ADVERTISEMENT

ಕೆಆರ್‌ಎಸ್ ನಿರ್ಮಾಣ: ಪ್ರಯತ್ನಿಸಿದ್ದ ಟಿಪ್ಪು, ನಿರ್ಮಿಸಿದ್ದು ನಾಲ್ವಡಿ!

ಗಣಂಗೂರು ನಂಜೇಗೌಡ
Published 4 ಆಗಸ್ಟ್ 2025, 21:20 IST
Last Updated 4 ಆಗಸ್ಟ್ 2025, 21:20 IST
ಕೃಷ್ಣರಾಜಸಾಗರ ಅಣೆಕಟ್ಟೆ
ಕೃಷ್ಣರಾಜಸಾಗರ ಅಣೆಕಟ್ಟೆ   

ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): ಕನ್ನಂಬಾಡಿ ಗ್ರಾಮದ ಬಳಿ ಕಾವೇರಿ ನದಿಗೆ ಅಣೆಕಟ್ಟೆ ಕಟ್ಟಲು ಟಿಪ್ಪು ಸುಲ್ತಾನ್‌ 18ನೇ ಶತಮಾನದ ಅಂತ್ಯದಲ್ಲಿ ಪ್ರಯತ್ನಿಸಿದ್ದರಾದರೂ ಅದೇ ಸ್ಥಳದಲ್ಲಿ ಅಣೆಕಟ್ಟೆ ನಿರ್ಮಿಸಿದವರು ನಾಲ್ವಡಿ ಕೃಷ್ಣರಾಜ ಒಡೆಯರ್‌.

ಕೃಷ್ಣರಾಜ ಸಾಗರ ಅಣೆಕಟ್ಟೆಯ ದಕ್ಷಿಣ ದ್ವಾರದ ಪೂರ್ವ ಭಾಗದ ಗೋಡೆಯ ಮೇಲಿರುವ ಫಲಕಗಳ ಪ್ರಕಾರ ಟಿಪ್ಪು 1794ರಲ್ಲಿ, 70ಅಡಿ ಎತ್ತರದ ಅಣೆಕಟ್ಟೆ ನಿರ್ಮಿಸಲು ಅಸ್ತಿಭಾರ ಹಾಕಿಸಿದ್ದರು. ಇಲ್ಲಿರುವ ಪರ್ಷಿಯನ್‌, ಇಂಗ್ಲಿಷ್‌ ಮತ್ತು ಕನ್ನಡ ಭಾಷೆಯ ಶಿಲಾ ಫಲಕಗಳಲ್ಲಿ ಈ ಉಲ್ಲೇಖಗಳಿವೆ.

‘ಚರಿತ್ರೆಯ ಪುಟಗಳಲ್ಲಿರು ಲಿಖಿತ ಮಾಹಿತಿಯನ್ನು ಆಧರಿಸಿ ಈ ಶಿಲಾ ಫಲಕ ಕೆತ್ತಿರುವ ಸಾಧ್ಯತೆ ಇದೆ’ ಎಂಬುದು ಇತಿಹಾಸಕಾರ ಪ್ರೊ.ಪಿ.ವಿ. ನಂಜರಾಜ ಅರಸು ಅವರ ಮಾತು.

ADVERTISEMENT

‘ಟಿಪ್ಪು ಕಾಲದಲ್ಲಿ ಕನ್ನಂಬಾಡಿ ಬಳಿ ಅಣೆಕಟ್ಟೆ ನಿರ್ಮಾಣ ಕಾರ್ಯ ಆರಂಭವಾಗಿತ್ತು’ ಎನ್ನಲು ಫಲಕ ಹೊರತುಪಡಿಸಿ ಇತರ ಯಾವುದೇ ಕುರುಹು ಸಿಕ್ಕಿಲ್ಲ.

ವಿಶೇಷವೆಂದರೆ, ಅಣೆಕಟ್ಟೆಗೆ ಹೊಂದಿಕೊಂಡ ಬೃಂದಾವನದ ದಕ್ಷಿಣ ತುದಿಯಲ್ಲಿ, 1940ರ ನಂತರ ಸ್ಥಾಪಿಸಿರುವ ನಾಲ್ವಡಿ ಕೃಷ್ಣರಾಜ ಒಡೆಯರ್‌ ಪುತ್ಥಳಿಯ ಪೀಠದಲ್ಲಿಯೂ ‘ಪರ್ಷಿಯನ್‌’ ಭಾಷೆಯ ಫಲಕ ಹಾಕಲಾಗಿದೆ. ‘ಈ ಫಲಕ ಹೇಗೆ ಬಂತು’ ಎಂಬ ಪ್ರಶ್ನೆಗೆ ಅಧಿಕಾರಿಗಳ ಬಳಿ ಉತ್ತರವಿಲ್ಲ.

ಸರ್‌ ಎಂ.ವಿ. ನೀಲನಕ್ಷೆ:

1799ರಲ್ಲಿ ಟಿಪ್ಪು ಸುಲ್ತಾನ್‌ ಅಂತ್ಯಗೊಂಡ 112 ವರ್ಷದ ಬಳಿಕ, 1911ರಲ್ಲಿ ಟಿಪ್ಪು ಅಡಿಗಲ್ಲು ಹಾಕಿದ್ದರು ಎನ್ನಲಾದ ಸ್ಥಳದ ಸಮೀಪವೇ ನಾಲ್ವಡಿ ಅವರ ಕಾಲದಲ್ಲಿ ಕಾವೇರಿ ನದಿಗೆ ಕಟ್ಟೆ ಕಟ್ಟುವ ಕಾರ್ಯ ಆರಂಭವಾಯಿತು. ಮೈಸೂರು ಸಂಸ್ಥಾನದ ಮುಖ್ಯ ಎಂಜಿನಿಯರ್‌ ಸರ್‌ ಎಂ.ವಿಶ್ವೇಶ್ವರಯ್ಯ 1910ರಲ್ಲಿ ನೀಲನಕ್ಷೆ ರೂಪಿಸಿದ್ದರು.

₹2.53 ಕೋಟಿ ವೆಚ್ಚದ ಬೃಹತ್‌ ಯೋಜನೆಗೆ 1911ರ ಅಕ್ಟೋಬರ್‌ 12ರಂದು ಮೈಸೂರು ಸರ್ಕಾರ ಅಧಿಕೃತ ಆದೇಶ (ಸರ್ಕಾರದ ಆದೇಶ ಸಂಖ್ಯೆ: ಸಿ.–13198490)ವನ್ನೂ ಹೊರಡಿಸಿತು. 

‘ನಿರ್ಮಾಣಕ್ಕೆ ಹಣಕಾಸಿನ ಕೊರತೆ ಉಂಟಾದಾಗ, ನಾಲ್ವಡಿ ಅವರು ಖಾಸಗಿ ಭಂಡಾರದಲ್ಲಿದ್ದ 3 ಮೂಟೆ ಚಿನ್ನಾಭರಣ ಮತ್ತು ವಜ್ರ ವೈಢೂರ್ಯಗಳನ್ನು ಮುಂಬೈ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ, ಅದರಿಂದ ಬಂದ ಹಣವನ್ನು ಕೊಟ್ಟರು’ ಎಂಬ ಅಂಶ ಇತಿಹಾಸಕಾರ ಪ್ರೊ.ಪಿ.ವಿ. ನಂಜರಾಜ ಅರಸು ಅವರ ‘ನಾನು ಕನ್ನಂಬಾಡಿ ಕಟ್ಟೆ’ ಪುಸ್ತಕ ಸೇರಿದಂತೆ ವಿವಿಧ ಕೃತಿಗಳಲ್ಲಿ ದಾಖಲಾಗಿದೆ. 

1915ರ ವೇಳೆಗೆ 65 ಅಡಿ ಎತ್ತರದ ಅಣೆಕಟ್ಟೆ ನಿರ್ಮಾಣವಾಗಿತ್ತು. 1931ರ ಹೊತ್ತಿಗೆ 130 ಅಡಿ ಎತ್ತರದ (ನೀರು ನಿಲ್ಲುವ ಎತ್ತರ– 124.80 ಅಡಿ) ಅಣೆಕಟ್ಟೆ ನಿರ್ಮಾಣ ಕಾರ್ಯ ಪೂರ್ಣಗೊಂಡಿತು.

ಅಣೆಕಟ್ಟೆ ದಕ್ಷಿಣ ದ್ವಾರದಲ್ಲಿ ಇರುವ ಟಿಪ್ಪು ಸುಲ್ತಾನ್‌ ಚಿತ್ರಸಹಿತ ಫಲಕ
ಕೆಆರ್‌ಎಸ್‌ ಬೃಂದಾವನದ ದಕ್ಷಿಣದಲ್ಲಿ 1940ರ ನಂತರ ಸ್ಥಾಪಿಸಿರುವ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಪುತ್ಥಳಿ
ಈಗ ಅಣೆಕಟ್ಟೆಯ ದಕ್ಷಿಣ ದ್ವಾರದಲ್ಲಿರುವ ಟಿಪ್ಪು ಸುಲ್ತಾನ್‌ ಭಾವಚಿತ್ರ ಸಹಿತ ಫಲಕವನ್ನು ಯಾರು ಯಾವಾಗ ಹಾಕಿಸಿದ್ದಾರೆ ಎಂಬ ಮಾಹಿತಿ ಲಭ್ಯವಿಲ್ಲ
ವಿ.ಜಯಂತ್‌ ಇ.ಇ. ಕಾವೇರಿ ನೀರಾವರಿ ನಿಗಮ

ಫಲಕದಲ್ಲಿ ಏನಿದೆ...?

  ‘ಪೈಗಂಬರ್‌ ಮಹಮ್ಮದರ ಜನ್ಮದಿನದಿಂದ ಪ್ರಾರಂಭವಾದ ಸೌರಮಾನ ಶಕೆ ಸಾವಿರದ ಇನ್ನೂರ ಇಪ್ಪತ್ತೊಂದನೆ ಸಂವತ್ಸರವಾದ ಷಾದಾಬ್ ಶುಭ ವರ್ಷದ ತಕಿ ಮಾಸದ ಇಪ್ಪತ್ತೊಂದನೆ ತೇದಿಯಾದ ಶುಭ ದಿವಸ...’ ಎಂದು ಫಲಕದ ಸಾಲು ಆರಂಭವಾಗುತ್ತದೆ. ‘ಭಗವಂತನ ಛಾಯಾ ಸ್ವರೂಪರಾದ ಹಜರತ್‌ ಟಿಪ್ಪು ಸುಲ್ತಾನರಾದ ನಾವು ರಾಜಧಾನಿಗೆ ಪಶ್ಚಿಮ ದಿಕ್ಕಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಚಿರಸ್ಥಾಯಿಯಾದ ಅಣೆಕಟ್ಟೆಯನ್ನು ಕಟ್ಟಿಸಲು ಶಂಕುಸ್ಥಾಪನೆ ಮಾಡಿಸಿದ್ದೇವೆ’ ಎಂದೂ ಬರೆಯಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.