
ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): ‘ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಣೆಯನ್ನು ಆರಂಭಿಸುವ ಮೂಲಕ ಅವರ ಹೆಸರಿಗೆ ಕಳಂಕ ತಂದಿದೆ’ ಎಂದು ಶಾಸಕ, ಟಿಪ್ಪು ವಕ್ಫ್ ಎಸ್ಟೇಟ್ ಅಧ್ಯಕ್ಷ ತನ್ವೀರ್ ಸೇಠ್ ಇಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
‘ಟಿಪ್ಪು ಜಯಂತಿ’ ಅಂಗವಾಗಿ ಸೋಮವಾರ ಅವರು ಸಮೀಪದ ಗಂಜಾಂನ ಗುಂಬಸ್‌ನಲ್ಲಿ ಇರುವ ಟಿಪ್ಪು ಸಮಾಧಿಗೆ ಪುಷ್ಪಚಾದರವನ್ನು ಹೊದಿಸಿ ಮಾತನಾಡಿದರು.
‘ಸರ್ಕಾರದಿಂದ ಆಚರಣೆ ಶುರು ಮಾಡಿದ ಬಳಿಕ ಆತನ ಬಗ್ಗೆ ದ್ವೇಷ, ಅಪಪ್ರಚಾರಗಳು ಹೆಚ್ಚಾಗಿವೆ’ ಎಂದು ಅವರು ಅಭಿಪ್ರಾಯಪಟ್ಟರು.
‘ಸುಳ್ಳನ್ನು ಹತ್ತಾರು ಬಾರಿ ಹೇಳುವ ಮೂಲಕ ಸತ್ಯ ಎಂದು ನಂಬಿಸುವ ಹುನ್ನಾರ ನಡೆಯುತ್ತಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ತನ್ವೀರ್ ದೂರಿದರು.
‘ಅಂತಿಮವಾಗಿ ಸತ್ಯಕ್ಕೇ ಜಯ ಸಿಗುತ್ತದೆ. ಅಭಿಮಾನಿಗಳು ಪ್ರಪಂಚದ ಮೂಲೆ ಮೂಲೆಗಳಲ್ಲಿ ಟಿಪ್ಪು ಜಯಂತಿ ಆಚರಿಸುತ್ತಾ ಬಂದಿದ್ದಾರೆ. ಅದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ’ ಎಂದು ಹೇಳಿದರು.
‘ಟಿಪ್ಪು ಈ ದೇಶದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ. ನಾಡಿನ ರಕ್ಷಣೆಗಾಗಿ ಬ್ರಿಟಿಷರನ್ನು ಕೆಚ್ಚೆದೆಯಿಂದ ಎದುರಿಸಿದ ವೀರ. ಕೇವಲ 200 ಹಳ್ಳಿಗಳಿದ್ದ ಮೈಸೂರು ರಾಜ್ಯವನ್ನು ಹೈದರಾಬಾದ್ ಮತ್ತು ಸೇಲಂವರೆಗೆ ವಿಸ್ತರಿಸಿದ. ಶ್ರೀರಂಗಪಟ್ಟಣದಲ್ಲಿ ದಸರಾ ಆಚರಣೆ ಮುಂದುವರಿಸಿದ. ಒಡೆಯರ್ ದೊರೆಗಳಿಗೆ ನೀಡಿದ ವಾಗ್ದಾನವನ್ನು ಉಳಿಸಿಕೊಂಡಿರುವುದು ಚರಿತ್ರೆಯ ಪುಟಗಳಲ್ಲಿ ದಾಖಲಾಗಿದೆ’ ಎಂದು ತಿಳಿಸಿದರು.
ಟಿಪ್ಪು ಜಯಂತಿ ಆಚರಿಸಿ ಎಂದು ಯಾರೂ ಸರ್ಕಾರಕ್ಕೆ ಯಾರೂ ಅರ್ಜಿ ಕೊಟ್ಟಿರಲಿಲ್ಲ– ತನ್ವೀರ್ ಸೇಠ್, ಶಾಸಕ ಟಿಪ್ಪು ವಕ್ಫ್ ಎಸ್ಟೇಟ್ ಅಧ್ಯಕ್ಷ
ಬಿಗಿ ಭದ್ರತೆಯಲ್ಲಿ ಜಯಂತಿ ಆಚರಣೆ
ಶ್ರೀರಂಗಪಟ್ಟಣದಲ್ಲಿ ಸೋಮವಾರ ಪೊಲೀಸ್ ಭದ್ರತೆಯಲ್ಲಿ ಪ್ರಗತಿಪರ ಸಂಘಟನೆಗಳ ವತಿಯಿಂದ ಟಿಪ್ಪು ಜಯಂತಿ ಆಚರಿಸಲಾಯಿತು. ಇಲ್ಲಿನ ವಾಟರ್ ಗೇಟ್ ಸಮೀಪ ಟಿಪ್ಪು ಮೃತದೇಹ ದೊರೆತ ಸ್ಥಳದಲ್ಲಿರುವ ಸ್ಮಾರಕಕ್ಕೆ ಮುಖಂಡರು ಪುಷ್ಪನಮನ ಸಲ್ಲಿಸಿದರು. ಟಿಪ್ಪು ಸುಲ್ತಾನ್ ಪರ ಘೋಷಣೆ ಕೂಗಿದರು. ನಿಷೇಧಾಜ್ಞೆ ಕಾರಣ ಹೆಚ್ಚು ಜನ ಸೇರದಂತೆ ಪೊಲೀಸರು ತಿಳಿಸಿದರು. ಸ್ಮಾರಕ ಸಮಾಧಿ ಬಳಿ ಪೊಲೀಸರನ್ನು ನಿಯೋಜಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.