ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಟಿಪ್ಪು ಸುಲ್ತಾನ್ 233ನೇ ಉರುಸ್ ಮಂಗಳವಾರ ಸಡಗರ, ಸಂಭ್ರಮದಿಂದ ನಡೆಯಿತು.
ಪಟ್ಟಣದ ಜಾಮೀಯಾ ಮಸೀದಿ (ಟಿಪ್ಪು ಮಸೀದಿ)ಯಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಉರುಸ್‌ಗೆ ಚಾಲನೆ ನೀಡಲಾಯಿತು. ಧಾರ್ಮಿಕ ಮುಖಂಡರು ಪವಿತ್ರ ಗಂಧವನ್ನು ಹೊತ್ತು ಹೆಜ್ಜೆ ಹಾಕಿದರು. ಮೈಸೂರು ಇತರ ಕಡೆಗಳಿಂದ ಗಂಧವನ್ನು ತಂದಿದ್ದವರು ಅದನ್ನು ಸಾರೋಟಿನಲ್ಲಿ ಇಟ್ಟು ಟಿಪ್ಪು ಸಮಾಧಿ ಸ್ಥಳ ಗುಂಬಸ್‌ವರೆಗೆ ಮರವಣಿಗೆಯಲ್ಲಿ ಕೊಂಡೊಯ್ದರು.
ಪಟ್ಟಣದ ಪುರಸಭೆ ವೃತ್ತ, ಕುವೆಂಪು ವೃತ್ತ, ಬೇಸಿಗೆ ಅರಮನೆ, ಅಬ್ಬೆದುಬ್ವಾ ಚರ್ಚ್ ಮಾರ್ಗವಾಗಿ ಗುಂಬಸ್‌ವರೆಗೆ ಮೆರವಣಿಗೆ ನಡೆಯಿತು. ಟಿಪ್ಪು ಸುಲ್ತಾನರ ಹತ್ತಾರು ಅಡಿ ಎತ್ತರದ ಕಟೌಟ್‌ಗಳು ಹಾಗೂ ಅಲಂಕೃತ ಕುದುರೆಗಳು ಮೆರವಣಿಗೆಯಲ್ಲಿ ಗಮನ ಸೆಳೆದವು. ಕಲಾವಿದರು ದಾರಿಯುದ್ದಕ್ಕೂ ಕವ್ವಾಲಿ ಹಾಡಿದರು. ಯುವಕರು ಪಟಾಕಿ ಸಿಡಿಸಿ ಸಂಭ್ರಮಿಸಿದವು. ಟಿಪ್ಪು ಸುಲ್ತಾನ್ ಪರ ಘೋಷಣೆ ಕೂಗಿದರು. ಈ ಬಾರಿ ಮಹಿಳೆಯರು ಕೂಡ ಉರುಸ್ ಉತ್ಸವದಲ್ಲಿ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.
ಟಿಪ್ಪು ಸಮಾಧಿ ಸ್ಥಳ ಗುಂಬಸ್‌ನಲ್ಲಿ ಟಿಪ್ಪು ಮತ್ತು ಅವರ ತಂದೆ ಹೈದರ್ ಅಲಿ ಅವರ ಸಮಾಧಿಗೆ ಪವಿತ್ರ ಗಂಧವನ್ನು ಲೇಪಿಸಲಾಯಿತು. ವಿವಿಧೆಡೆಗಳಿಂದ ಬಂದಿದ್ದವರು ಸಮಾಧಿಗಳಿಗೆ ಪುಷ್ಪ ಚಾದರ ಹೊದಿಸಿ ಪ್ರಾರ್ಥನೆ ಸಲ್ಲಿಸಿದರು. ಕುರ್‌ಆನ್ ಪಠಣ ನಡೆಯಿತು. ಮೈಸೂರು, ಮಂಡ್ಯ, ಚನ್ನಪಟ್ಟಣ, ರಾಮನಗರ, ಪಾಂಡವಪುರ ಇತರ ಕಡೆಗಳಿಂದಲೂ ಮುಸ್ಲಿಮರು ಆಗಮಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.