
ಶ್ರೀರಂಗಪಟ್ಟಣ: ಪಟ್ಟಣದ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಬೆಳೆದಿದ್ದ 10ಕ್ಕೂ ಹೆಚ್ಚು ಅಶೋಕ ಮರಗಳನ್ನು ಬುಧವಾರ ಕಡಿದು ಹಾಕಿದ್ದು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
‘ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಮೂರು ದಶಕಗಳ ಹಿಂದೆ ನೆಟ್ಟಿದ್ದ ಅಶೋಕ ಮರಗಳನ್ನು ಕಡಿದು ಹಾಕಲಾಗುತ್ತಿದೆ. ಒಂದು ಮರ ಬೆಳೆಸುವುದೂ ಕಷ್ಟವಾಗಿರುವ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮರೆ ಕಡಿಯಲು ಅವಕಾಶ ನೀಡಿರುವುದು ತಪ್ಪು. ಮರಗಳ ಹನನ ನಿಲ್ಲಿಸಬೇಕು’ ಎಂದು ಎಸ್. ಕುಮಾರ್, ಯೋಗೇಶ್, ರಮೇಶ್ ಇತರರು ಆಗ್ರಹಿಸಿದರು.
‘ರೈತರಿಗಾಗಿ ತೆಂಗು, ಸಪೋಟ ಇತರ ಸಸಿಗಳನ್ನು ಬೆಳೆಸಲು ಈ ಮರಗಳು ತೊಡಕಾಗಿವೆ. ಮರಗಳ ಬೇರಿನಿಂದ ಕಾಂಪೌಂಡ್ ಶಿಥಿಲವಾಗುತ್ತಿದ್ದು, ತೆರವು ಮಾಡಿಸಬೇಕು ಎಂದು ವರ್ಷದ ಹಿಂದೆಯೇ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮನವಿ ಸಲ್ಲಿಸಿದ್ದರು. ನಿಯಮಾನುಸಾರ ಮರಗಳ ಹರಾಜು ನಡೆಸಲಾಗಿದೆ. ಹಣ ಕೂಡ ಸಂದಾಯವಾಗಿದೆ’ ಎಂದು ಉಪ ವಲಯ ಅರಣ್ಯಾಧಿಕಾರಿ ಬಿ.ಎಂ. ನಾಗರಾಜ್ ಹೇಳಿದರು.
ಇದನ್ನು ಒಪ್ಪದ ಸಾರ್ವಜನಿಕರು ಮರ ಕಡಿಯುವುದನ್ನು ನಿಲ್ಲಿಸಬೇಕು ಎಂದು ಪಟ್ಟು ಹಿಡಿದರು. ಹಾಗಾಗಿ ಮರ ಕಡಿಯುವುದನ್ನು ಸ್ಥಗಿತಗೊಳಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.