ADVERTISEMENT

ಹಕ್ಕುಪತ್ರ ಕೊಡದಿದ್ದರೆ ಮತದಾನ ಇಲ್ಲ

ನಗರಸಭೆ ಕಚೇರಿ ಮುಂದೆ ನಿರಂತರ ಧರಣಿ; ಶ್ರಮಿಕ ಬಡಾವಣೆ ನಿವಾಸಿಗಳ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2023, 14:40 IST
Last Updated 27 ಮಾರ್ಚ್ 2023, 14:40 IST
ವಸತಿ ವಂಚಿತ ಕುಟುಂಬಗಳಿಗೆ ಶೀಘ್ರ ನಿವೇಶನಗಳ ಹಕ್ಕುಪತ್ರ ವಿತರಣೆ ಮಾಡಬೇಕು ಎಂದು ಒತ್ತಾಯಿಸಿ ಶ್ರಮಿಕ ಬಡಾವಣೆಗಳ ನಿವಾಸಿಗಳು ಸೋಮವಾರ ನಗರಸಭೆ ಕಚೇರಿ ಎದುರು ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದರು
ವಸತಿ ವಂಚಿತ ಕುಟುಂಬಗಳಿಗೆ ಶೀಘ್ರ ನಿವೇಶನಗಳ ಹಕ್ಕುಪತ್ರ ವಿತರಣೆ ಮಾಡಬೇಕು ಎಂದು ಒತ್ತಾಯಿಸಿ ಶ್ರಮಿಕ ಬಡಾವಣೆಗಳ ನಿವಾಸಿಗಳು ಸೋಮವಾರ ನಗರಸಭೆ ಕಚೇರಿ ಎದುರು ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದರು   

ಮಂಡ್ಯ: ವಸತಿ ವಂಚಿತ ಶ್ರಮಿಕರ ಕುಟುಂಬಗಳಿಗೆ ನಿವೇಶನ ಹಾಗೂ ಹಕ್ಕುಪತ್ರ ವಿತರಣೆ ಮಾಡಬೇಕು. ಇಲ್ಲದಿದ್ದರೆ ಮುಂದಿನ ವಿಧಾನಸಬಾ ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆಯಿಂದ ದೂರ ಉಳಿಯಲಾಗುವುದು ಎಂದು ನಗರದ ವಿವಿಧ ಸಂಘಟನೆಗಳ ಮುಖಂಡರು ಎಚ್ಚರಿಸಿದರು.

‘ಭೂಮಿ ವಸತಿ ಕೊಡದೆ ನಮ್ಮ ಓಟು ಕೊಡೆವು’ ಎಂಬ ಘೋಷಣೆಯಡಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ, ಕರ್ನಾಟಕ ಜನಶಕ್ತಿ, ಮಹಿಳಾ ಮುನ್ನಡೆ, ಮಂಡ್ಯ ಜಿಲ್ಲಾ ಶ್ರಮಿಕ ನಗರ ನಿವಾಸಿಗಳ ಒಕ್ಕೂಟದ ಕಾರ್ಯಕರ್ತರು ನಗರಸಭೆ ಎದುರು ಸೋಮವಾರ ನಿರಂತರ ಧರಣಿ ಆರಂಭಿಸಿದರು.

ನಗರದ ಗಾಡಿ ಕಾರ್ಖಾನೆ ಕಾಲೊನಿ, ಶ್ರಮಿಕ ನಗರಕ್ಕೆ ತಾತ್ಕಾಲಿಕ ಹಂಚಿಕೆ ಪತ್ರ ನೀಡಲಾಗಿದೆ. ಎಲ್ಲರಿಗೂ ಮೂಲ ಸೌಲಭ್ಯಗಳೊಂದಿಗೆ ಹಕ್ಕುಪತ್ರ ನೀಡಬೇಕು. ಸ್ಲಾಟ್‌ ಹೌಸ್‌, ಶ್ರಮಿಕನಗರ ನಿವಾಸಿಗಳಿಗೆ ಹಕ್ಕುಪತ್ರ ನೀಡಿ ವಸತಿ ಯೋಜನೆ ರೂಪಿಸಬೇಕು. ಬಾಕಿ ಉಳಿದಿರುವ ಐದು ಕುಟುಂಬಗಳಿಗೆ ಪರ್ಯಾಯ ನಿವೇಶನ ಕಲ್ಪಿಸಿ ವಸತಿ ನಿರ್ಮಾಣ ಮಾಡಬೇಕು. ಗುರುಮಠ ಶ್ರಮಿಕನಗರ ನಿವಾಸಿಗಳಿಗೆ ವಸತಿ ಮತ್ತು ಹಕ್ಕುಪತ್ರ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ADVERTISEMENT

ಹೊಸ ತಮಿಳು ಕಾಲೊನಿ ಶ್ರಮಿಕನರ ನಿವಾಸಿಗಳ 165 ಕುಟುಂಬಗಳಿಗೆ ಹಕ್ಕುಪತ್ರ ಸೇರಿದಂತೆ ಸೌಲಭ್ಯ ಒದಗಿಸಬೇಕು. ವಸತಿ ಯೋಜನೆ ರೂಪಿಸಬೇಕು. ಆರ್‌ಟಿಒ ಕಚೇರಿ ಸಮೀಪದ ಕಾಳಪ್ಪ ಬಡಾವಣೆಯ 79 ಕುಟುಂಬಗಳಿಗೆ ವಸತಿ ಯೋಜನೆ ರೂಪಿಸಿ, ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿದರು.

ಕಾಳಿಕಾಂಬಾ ಶ್ರಮಿಕನಗರ ನಿವಾಸಿಗಳಿಗೆ ಶ್ರಮಿಕ ಜನರ ಜಾಗದ ಘೋಷಿತ ಕೊಳಚೆ ಪ್ರದೇಶದಲ್ಲಿರುವ ನಿವಾಸಿಗಳ ವಿರುದ್ಧ ದಾಖಲು ಮಾಡಲಾಗಿರುವ ಮೊಕದ್ದಮೆಯನ್ನು ವಾಪಸ್‌ ಪಡೆಯಬೇಕು. ಕೂಡಲೇ 38 ಮನೆಗಳ ಕಾಮಗಾರಿ ಪ್ರಾರಂಭಿಸಬೇಕು. ಇಲ್ಲವಾದಲ್ಲಿ ಹಿಂದೆ ಘೋಷಿತವಾಗಿದ್ದ ಕಾಳಿಕಾಂಬಾ ಸಮುದಾಯ ಭವನದ ಜಾಗವನ್ನು ಜಿಲ್ಲಾಡಳಿತ ವಶಪಡಿಸಿಕೊಂಡಿದ್ದು, ಕಾಳಿಕಾಂಬಾ ಶ್ರಮಿಕ ಜನರಿಗೆ ನೀಡಬೇಕು ಎಂದು ಒತ್ತಾಯಿಸಿದರು.

ನಂದಾ (ಇಂದಿರಾ ಬಡಾವಣೆ) ಶ್ರಮಿಕ ಬಡಾವಣೆಯಲ್ಲಿ 170ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದಾರೆ. ಅದೇ ಜಾಗದಲ್ಲಿ ವಸತಿ ಯೋಜನೆ ನಿರ್ಮಾಣ ಮಾಡಬೇಕು. ಸಾಧ್ಯವಿಲ್ಲದಿದ್ದರೆ 4 ಎಕರೆ ಜಾಗವನ್ನು ಗುರುತಿಬೇಕು. 70 ಕುಟುಂಬಗಳಿಗೆ 4 ಎಕರೆ ಜಾಗವನ್ನು ಜಿಲ್ಲಾಡಳಿತ ಮೀಸಲಿಡಬೇಕು ಎಂದು ಒತ್ತಾಯಿಸಿದರು.

ಮದ್ದೂರು ನ್ಯೂ ತಮಿಳು ಕಾಲೊನಿಯ 116 ಕುಟುಂಬಗಳಿಗೆ ಘೋಷಣೆಯಾಗಿರುವ 1.20 ಎಕರೆ ಜಾಗವನ್ನು ಸ್ಥಳೀಯ ತಾಲ್ಲೂಕು ಕಚೇರಿ ವತಿಯಿಂದ ಕೊಳಚೆ ಅಭಿವೃದ್ಧಿ ಮಂಡಳಿಗೆ ಹಸ್ತಾಂತರಿಸಿ, ಮೂಲ ಸೌಲಭ್ಯಗಳೊಂದಿಗೆ ಹಕ್ಕು ಪತ್ರ ನೀಡಿ ವಸತಿ ಯೋಜನೆ ರೂಪಿಸಬೇಕು ಎಂದು ಆಗ್ರಹ ಪಡಿಸಿದರು.

ಮುಖಂಡರಾದ ಸಿದ್ದರಾಜು, ನಿಂಗಮ್ಮ, ಮಂಜುನಾಥ, ಅಮ್ಮು, ಶಕ್ತಿವೇಲ್, ಮುರುಗನ್, ಅನ್ಬು, ಮಹೇಶ, ವೆಂಕಟೇಶ, ವಿಜಯಮ್ಮ, ಜನಾರ್ಧನ್, ಶಾಂತ, ಶಿವಲಿಂಗು, ಶಿಲ್ಪಾ, ಸೌಮ್ಯ, ಸಹನಾ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.