತ ಬೇಸಾಯಕ್ಕೆ ಒತ್ತು ನೀಡುವಲ್ಲಿಯೂ ಹಿಂದೆ ಬಿದ್ದಿರುವ ಕಾರಣ ಸಣ್ಣಪುಟ್ಟ ಯಾಂತ್ರೀಕೃತ ಬೆಳೆ ಬೆಳೆಯುತ್ತಿದ್ದೇವೆ’ ಎಂದು ಕಳವಳ ವ್ಯಕ್ತಪಡಿಸಿದರು.

ಆರ್‌ಎ‍ಪಿಸಿಎಂಎಸ್‌ ಅಧ್ಯಕ್ಷ ಯು.ಸಿ.ಶೇಖರ್‌ ಮಾತನಾಡಿ, ‘ರೈತರು ತಾವು ಕಟಾವು ಮಾಡಿದ ಭತ್ತ ಸಂಗ್ರಹಣೆ ಮಾಡಲು ಸಾಧ್ಯವಾಗುತ್ತಿಲ್ಲ, ಅದು ಇಲಿ ಹೆಗ್ಗಣಗಳ ಪಾಲಾಗುವ ಭೀತಿ ಇದೆ. ಈ ಸಮಸ್ಯೆಯನ್ನು ಸಂಬಂಧಪಟ್ಟ ಇಲಾಖೆಗಳು ಮತ್ತು ಸರ್ಕಾರ ಕೂಡಲೇ ಖರೀದಿ ಕೇಂದ್ರಗಳ ಮೂಲಕ ಉತ್ತಮ ಬೆಲೆ ನೀಡಿ ಸಮಸ್ಯೆ ಬಗೆಹರಿಸಬೇಕು. ಜೊತೆಗೆ ಭತ್ತ ಕಟಾವು ಮಾಡಿದ ಸಂದರ್ಭದಲ್ಲಿಯೂ ದಲ್ಲಾಳಿಗಳ ಪಾಲಾಗಿ ರೈತರು ನಷ್ಟ ಅನುಭವಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ಸಮಗ್ರ ಕೃಷಿಕ ರೈತರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಬುದ್ಧ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಯಮದೂರು ಸಿದ್ದರಾಜು, ಮೈಕ್ರೋಭಿ ಪೌಂಡೇಷನ್‌ ಅಧ್ಯಕ್ಷ ಕೆ.ಆರ್‌. ಹುಲ್ಲುನಾಚೇಗೌಡ, ಅಖಿಲ ಭಾರತೀಯ ಸಹ ಮಹಿಳಾ ಪ್ರಮುಖ್‌ ಬಿ.ಆರ್‌. ರಶ್ಮಿ, ರಾಜ್ಯ ವೈದ್ಯಕೀಯ ಪ್ರಕೋಷ್ಠದ ಸದಾನಂದ, ಟ್ರಸ್ಟ್‌ ಅಧ್ಯಕ್ಷ ಜೋಗೀಗೌಡ, ಟ್ರಸ್ಟ್‌ನ ಸುಜಾತಮ್ಮ, ಪುಟ್ಟಮ್ಮ, ಮುಖಂಡ ಸಿದ್ದರಾಮಯ್ಯ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.