ADVERTISEMENT

‘ಆರ್‌ಟಿಐ’ಯಿಂದ ಪಾರದರ್ಶಕ ಆಡಳಿತ: ಆಯುಕ್ತ ಹರೀಶ್‌ಕುಮಾರ್‌

​ಪ್ರಜಾವಾಣಿ ವಾರ್ತೆ
Published 21 ಜೂನ್ 2025, 15:17 IST
Last Updated 21 ಜೂನ್ 2025, 15:17 IST
ಮಂಡ್ಯ ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳ ಮಾಹಿತಿ ಹಕ್ಕು ಕಾಯ್ದೆಯ ಸಂವಾದ ಕಾರ್ಯಕ್ರಮದಲ್ಲಿ ರಾಜ್ಯ ಮಾಹಿತಿ ಆಯೋಗದ ಆಯುಕ್ತ ಹರೀಶ್‌ಕುಮಾರ್‌ ಮಾತನಾಡಿದರು. ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಆಯುಕ್ತ ಕೆ.ಬದ್ರುದ್ದೀನ್‌, ಜಿಲ್ಲಾಧಿಕಾರಿ ಕುಮಾರ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್‌.ನಂದಿನಿ ಪಾಲ್ಗೊಂಡಿದ್ದರು 
ಮಂಡ್ಯ ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳ ಮಾಹಿತಿ ಹಕ್ಕು ಕಾಯ್ದೆಯ ಸಂವಾದ ಕಾರ್ಯಕ್ರಮದಲ್ಲಿ ರಾಜ್ಯ ಮಾಹಿತಿ ಆಯೋಗದ ಆಯುಕ್ತ ಹರೀಶ್‌ಕುಮಾರ್‌ ಮಾತನಾಡಿದರು. ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಆಯುಕ್ತ ಕೆ.ಬದ್ರುದ್ದೀನ್‌, ಜಿಲ್ಲಾಧಿಕಾರಿ ಕುಮಾರ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್‌.ನಂದಿನಿ ಪಾಲ್ಗೊಂಡಿದ್ದರು    

ಮಂಡ್ಯ: ‘ಅಧಿಕಾರಿಗಳಲ್ಲಿ ಕರ್ತವ್ಯನಿಷ್ಠೆ, ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ‘ಮಾಹಿತಿ ಹಕ್ಕು ಕಾಯ್ದೆ’ (ಆರ್‌ಟಿಐ) ಸಹಕಾರಿಯಾಗಿದೆ’ ಎಂದು ರಾಜ್ಯ ಮಾಹಿತಿ ಆಯೋಗದ ಆಯುಕ್ತ ಹರೀಶ್‌ಕುಮಾರ್‌ ತಿಳಿಸಿದರು. 

ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳ ಮಾಹಿತಿ ಹಕ್ಕು ಕಾಯ್ದೆಯ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾರ್ವಜನಿಕರು ಮಾಹಿತಿ ಹಕ್ಕು ಅಧಿನಿಯಮದಡಿ ಅರ್ಜಿ ಸಲ್ಲಿಸಬಹುದು. ಸಾರ್ವಜನಿಕ ಮಾಹಿತಿ ಅಧಿಕಾರಿ ಮೊದಲು ಅರ್ಜಿಯು ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು ಎಂದರು.

ಮಾಹಿತಿ ಹಕ್ಕು ಕಾಯ್ದೆಗೆ ಒಂದು ಸರ್ಕಾರವನ್ನು ಕೆಡುವ ಶಕ್ತಿ ಇದೆ. ಮಾಹಿತಿ ಹಕ್ಕು ಕಾಯ್ದೆಯನ್ನು ಅಧಿಕಾರಿಗಳು ಉಪೇಕ್ಷಿಸಿದರೆ, ದಂಡ ಮತ್ತು ಶಿಸ್ತುಕ್ರಮಕ್ಕೆ ಗುರಿಯಾಗಬೇಕಾಗುತ್ತದೆ. ಲಭ್ಯವಿರುವ ದಾಖಲೆಗಳನ್ನು ಮುಕ್ತವಾಗಿ ಕೊಡಿ. ವೆಬ್‌ಸೈಟ್‌ನಲ್ಲಿ ಸಾರ್ವಜನಿಕರ ವೀಕ್ಷಣೆಗೆ ಮಾಹಿತಿ ಲಭ್ಯವಿದ್ದಲ್ಲಿ, ಆನ್‌ಲೈನ್‌ ಮೂಲಕ ಪಡೆದುಕೊಳ್ಳುವಂತೆ ಸೂಚಿಸಬಹುದು ಎಂದರು. 

ADVERTISEMENT

ಕಂದಾಯ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಗೆ ಸಂಬಂಧಿಸಿದಂತೆ ಆಯೋಗಕ್ಕೆ ಮೇಲ್ಮನವಿಗಳು ಬರುವುದೇ ಹೆಚ್ಚು.  ಆಯೋಗಕ್ಕೆ ಬಂದ 45 ಸಾವಿರ ಮೇಲ್ಮನವಿ ಅರ್ಜಿಗಳಲ್ಲಿ 25 ಸಾವಿರ ಕಂದಾಯ ಇಲಾಖೆಗೆ ಸೇರಿವೆ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್. ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಂಗಾಧರ್, ಅಧಿಕಾರಿಗಳು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು. 

ಅಧಿಕಾರಿಗಳನ್ನು ಪದೇ ಪದೇ ಬೆಂಗಳೂರಿಗೆ ಕರೆಸಿದರೆ ಸಾರ್ವಜನಿಕರ ಕೆಲಸಕ್ಕೆ ತೊಂದರೆಯಾಗುತ್ತದೆ. ವಿಡಿಯೊ ಕಾನ್ಫರೆನ್ಸ್‌ ಮೂಲಕ ಆಯೋಗವು ವಿಚಾರಣೆ ನಡೆಸಿದರೆ ಅನುಕೂಲ
– ಕುಮಾರ ಜಿಲ್ಲಾಧಿಕಾರಿ ಮಂಡ್ಯ
‘ಕೆಡಿಪಿ ಸಭೆಯಲ್ಲಿ ಆರ್‌ಟಿಐ ವಿಷಯವಿರಲಿ’
‘ಪ್ರಗತಿ ಪರಿಶೀಲನಾ ಸಭೆಗಳಲ್ಲಿ (ಕೆಡಿಪಿ) ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾದ ಅರ್ಜಿಗಳ ವಿಲೇವಾರಿ ಬಗ್ಗೆ ಚರ್ಚಿಸುವುದರಿಂದ ವಿಳಂಬ ಧೋರಣೆ ತಡೆಗಟ್ಟಬಹುದು ಮತ್ತು ಸಕಾಲದಲ್ಲಿ ಸಾರ್ವಜನಿಕರಿಗೆ ಮಾಹಿತಿ ಕೊಡಿಸಬಹುದು’ ಎಂದು ರಾಜ್ಯ ಮಾಹಿತಿ ಆಯೋಗದ ಆಯುಕ್ತ ಕೆ. ಬದ್ರುದ್ದೀನ್ ಅವರು ಜಿಲ್ಲಾಧಿಕಾರಿಗೆ ಸೂಚಿಸಿದರು.  ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿರುವ ಅರ್ಜಿಯನ್ನು ಉಡಾಫೆ ಮಾಡಬೇಡಿ ಅಧಿಕಾರಿಗಳು ಆರ್.ಟಿ.ಐ ಕಾಯ್ದೆಯ ಕುರಿತು ಮೊದಲು ಸಮರ್ಪಕವಾಗಿ ತಿಳಿದುಕೊಳ್ಳಿ. ಆಯೋಗವು ಸಮಾಜಘಾತುಕ ಶಕ್ತಿಗಳಿಗೆ ಮಣೆ ಹಾಕುವುದಿಲ್ಲ. ಮಾಹಿತಿ ಹಕ್ಕು ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳುವವರನ್ನು ಸಹಿಸುವುದಿಲ್ಲ. ಸಾರ್ವಜನಿಕ ಹಿತಾಸಕ್ತಿ ಇಲ್ಲದೆ ದುರುದ್ದೇಶದಿಂದ ಪದೇ ಪದೇ ಅರ್ಜಿ ಸಲ್ಲಿಸುವವರನ್ನು ‘ಕಪ್ಪು ಪಟ್ಟಿಗೆ’ ಸೇರಿಸುತ್ತಿದ್ದೇವೆ ಎಂದರು.  ಮಂಡ್ಯ ಜಿಲ್ಲೆಗೆ ಸಂಬಂಧಿಸಿದಂತೆ ಆಯೋಗದಲ್ಲಿ 1135 ಮೇಲ್ಮನವಿ ಅರ್ಜಿಗಳು ಬಾಕಿ ಇವೆ. ಎಲ್ಲಾ ಜಿಲ್ಲೆಗೆ ಹೋಲಿಸಿದರೆ ಮಂಡ್ಯ ಜಿಲ್ಲೆಯ ಶೇ 3.5ರಷ್ಟು ಮಾತ್ರ ಇದೆ. ಇದು ಶೂನ್ಯಕ್ಕೆ ಇಳಿಕೆಯಾಗಬೇಕು. ಪ್ರಥಮ ಮೇಲ್ಮನವಿ ಪ್ರಾಧಿಕಾರ ಸರಿಯಾಗಿ ಸ್ಪಂದಿಸಿದರೆ ಆಯೋಗಕ್ಕೆ ಬರುವ ಅರ್ಜಿಗಳನ್ನು ಕಡಿಮೆ ಮಾಡಬಹುದು ಎಂದರು. 
‘9 ಸಾವಿರ ಅರ್ಜಿವಿಲೇವಾರಿ’   
ಜಿಲ್ಲಾಧಿಕಾರಿ ಕುಮಾರ ಮಾತನಾಡಿ ಜಿಲ್ಲೆಯ ಪ್ರಸಕ್ತ ಸಾಲಿನ 10 ಸಾವಿರಕ್ಕೂ ಹೆಚ್ಚು ಅರ್ಜಿಗಳು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾಗಿದ್ದವು. ಈಗಾಗಲೇ 9 ಸಾವಿರಕ್ಕೂ ಹೆಚ್ಚು ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಸರ್ಕಾರಿ ನೌಕರರಿಗೆ ಕರ್ತವ್ಯದಲ್ಲಿ ನಿಷ್ಠೆ ಪ್ರಾಮಾಣಿಕತೆ ಇದ್ದರೆ ಯಾರಿಗೂ ಹೆದರುವ ಅಗತ್ಯವಿರುವುದಿಲ್ಲ. ವಿಳಂಬ ಮಾಡದೆ ಸಾರ್ವಜನಿಕರಿಗೆ ಮಾಹಿತಿ ನೀಡಿ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.