ADVERTISEMENT

ಬೆಟ್ಟ ಏರುವಾಗ ಉರುಳಿದ ಮರ; ಮೂವರಿಗೆ ಗಂಭೀರ ಗಾಯ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2022, 12:31 IST
Last Updated 19 ನವೆಂಬರ್ 2022, 12:31 IST
ಮೇಲುಕೋಟೆ ಯೋಗಾನರಸಿಂಹಸ್ವಾಮಿ ಬೆಟ್ಟದ ಮೆಟ್ಟಿಲುಗಳ ಮೇಲೆ ಮರದ ಕೊಂಬೆ ಉರುಳಿ ಬಿದ್ದಿರುವುದು
ಮೇಲುಕೋಟೆ ಯೋಗಾನರಸಿಂಹಸ್ವಾಮಿ ಬೆಟ್ಟದ ಮೆಟ್ಟಿಲುಗಳ ಮೇಲೆ ಮರದ ಕೊಂಬೆ ಉರುಳಿ ಬಿದ್ದಿರುವುದು   

ಮೇಲುಕೋಟೆ (ಮಂಡ್ಯ ಜಿಲ್ಲೆ): ಇಲ್ಲಿಯ ಯೋಗಾನರಸಿಂಹ ಸ್ವಾಮಿ ಬೆಟ್ಟ ಹತ್ತುವ ವೇಳೆ ಭಾನುವಾರ ಒಣಗಿದ ಮರವೊಂದರ ಕೊಂಬೆ ಮರಿದು ಬಿದ್ದ ಪರಿಣಾಮ ಮೈಸೂರು ಜಿಲ್ಲೆ ನಂಜನಗೂಡು ಪಟ್ಟಣದ ಲಯನ್ಸ್‌ ಶಾಲೆಯ ಮೂವರು ವಿದ್ಯಾರ್ಥಿಗಳು ಹಾಗೂ ಒಬ್ಬ ಶಿಕ್ಷಕ ಗಂಭೀರವಾಗಿ ಗಾಯಗೊಂಡಿದ್ದಾರೆ.

110 ವಿದ್ಯಾರ್ಥಿಗಳು ಶ್ರೀಕ್ಷೇತ್ರಕ್ಕೆ ಧಾರ್ಮಿಕ ಪ್ರವಾಸ ಕೈಗೊಂಡಿದ್ದರು. ಚೆಲುವರಾಯಸ್ವಾಮಿ ದೇವಾಲಯದಲ್ಲಿ ದೇವರ ದರ್ಶನ ಪಡೆದು ಬೆಳಿಗ್ಗೆ 11 ಗಂಟೆಯ ವೇಳೆ ಯೋಗಾನರಸಿಂಹಸ್ವಾಮಿ ಬೆಟ್ಟ ಏರುತ್ತಿದ್ದರು. ಮೆಟ್ಟಿಲು ಪಕ್ಕದಲ್ಲೇ ಒಣಗಿದ್ದ ಅರಳಿ ಮರದ ಕೊಂಬೆ ಏಕಾಏಕಿ ವಿದ್ಯಾರ್ಥಿಗಳ ಮೇಲೆ ಮುರಿದು ಬಿದ್ದಿದೆ. ಘಟನೆಯಲ್ಲಿ ವಿದ್ಯಾರ್ಥಿಗಳಾದ ನಿಶಾಂತ್, ವರುಣ್, ಯೋಗೇಶ್ ಹಾಗೂ ಶಿಕ್ಷಕ ಕೇಶವರಾವ್ ಗಂಭೀರ ಗಾಯಗೊಂಡಿದ್ದಾರೆ.

ಒಬ್ಬ ವಿದ್ಯಾರ್ಥಿ ಕಾಲು ಮುರಿದಿದ್ದು ಮತ್ತಿಬ್ಬರಿಗೆ ತಲೆ ಹಾಗೂ ಕಣ್ಣಿನ ಭಾಗಕ್ಕೆ ಗಾಯಗಳಾಗಿವೆ. ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಎಸ್ ಆಸ್ವತ್ರೆಗೆ ದಾಖಲಿಸಲಾಯಿತು.
ಮೇಲುಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಂಬುಲೆನ್ಸ್‌ ಇದ್ದರೂ, ಸಿಬ್ಬಂದಿಯಿಲ್ಲದೆ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಪರದಾಡಬೇಕಾಯಿತು.

ADVERTISEMENT

ಘಟನೆ ನಡೆದು 1 ಗಂಟೆಯ ಬಳಿಕ ಪಾಂಡವಪುರದಿಂದ ಬಂದ ಆಂಬುಲೆನ್ಸ್‌ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿತು. ಸ್ಥಳೀಯ ಆಸ್ಪತ್ರೆಯಲ್ಲಿ ಆಂಬುಲೆನ್ಸ್‌ ಸೇವೆ ದೊರೆಯದೇ ಇರುವುದಕ್ಕೆ ಸ್ಥಳೀಯರು ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಘಟನೆ ಸಂಬಂಧ ಪ್ರಕರಣ ದಾಖಲಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.