ADVERTISEMENT

ಹಲಗೂರು | 'ಹುಲಿಗಳ ನೆಲೆ ಸಂರಕ್ಷಿಸಬೇಕಿದೆ'

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2025, 2:51 IST
Last Updated 1 ಆಗಸ್ಟ್ 2025, 2:51 IST
ಹಲಗೂರು ಸಮೀಪದ ಬ್ಯಾಡರಹಳ್ಳಿ ಮೊರಾರ್ಜಿ ವಸತಿ ಶಾಲೆಯಲ್ಲಿ ವಿಶ್ವ ಹುಲಿ ದಿನ ಆಚರಣೆ ಕಾರ್ಯಕ್ರಮದಲ್ಲಿ ಸಿ.ತೇಜಸ್ ಮಾತನಾಡಿದರು
ಹಲಗೂರು ಸಮೀಪದ ಬ್ಯಾಡರಹಳ್ಳಿ ಮೊರಾರ್ಜಿ ವಸತಿ ಶಾಲೆಯಲ್ಲಿ ವಿಶ್ವ ಹುಲಿ ದಿನ ಆಚರಣೆ ಕಾರ್ಯಕ್ರಮದಲ್ಲಿ ಸಿ.ತೇಜಸ್ ಮಾತನಾಡಿದರು   

ಹಲಗೂರು: ಮಾನವನ ದುರಾಸೆಯಿಂದಾಗಿ ಸಂರಕ್ಷಿತ ಕಾಡು ನಾಶ ಆಗುತ್ತಿದ್ದು, ಹುಲಿಗಳ ನೆಲೆಗಳು ಅಪಾಯದ ಅಂಚಿಗೆ ತಲುಪುತ್ತಿವೆ ಎಂದು ವನೋದಯ ಸ್ವಯಂ ಸೇವಾ ಸಂಸ್ಥೆ ಪ್ರಕೃತಿ ಶಿಕ್ಷಕ ವಿ.ತೇಜಸ್ ಆತಂಕ ವ್ಯಕ್ತಪಡಿಸಿದರು.

ಕಾವೇರಿ ವನ್ಯಜೀವಿ ವಲಯ ಹಲಗೂರು ಮತ್ತು ವನೋದಯ ಸ್ವಯಂ ಸೇವಾ ಸಂಸ್ಥೆ ವತಿಯಿಂದ ಸಮೀಪದ ಬ್ಯಾಡರಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅಂಬೇಡ್ಕರ್ ಸಭಾಂಗಣದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ‘ವಿಶ್ವ ಹುಲಿ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹುಲಿಗಳ ಸಂತತಿ ವಾಸವಿರುವ ಕಾಡು ಸಮೃದ್ಧವಾಗಿದೆ ಎಂದರ್ಥ. ಹುಲಿಗಳಿಗೆ ಆಹಾರಕ್ಕಾಗಿ ವಾರ್ಷಿಕ ಸುಮಾರು 50ಕ್ಕೂ ಹೆಚ್ಚು ಬಲಿ ಪ್ರಾಣಿಗಳು ಬೇಕಾಗಲಿವೆ. ಹುಲಿ ಕಾಡಿನಲ್ಲಿ ಕಾಟಿ, ಜಿಂಕೆ, ಕೃಷ್ಣಮೃಗ, ಕಾಡುಹಂದಿ ಸೇರಿ ಹಲವು ಬಗೆಯ ಬಲಿ ಪ್ರಾಣಿಗಳು ಸಮೃದ್ಧವಾಗಿ ಇದ್ದಾಗ ಹುಲಿಗಳ ಸಂತತಿ ಹೆಚ್ಚಲು ಸಾಧ್ಯ ಎಂದರು.

ADVERTISEMENT

ಕಾಡುಹಂದಿ, ಜಿಂಕೆ ಮುಂತಾದ ಪ್ರಾಣಿಗಳನ್ನು ಕಳ್ಳ ಬೇಟೆಗಾರರು ಕೊಲ್ಲುತ್ತಿದ್ದಾರೆ. ದನಗಾಹಿಗಳು ಹಸುಗಳಿಗೆ ಹೊಸ ಹುಲ್ಲು ಚಿಗರಲಿ ಎಂದು ಕಾಡಿಗೆ ಬೆಂಕಿ ಹಚ್ಚುತ್ತಿದ್ದಾರೆ. ಇದರಿಂದಾಗಿ ಕಾಡು ನಾಶದ ಜೊತೆಗೆ ಹಲವು ಬಗೆಯ ವನ್ಯಜೀವಿಗಳು ಸಾವನ್ನಪ್ಪುತ್ತಿವೆ. ಪರಿಣಾಮ ಹುಲಿಗಳು ದೈನಂದಿನ ಆಹಾರ ಕೊರತೆಯಿಂದ ಸಾವನ್ನಪ್ಪಲಿವೆ ಎಂದು ವಿಷಾದ ವ್ಯಕ್ತಪಡಿಸಿದರು.

ದೇಶದಲ್ಲಿ ಅವನತಿಯ ಹಾದಿಯಲ್ಲಿರುವ ಹುಲಿಗಳ ಸಂತತಿಯನ್ನು ಮತ್ತೆ ಹೆಚ್ಚಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಭದ್ರಾ ಅಭಯಾರಣ್ಯದ ವಾಸಿಗಳಿಗೆ ಪರ್ಯಾಯ ಬದುಕು ಕಟ್ಟಿಕೊಟ್ಟ ಪರಿಣಾಮ ಆ ಭಾಗದಲ್ಲಿ ವನ್ಯಜೀವಿ ಸಂಖ್ಯೆ ಹೆಚ್ಚಳ ಆಗಿರುವುದು ರುಜುವಾತಾಗಿದೆ. ಸರ್ಕಾರದ ಕಟ್ಟುನಿಟ್ಟಿನ ಕ್ರಮಗಳ ಜೊತೆಗೆ ಕಾಡಂಚಿನ ಗ್ರಾಮಗಳ ನಿವಾಸಿಗಳು, ಸಾರ್ವಜನಿಕರು, ಸಂಘ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು ಒಗ್ಗೂಡಿ ಕೆಲಸ ಮಾಡಿದರೇ ಹುಲಿಗಳ ನೆಲೆಗಳ ಸಂರಕ್ಷಣೆ ಸಾಧ್ಯ ಎಂದರು.

ವನೋದಯ ಸಂಸ್ಥೆ ನಿರ್ಮಿಸಿರುವ ಸುಮಾರು 45 ನಿಮಿಷಗಳ ಅವಧಿಯ ಹುಲಿಗಳ ಜೀವನ ಶೈಲಿ, ಹುಲಿಗಳು ಎದುರಿಸುತ್ತಿರುವ ಸಮಸ್ಯೆಗಳು ಕುರಿತ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು.

ಪ್ರಾಂಶುಪಾಲ ಬಿ.ಎಂ.ಸತೀಶ್, ಗಸ್ತು ಅರಣ್ಯ ಪಾಲಕ ಸಿದ್ದರಾಮ ಪೂಜಾರಿ, ವನೋದಯ ಕ್ಷೇತ್ರ ಸಂಯೋಜಕ ಮಹೇಶ್ ಕುಮಾರ್, ಶಿಕ್ಷಕರಾದ ವಿಜಯ್ ಕುಮಾರ್, ಸಂದೀಪ್, ವೆಂಕಟಸ್ವಾಮಿ, ರಂಜಿತ್, ಲಕ್ಷಯ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.