ADVERTISEMENT

230 ಗ್ರಾಪಂನ 3797 ಸ್ಥಾನಗಳಿಗೆ ಎರಡು ಹಂತದಲ್ಲಿ ಚುನಾವಣೆ

ಪುರಸಭೆ, ಪಪಂ, ನಗರಸಭೆ ವ್ಯಾಪ್ತಿಯಲ್ಲಿಲ್ಲ ನೀತಿ ಸಂಹಿತೆ, ಚುನಾವಣೆ ನಡೆಯುವ ಗ್ರಾಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2020, 4:03 IST
Last Updated 1 ಡಿಸೆಂಬರ್ 2020, 4:03 IST
ಡಾ.ಎಂ.ವಿ.ವೆಂಕಟೇಶ್‌
ಡಾ.ಎಂ.ವಿ.ವೆಂಕಟೇಶ್‌   

ಮಂಡ್ಯ: ಜಿಲ್ಲೆಯ 230 ಗ್ರಾಮ ಪಂಚಾಯಿತಿಗಳ 3,797 ಸ್ಥಾನಗಳಿಗೆ ಡಿ. 22 ಮತ್ತು 27ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಹಂತದಲ್ಲಿ ಮಂಡ್ಯ ಉಪವಿಭಾಗದ ಮಂಡ್ಯ (46), ಮದ್ದೂರು (42), ಮಳವಳ್ಳಿ (38), ಎರಡನೇ ಹಂತದಲ್ಲಿ ಪಾಂಡವಪುರ ಉಪವಿಭಾಗದ ಪಾಂಡವಪುರ (23), ಶ್ರೀರಂಗಪಟ್ಟಣ (21), ಕೆ.ಆರ್. ಪೇಟೆ (33), ನಾಗಮಂಗಲ (27) ಸೇರಿದಂತೆ 230 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ. ಮಾದರಿ ನೀತಿ ಸಂಹಿತೆ ಇಂದಿನಿಂದಲೇ ಜಾರಿಯಲ್ಲಿರಲಿದೆ ಎಂದು ಹೇಳಿದರು.

ಮೊದಲ ಹಂತದ ಚುನಾವಣಾ ಪ್ರಕ್ರಿಯೆ: ಡಿ. 7 ರಂದು ಚುನಾವಣೆ ಅಧಿಸೂಚನೆ ಪ್ರಕಟವಾಗಲಿದೆ. ಡಿ. 11 ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿದೆ. ಡಿ. 12ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಡಿ.14 ರಂದು ನಾಮಪತ್ರ ವಾಪಸ್ ಪಡೆಯಬಹುದು. ಡಿ. 22ರಂದು ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಚುನಾವಣೆ ನಡೆಯಲಿದೆ. ಮರುಮತದಾನ ಇದ್ದಲ್ಲಿ ಡಿ. 24 ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ನಡೆಯಲಿದೆ.

ADVERTISEMENT

ಎರಡನೇ ಹಂತದ ಚುನಾವಣಾ ಪ್ರಕ್ರಿಯೆ: ಡಿ.11 ರಂದು ಚುನಾವಣೆ ಅಧಿಸೂಚನೆ ಪ್ರಕಟವಾಗಲಿದೆ. ಡಿ. 16 ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿದೆ. ಡಿ. 17 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಡಿ. 19 ರಂದು ನಾಮಪತ್ರ ವಾಪಸ್ ಪಡೆಯಬಹುದು. ಡಿ. 27 ರಂದು ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಚುನಾವಣೆ ನಡೆಯಲಿದೆ. ಮರುಮತದಾನ ಇದ್ದಲ್ಲಿ ಡಿ. 29 ಬೆಳಗ್ಗೆ 7ರಿಂದ ಸಂಜೆ 5ರವರೆಗೆ ನಡೆಯಲಿದೆ. ಎರಡು ಹಂತದ ಮತಗಳ ಎಣಿಕೆ ಡಿ. 30 ರಂದು ಬೆಳಿಗ್ಗೆ 8ಗಂಟೆಯಿಂದ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ನಡೆಯಲಿದೆ.

ಜಿಲ್ಲೆಯಲ್ಲಿ 233 ಗ್ರಾಮ ಪಂಚಾಯಿತಿಗಳ ಪೈಕಿ 230 ಗ್ರಾಮ ಪಂಚಾಯಿತಿಗಳ ಅವಧಿ ಮುಕ್ತಾಯವಾಗಿದೆ. ಕೆ.ಆರ್. ಪೇಟೆ ತಾಲ್ಲೂಕಿನ ಮಾಕವಳ್ಳಿ, ಪಾಂಡವಪುರ ತಾಲ್ಲೂಕಿನ ಮೇಲುಕೋಟೆ, ಮಳವಳ್ಳಿ ತಾಲ್ಲೂಕಿನ ಬೆಳಕವಾಡಿ ಗ್ರಾಮ ಪಂಚಾಯಿತಿಗಳಿಗೆ ತಡವಾಗಿ ಚುನಾವಣೆ ನಡೆದಿದ್ದು ಅವಧಿ ಇನ್ನೂ ಮುಕ್ತವಾಗಿಲ್ಲ. ಆದ್ದರಿಂದ ಈ ಮೂರು ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯುವುದಿಲ್ಲ ಎಂದು ತಿಳಿಸಿದರು.

ಚುನಾವಣೆ ನೀತಿ ಸಂಹಿತೆಯು ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನ.30ರಿಂದ ಡಿ.31ರ ಸಂಜೆ 5ರ ವರೆಗೆ ಜಾರಿಯಲ್ಲಿರುತ್ತದೆ. ನೀತಿಸಂಹಿತೆಯು ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ಪ್ರದೇಶಗಳಿಗೆ ಅನ್ವಯವಾಗುವುದಿಲ್ಲ. ಜಿಲ್ಲೆಯಲ್ಲಿ 6,24,283 ಪುರುಷರು, 6,23,089 ಮಹಿಳೆಯರು ಸೇರಿದಂತೆ 12,47,466 ಮತದಾರರು ಇದ್ದಾರೆ ಎಂದು ತಿಳಿಸಿದರು.

ಜಿಲ್ಲೆಯ 7 ತಾಲ್ಲೂಕುಗಳ ಗ್ರಾಪಂಗಳಲ್ಲಿ 564 (ಪ.ಜಾ), 233 (ಪ.ಪಂ), 822 (ಹಿ.ವ–ಅ), 207 (ಹಿ.ವ–ಬ), 1971 (ಸಾಮಾನ್ಯ) ಸ್ಥಾನಗಳು ಸೇರಿದಂತೆ 3797 ಸ್ಥಾನಗಳಿಗೆ ಪಕ್ಷಾತೀತವಾಗಿ ಚುನಾವಣೆ ನಡೆಯಲಿದೆ. ಮತದಾರರನ್ನು ಸೆಳೆಯಲು ಆಮಿಷ ಒಡ್ಡಬಾರದು. ಸಭೆ ನಡೆಸಬಾರದು, ಒಂದು ವೇಳೆ ನಡೆಸಬೇಕಾದರೆ ಮುನ್ನವೇ ಅನುಮತಿ ಪಡೆಯಬೇಕು. ಮತದಾನ ಬ್ಯಾಲೆಟ್‌ ಪತ್ರದಲ್ಲಿ ನಡೆಯಲಿದೆ. ಅಧಿಕಾರಿಗಳಿಗೆ ಸೂಕ್ತ ತರಬೇತಿ ನೀಡಲಾಗಿದೆ. ಚುನಾವಣಾ ಪ್ರಚಾರದಲ್ಲಿ ಅಭ್ಯರ್ಥಿಯೊಂದಿಗೆ ನಾಲ್ವರಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ ಮಾತನಾಡಿ, ‘ಗ್ರಾ.ಪಂ ವ್ಯಾಪ್ತಿಗಳಲ್ಲಿ 600 ರೌಡಿ ಶೀಟರ್‌ಗಳಿದ್ದು, ಅವರಿಂದ ಈಗಾಗಲೇ ಮುಚ್ಚಳಿಕೆ ಬರೆಯಿಸಿಕೊಳ್ಳಲಾಗಿದೆ. ಗಡಿಪಾರು ಮಾಡುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅವರೊಂದಿಗೆ ಸಮಾಲೋಚನೆ ನಡೆಸಲಾಗುವುದು. ಚುನಾವಣೆಗೆ 800 ಪೊಲೀಸ್‌, 450 ಗೃಹರಕ್ಷಕ ದಳ ಸಿಬ್ಬಂದಿ ನಿಯೋಜಿಸಲಾಗಿದೆ. ಅವಶ್ಯವಿದ್ದಲ್ಲಿ ಹೊರಗಡೆಯಿಂದ ಕರೆಸಿಕೊಳ್ಳಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.