ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): ‘ಕನ್ನಂಬಾಡಿ ಕಟ್ಟೆ (ಕೃಷ್ಣರಾಜಸಾಗರ ಜಲಾಶಯ) ನಿರ್ಮಾಣಕ್ಕೆ ಮೊದಲು ಅಡಿಗಲ್ಲು ಹಾಕಿದ್ದೇ ಟಿಪ್ಪು ಸುಲ್ತಾನ್. ಅದನ್ನು ಹೇಳಿಕೊಳ್ಳಲು ಧೈರ್ಯವೇ ಇಲ್ಲವಾಗಿದೆ’ ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ಇಲ್ಲಿ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಡಾ.ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
‘ಶ್ರೀರಂಗಪಟ್ಟಣ ಐತಿಹಾಸಿಕ ಸ್ಥಳ. ಒಂದು ಕಡೆ ಮಸೀದಿ, ಇನ್ನೊಂದೆಡೆ ದೇವಸ್ಥಾನ ಇದೆ. ಒಂದೆಡೆ ಅಲ್ಲಾಹು ಅಕ್ಬರ್ ಎನ್ನುತ್ತಾರೆ, ದೇವಸ್ಥಾನದಲ್ಲಿ ಗಂಟೆ ಬಾರಿಸಲಾಗುತ್ತದೆ. ಎರಡನ್ನೂ ಸಮಚಿತ್ತದಿಂದ ಕೇಳಿಸಿಕೊಂಡು ಇದ್ದರಲ್ಲವೇ ಅವರು?’ ಎಂದು ಕೇಳಿದರು.
‘ಟಿಪ್ಪು ದೇವದಾಸಿ ಪದ್ಧತಿಯನ್ನು ನಿಷೇಧಿಸಿದರು. ಆ ಪದ್ಧತಿಗೆ ಶೋಷಿತ ಸಮಾಜದ, ಆರ್ಥಿಕ, ಶೈಕ್ಷಣಿಕ ವಂಚಿತ ಮಹಿಳೆಯರ ದೂಡಲಾಗುತ್ತಿತ್ತು. ಆ ಕಾಲದಲ್ಲೇ ಟಿಪ್ಪು ಆ ಪದ್ಧತಿ ರದ್ದುಪಡಿಸಿದರು. ಭೂ ಸುಧಾರಣಾ ಕಾಯ್ದೆ ತಂದಿದ್ದರು. ಅವರ ಕಾಲದಲ್ಲಿಯೇ ಉಳ್ಳವರಿಗೆ, ಶ್ರೀಮಂತರಿಗೆ ಒಂದಿಂಚು ಭೂಮಿಯನ್ನೂ ಕೊಟ್ಟಿರಲಿಲ್ಲ’ ಎಂದು ಸ್ಮರಿಸಿದರು.
‘ದೇಶಕ್ಕೆ ರೇಷ್ಮೆ ಕೃಷಿಯನ್ನು ತಂದವರೇ ಅವರು. ದಲಿತರಿಗೆ ಭೂಮಿ ಹಂಚಿಕೆ ಮಾಡಿದರು. ಪರಧರ್ಮ ಸಹಿಷ್ಣುವಾಗಿದ್ದ ಟಿಪ್ಪು ಹಿಂದೂ ದೇವಾಲಯಗಳಿಗೆ ದಾನ–ದತ್ತಿ ನೀಡಿದ್ದರು. ನಾಡಿನ ರಕ್ಷಣೆಗೆ ಯುದ್ಧ ಭೂಮಿಯಲ್ಲಿ ಹೋರಾಡಿದ್ದ ಅವರನ್ನು ಸ್ಮರಿಸಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.