ADVERTISEMENT

ಟ್ರಾಫಿಕ್‌ ವಾರ್ಡನ್ಸ್‌ ಸಂಸ್ಥೆಗೆ ಬೆಳ್ಳಿ ಸಂಭ್ರಮ

ಪ್ರತಿಫಲಾಪೇಕ್ಷೆ ಇಲ್ಲದೆ ಪೊಲೀಸರಿಗೆ ಭದ್ರತಾ ಸಹಾಯ ಮಾಡುತ್ತಿರುವ ಸ್ವಯಂ ಸೇವಕರು

ಎಂ.ಎನ್.ಯೋಗೇಶ್‌
Published 29 ಸೆಪ್ಟೆಂಬರ್ 2019, 11:11 IST
Last Updated 29 ಸೆಪ್ಟೆಂಬರ್ 2019, 11:11 IST
ಜಿಲ್ಲಾ ಟ್ರಾಫಿಕ್‌ ವಾರ್ಡನ್ಸ್‌ ಸಂಸ್ಥೆಯ ಮುಖ್ಯ ವಾರ್ಡನ್‌ ಡಿ.ವಿನ್ಸೆಂಟ್‌ ಪೊಲೀಸ್‌ ಸಿಬ್ಬಂದಿಯೊಂದಿಗೆ ಭದ್ರತೆಯಲ್ಲಿ ತೊಡಗಿದ್ದರು
ಜಿಲ್ಲಾ ಟ್ರಾಫಿಕ್‌ ವಾರ್ಡನ್ಸ್‌ ಸಂಸ್ಥೆಯ ಮುಖ್ಯ ವಾರ್ಡನ್‌ ಡಿ.ವಿನ್ಸೆಂಟ್‌ ಪೊಲೀಸ್‌ ಸಿಬ್ಬಂದಿಯೊಂದಿಗೆ ಭದ್ರತೆಯಲ್ಲಿ ತೊಡಗಿದ್ದರು   

ಮಂಡ್ಯ: ಪೊಲೀಸ್‌ ಭದ್ರತೆಗೆ ಸಹಾಯ, ಸಂಚಾರ ನಿಯಮಗಳ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಸ್ಥಾಪಿಸಲಾಗಿದ್ದ ‘ಮಂಡ್ಯ ಜಿಲ್ಲಾ ಟ್ರಾಫಿಕ್‌ ವಾರ್ಡನ್ಸ್‌ ಸೇವಾ ಸಂಸ್ಥೆ’ ಸದ್ದುಗದ್ದಲವಿಲ್ಲದೇ 25 ವರ್ಷ ಪೂರೈಸಿದ್ದು, ಇದೀಗ ಬೆಳ್ಳಿಹಬ್ಬ ಆಚರಿಸಿಕೊಳ್ಳುತ್ತಿದೆ.

ನಗರದ ಕಾರ್ಮೆಲ್‌ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದ ಡಿ.ವಿನ್ಸೆಂಟ್‌ ನೇತೃತ್ವದಲ್ಲಿ 1994ರ ಗಾಂಧಿ ಜಯಂತಿಯಂದು ಸಂಸ್ಥೆ ಆರಂಭಗೊಂಡಿತು. ಮುಖ್ಯ ಟ್ರಾಫಿಕ್‌ ವಾರ್ಡನ್‌ ಆಗಿ ಸೇವೆ ಸಲ್ಲಿಸುತ್ತಿರುವ ವಿನ್ಸೆಂಟ್‌ ಅವರು 25 ವಸಂತಗಳಲ್ಲಿ ಹಲವು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಮುನ್ನಡೆಯುತ್ತಿದ್ದಾರೆ. ಪೊಲೀಸ್‌ ಭದ್ರತೆಗೆ ಸಿಬ್ಬಂದಿಯ ಅಗತ್ಯ ಉಂಟಾದಾಗ ಈ ಸಂಸ್ಥೆಯ ಸ್ವಯಂ ಸೇವಕರು ತಮ್ಮದೇ ಸಮವಸ್ತ್ರ ತೊಟ್ಟು ಪೊಲೀಸರೊಂದಿಗೆ ನಿಲ್ಲುತ್ತಾರೆ.

94ರಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದ ರಾಘವೇಂದ್ರ ಔರಾದ್ಕರ್‌, ಜಿಲ್ಲಾಧಿಕಾರಿಯಾಗಿದ್ದ ವೀರಭದ್ರಾಚಾರಿ ಮಾರ್ಗದರ್ಶನದಲ್ಲಿ ಸಂಸ್ಥೆ ಆರಂಭಿಸಲಾಯಿತು. ಮೈಸೂರು ವಿಭಾಗದ ಐಜಿಪಿಯಾಗಿದ್ದ ಜೀಜಾ ಹರಿಸಿಂಗ್‌ ಉದ್ಘಾಟಿಸಿದ್ದರು. ಟಿ.ಬಿ.ಕೃಷ್ಣಮೂರ್ತಿ, ಎನ್‌.ಸಿದ್ದರಾಜು, ಸತೀಶ್‌ಚಂದ್ರ ಜೈನ್‌, ಎಂ.ಸಿ.ಉಮೇಶ್‌, ಎಂ.ಎನ್‌.ಕೃಷ್ಣೇಗೌಡ, ರಾಘವೇಂದ್ರ, ಸಂದೇಶ್‌, ಯಶ್ವಂತ್‌ಕುಮಾರ್‌, ರಮೇಶ್‌, ರಾಜರತ್ನಂ ಮುಂತಾದವರು ಸಂಸ್ಥೆಯ ಬೆನ್ನೆಲುಬಾಗಿ ನಿಂತಿದ್ದು 25ಕ್ಕೂ ಹೆಚ್ಚು ಸ್ವಯಂ ಸೇವಕರು ಯಾವುದೇ ಸಂದರ್ಭದಲ್ಲಿ ಸೇವೆಗೆ ದೊರೆಯುತ್ತಾರೆ.

ADVERTISEMENT

ಉತ್ಸವಗಳಲ್ಲಿ ಸಹಾಯ: ದಸರಾ ವೇಳೆ ಕೆಆರ್‌ಎಸ್‌ ಜಲಾಶಯದ ಭದ್ರತಾ ಕಾರ್ಯದಲ್ಲಿ ಸ್ವಯಂ ಸೇವಕರು ಭಾಗಿಯಾಗುತ್ತಾರೆ. ಪ್ರವಾಸಿಗರ ದಟ್ಟಣೆ ಹೆಚ್ಚಾಗಿರುವ ವಾರಾಂತ್ಯದಲ್ಲೂ ಇವರನ್ನು ಬಳಸಿಕೊಳ್ಳಲಾಗುತ್ತದೆ. ಈ ಬಾರಿಯ ದಸರಾ ಉತ್ಸವದಲ್ಲೂ 10 ಮಂದಿ ಸ್ವಯಂ ಸೇವಕರು ಭದ್ರತೆಯಲ್ಲಿ ತೊಡಗಿದ್ದಾರೆ. ಮೇಲುಕೋಟೆ ವೈರಮುಡಿ ಉತ್ಸವ ಸೇರಿ ವಿವಿಧ ಆಚರಣೆಗಳಲ್ಲೂ ಭದ್ರತೆ ಒದಗಿಸುತ್ತಾರೆ.

ವೈದ್ಯಕೀಯ ಸೇವೆ: ಬಡವರಿಗೆ ವೈದ್ಯಕೀಯ ಸೇವೆ ನೀಡುವಲ್ಲೂ ಸಂಸ್ಥೆಯ ಸದಸ್ಯರು ಸಿದ್ಧಹಸ್ತರು. ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತವಾದಾಗ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ. ಇವರ ಸೇವೆಗೆ ಮೆಚ್ಚಿದ್ದ ದಿವಂಗತ ಅಂಬರೀಷ್‌ ಆಂಬುಲೆನ್ಸ್‌ ಕೊಡುಗೆಯಾಗಿ ನೀಡಿದ್ದರು. ಅದರ ಸಹಾಯದಿಂದ ಇವರು ಹಲವರ ಪ್ರಾಣ ಉಳಿಸುವಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ.

‘ಅಪಘಾತದಲ್ಲಿ ಕೇರಳ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ದೂರ ಎನ್ನುವ ಕಾರಣಕ್ಕೆ ಮೃತದೇಹವನ್ನು ಕೊಂಡೊಯ್ಯಲು ಯಾರೂ ಮುಂದೆ ಬರಲಿಲ್ಲ. ಆಗ ನಾನೇ ಆಂಬುಲೆನ್ಸ್‌ ಓಡಿಸಿಕೊಂಡು ಅವರ ಮನೆಗೆ ಮೃತದೇಹವನ್ನು ತಲುಪಿಸಿದ್ದೆ’ ಎಂದು ಮುಖ್ಯ ಟ್ರಾಫಿಕ್ ವಾರ್ಡನ್‌ ಡಿ.ವಿನ್ಸೆಂಟ್‌ ತಿಳಿಸಿದರು.

ಜಾಗೃತಿ ಕಾರ್ಯಕ್ರಮ: ರಸ್ತೆ ಸುರಕ್ಷತಾ ನಿಯಮ ಕುರಿತು ಹಲವು ಜಾಗೃತಿ ಕಾರ್ಯಕ್ರಮ ಆಯೋಜಿಸಿದ್ದಾರೆ. ರಸ್ತೆ ನಿಯಮಗಳ ಸ್ಟಿಕ್ಕರ್‌ ವಿತರಣೆ ಮಾಡಿದ್ದಾರೆ, ಕಿರು ಒತ್ತಿಗೆ ಮುದ್ರಿಸಿ ವಿತರಣೆ ಮಾಡಿದ್ದಾರೆ. ಆರ್‌ಟಿಒ ಅಧಿಕಾರಿಗಳೊಂದಿಗೆ ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಎಲ್‌ಎಲ್‌–ಡಿಎಲ್‌ ಕೊಡಿಸಿದ್ದಾರೆ. ಹೆಣ್ಣು ಮಕ್ಕಳ ಸುರಕ್ಷತೆ ಬಗ್ಗೆ ಹಲವು ಉಪನ್ಯಾಸಗಳನ್ನು ಆಯೋಜನೆ ಮಾಡಿದ್ದಾರೆ.

ರಜತ ಮಹೋತ್ಸವ ಅ.2ಕ್ಕೆ

ಮಂಡ್ಯ ಜಿಲ್ಲಾ ಟ್ರಾಫಿಕ್‌ ವಾರ್ಡನ್ಸ್‌ ಸಂಸ್ಥೆ ಅ.2 ಗಾಂಧಿ ಜಯಂತಿಯಂದು 25 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ರಜತ ಮಹೋತ್ಸವ ಆಯೋಜಿಸಲಾಗಿದೆ.

ನಗರದ ಚಾಲುಕ್ಯ ಸಭಾಂಗಣದಲ್ಲಿ ಸಂಜೆ 4 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಂ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ, ಡಿವೈಎಸ್‌ಪಿ ಗಂಗಾಧರಸ್ವಾಮಿ, ಹಿರಿಯ ಸಾಹಿತಿ ಡಾ.ಪ್ರದೀಪ್‌ಕುಮಾರ್‌ ಹೆಬ್ರಿ, ಸಹ ಪ್ರಾಧ್ಯಾಪಕ ಎಸ್‌.ಕೆ.ವೀರೇಶ್‌ ಭಾಗವಹಿಸುವರು ಎಂದು ಡಿ.ವಿನ್ಸೆಂಟ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.