ADVERTISEMENT

ಟೌನ್‌ಶಿಪ್‌ ಹೆಸರಿನಲ್ಲಿ ಸರ್ಕಾರದಿಂದ ಲೂಟಿ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 6:39 IST
Last Updated 7 ನವೆಂಬರ್ 2025, 6:39 IST
ಎಚ್‌.ಡಿ.ಕುಮಾರಸ್ವಾಮಿ 
ಎಚ್‌.ಡಿ.ಕುಮಾರಸ್ವಾಮಿ    

ಮಂಡ್ಯ: ‘ಬಿಡದಿ ಟೌನ್‌ಶಿಪ್‌ ಹೆಸರಿನಲ್ಲಿ ರಾಜ್ಯ ಸರ್ಕಾರ 9 ಸಾವಿರ ಎಕರೆ ಫಲವತ್ತಾದ ಭೂಮಿಯನ್ನು ಲೂಟಿ ಹೊಡೆಯಲು ಹೊರಟಿದೆ. ಯಾರೂ ಒಂದು ಇಂಚು ಭೂಮಿ ಕೊಡಬೇಡಿ. ಹೆದರುವ ಅಗತ್ಯವಿಲ್ಲ. ಜನರೊಂದಿಗೆ ನಾನಿದ್ದೇನೆ’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು. 

ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ಟೌನ್‌‌ಶಿಪ್‌ ಅನ್ನು ರೈತರು ವಿರೋಧಿಸುತ್ತಿದ್ದರೂ ಸರ್ಕಾರ ಸ್ಪಂದಿಸದೆ, ರಿಯಲ್ ಎಸ್ಟೇಟ್ ಕುಳಗಳಿಗೆ ಮಿಡಿಯುತ್ತಿದೆ’ ಎಂದು ಆರೋಪಿಸಿದರು. 

‘ಟೌನ್‌ಶಿಪ್‌ ಬಗ್ಗೆ ನನ್ನ ಕಾಲದಲ್ಲಿ ಆದ ತೀರ್ಮಾನವೇ ಬೇರೆ, ಇವತ್ತಿನ ತೀರ್ಮಾನಗಳೇ ಬೇರೆ. ಅಂದು ಭೂಮಿ ಬೆಲೆ ದೊಡ್ಡ ಮಟ್ಟದಲ್ಲಿರಲಿಲ್ಲ. ಆದರೆ, ಇವತ್ತು ಭಾರಿ ಬೆಲೆ ಬಂದಿದೆ’ ಎಂದರು. 

ADVERTISEMENT

‘ಸರ್ಕಾರ ಸ್ವಾಧೀನಪಡಿಸಿಕೊಳ್ಳಲು ಹೊರಟಿರುವ ಭೂಮಿಯ ವ್ಯಾಪ್ತಿಯಲ್ಲಿಯೇ ಈಗಲ್‌ಟನ್ ಗಾಲ್ಫ್ ಕ್ಲಬ್ ಇದೆ. ಅದು ಸರ್ಕಾರಿ ಕರಾಬು ಭೂಮಿ ಅತಿಕ್ರಮಿಸಿದೆ ಎಂದು ಆರೋಪಿಸಿ 2018ರಲ್ಲಿ ಚದರ ಅಡಿ ಲೆಕ್ಕದಲ್ಲಿ ದಂಡವನ್ನೂ ವಿಧಿಸಿದ್ದಾರೆ. ಹಿಂದೆ, ಡಿ.ಕೆ. ಶಿವಕುಮಾರ್ ಅವರು ಅಲ್ಲಿಗೆ ಊಟಕ್ಕೆ ಹೋದಾಗ ಅಲ್ಲಿನ ಸಿಬ್ಬಂದಿ ₹98 ಸಾವಿರ ಬಿಲ್ ಕೊಟ್ಟಿದ್ದರು. ನನಗೇ ಬಿಲ್ ಕೊಡುತ್ತೀರಾ ಎಂದು 70 ಎಕರೆ ಕರಾಬು ಭೂಮಿಗೆ ₹984 ಕೋಟಿ ದಂಡ ವಿಧಿಸಿದ್ದರು’ ಎಂದು ಆರೋಪಿಸಿದರು. 

‘ಪ್ರತಿ ಎಕರೆಗೆ ₹13 ಕೋಟಿ ದಂಡ ವಿಧಿಸಬೇಕು ಎಂದು ಸಂಪುಟ ಸಭೆ ತೀರ್ಮಾನಿಸಿತ್ತು. ಅದರಂತೆ ರೈತರಿಗೆ 1:3 ಅನುಪಾತದಲ್ಲಿ ಪರಿಹಾರ ಕೊಟ್ಟುಬಿಡಿ’ ಎಂದು ಒತ್ತಾಯಿಸಿದರು.

‘ಕನಕಪುರದಲ್ಲಿ ಒಣ ಬೇಸಾಯದ ಭೂಮಿ ಇದೆ. ಅದನ್ನೇ ವಶಕ್ಕೆ ತೆಗೆದುಕೊಂಡು ಟೌನ್‌ಶಿಪ್‌ ಮಾಡಬಹುದಲ್ಲವೇ? ಬಿಡದಿಯ ಮೇಲೆಯೇ ಯಾಕೆ ಬಿದ್ದಿದ್ದೀರಿ? ಕೃಷಿಗೆ ಉತ್ತಮವಾದ ವಾತಾವರಣವಿರುವ ಕಡೆ ರೈತರನ್ನು ಒಕ್ಕಲೆಬ್ಬಿಸಬೇಡಿ’ ಎಂದರು. 

‘ರೈತರ ಬಗ್ಗೆ ಕಾಳಜಿ ಇಲ್ಲದ ದರಿದ್ರ ಸರ್ಕಾರ’

‘ಸ್ವತಂತ್ರ ಸರ್ಕಾರ ಇಲ್ಲದ ವೇಳೆಯೂ ರೈತರ ಉಳಿವಿಗಾಗಿ ಶ್ರಮವಹಿಸಿದ್ದೆ. 136 ಸೀಟಿನ ಸ್ವತಂತ್ರ ಸರ್ಕಾರ ಇವರಿಗೇನಾಗಿದೆ ದರಿದ್ರ? ರೈತರನ್ನು 7 ದಿನದಿಂದ ರಸ್ತೆಯಲ್ಲಿ ಮಲಗಿಸಬೇಕಿತ್ತಾ? ಕಾಳಜಿ ಇದ್ದಿದ್ದರೆ ಈ ರೀತಿ ಮಾಡುತ್ತಿರಲಿಲ್ಲ’ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

‘ಶಾಸಕ ಮೇಟಿಯವರ ಅಂತಿಮ ದರ್ಶನಕ್ಕೆ ಹೋಗಿದ್ದ ಮುಖ್ಯಮಂತ್ರಿ ಯವರು ಅಲ್ಲೇ ಪಕ್ಕದಲ್ಲೇ ನಡೆಯುತ್ತಿದ್ದ ಪ್ರತಿಭಟನೆ ಜಾಗಕ್ಕೆ ಹೋಗಬಹುದಿತ್ತಲ್ವವೇ? ಅಹಿಂದಾ ಹೆಸರಲ್ಲಿ ದೊಡ್ಡ ರ‍್ಯಾಲಿ ಮಾಡುವೆ ಎನ್ನುತ್ತಾರೆ. ಅದೆಲ್ಲಾ ಯಾವ ಪುರುಷಾರ್ಥಕ್ಕೆ’ ಎಂದು ಪ್ರಶ್ನಿಸಿದರು.

‘ರೈತರು ಬೆಲೆ ನಿಗದಿ ಮಾಡಿ ಎಂದರೆ ಕೇಂದ್ರ ಸರ್ಕಾರ ಹಣ ಕೊಡಬೇಕೆನ್ನುತ್ತಾರೆ. ಸಾಲ ಮನ್ನಾ ಮಾಡುವಾಗ ನಾನೇನು ಕೇಂದ್ರ ಸರ್ಕಾರದ ಬಳಿಗೆ ಹೋಗಿದ್ದೆನೆ? ಸರ್ಕಾರದ ನಿರ್ಧಾರ ನೋಡಿ ಮುಂದಿನ ತೀರ್ಮಾನ ಮಾಡುತ್ತೇವೆ. ರೈತರ ಬದುಕಿನ ಜತೆ ಕಾಂಗ್ರೆಸ್ ಸರ್ಕಾರ ಚೆಲ್ಲಾಟ ಆಡುತ್ತಿದೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.