ಭಾರತೀನಗರ: ನವರಾತ್ರಿಯಲ್ಲಿ ನಾಡಹಬ್ಬವನ್ನು ಯುವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಗೊಂಬೆಗಳ ಪ್ರದರ್ಶನ ಹಿಂದಿನಿಂದಲೂ ಸಂಪ್ರದಾಯವಾಗಿ ಬಂದಿದ್ದು, ಇಲ್ಲಿಯ ಭಾರತೀ ಕಾಲೇಜನಲ್ಲಿಯೂ ಕೂಡ 4 ನೇ ವರ್ಷದ ದಸರಾ ಬೊಂಬೆ ಪ್ರದರ್ಶನ ಆಯೋಜಿಸಲಾಗಿತ್ತು.
ಈ ಬೊಂಬೆಗಳ ಪ್ರದರ್ಶನದಲ್ಲಿ ಮೈಸೂರು ಅರಮನೆ, ರಾಣಿಯರನ್ನು ಕರೆದೊಯ್ಯಲು ಬಳಸುತ್ತಿದ್ದ ರಾಜರ ಕಾಲದ ಸಾರೋಟು, ನವದುರ್ಗೆಯರ, ವಿಷ್ಣುವಿನ ದಶಾವತಾರ, ವಧು, ವರರ ಗೊಂಬೆಗಳು, ದಸರಾ ಅಂಬಾರಿ, ಮದುವೆ ಶಾಸ್ತ್ರ, ಗ್ರಾಮೀಣ ಸೊಗಡು ಬಿಂಬಿಸುವ ಬೊಂಬೆಗಳು, ಪಿರಂಗಿಗಳು, ಹಳೇ ಕಾಲದ ಮೋಟಾರು ವಾಹನಗಳು ಸೇರಿದಂತೆ ಹಲವು ಗೊಂಬೆಗಳು ಗಮನ ಸೆಳೆದವು.
ಭಾರತೀ ಕಾಲೇಜಿನ ವಿವಿಧ ಅಂಗಸಂಸ್ಥೆಗಳ ಪ್ರಾಧ್ಯಾಪಕಿಯರು, ಸಹಪ್ರಾಧ್ಯಾಪಕಿಯರು ದಸರಾ ಬೊಂಬೆಗಳ ಪ್ರದರ್ಶನದ ಜವಾಬ್ದಾರಿ ವಹಿಸಿದ್ದರು. ವಿದ್ಯಾರ್ಥಿಗಳೂ ಕೂಡ ಈ ಕಾರ್ಯಕ್ಕೆ ಕೈಜೋಡಿಸಿ ಸಹಕರಿಸಿದ್ದರು.
ಬಿಇಟಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಬೊಂಬೆಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ‘ಭಾರತೀಯ ಸಂಸ್ಕೃತಿ ಪರಂಪರೆಯನ್ನು ಎತ್ತಿ ಹಿಡಿಬೇಕಾದರೆ ಇಂಥ ಆಚರಣೆಗಳು ಅಗತ್ಯ. ಇಂತಹವುಗಳನ್ನು ಮುಂದುವರಿಸಿಕೊಂಡು ಹೋದಾಗ ಸಂಸ್ಕೃತಿ ಉಳಿಯುತ್ತದೆ. ಸಂಸ್ಕೃತಿಯನ್ನು ಕಾಪಾಡುವುದು ನಮ್ಮ ಧ್ಯೇಯ’ ಎಂದರು.
ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕರಾದ ಎಸ್.ನಾಗರಾಜ್ ಮಾತನಾಡಿದರು. ದಸರಾ ಗೊಂಬೆ ಮಹತ್ವ ಕುರಿತು ಭಾರತೀ ಪ.ಪೂ ಕಾಲೇಜಿನ ಉಪನ್ಯಾಸಕಿ ಸಿ.ಸುಮಿತ್ರ ತಿಳಿಸಿಕೊಟ್ಟರು.
ಅತ್ಯುತ್ತಮ ಗೊಂಬೆಗಳಿಗೆ ಎರಡು ವಿಭಾಗದಲ್ಲಿ ಬಹುಮಾನ ನೀಡಲಾಯಿತು. ಅಧ್ಯಾಪಕ, ಅಧ್ಯಾಪಕೇತರ ವಿಭಾಗದಲ್ಲಿ ಪ್ರಥಮ ಬಹುಮಾನ ಮೈಸೂರು ಪ್ಯಾಲೇಸ್– ಎ.ಸಿ. ಸಂಜೀವ್, ಜೋಡಿ ಎತ್ತುಗಳು– ಸರೋಜಮ್ಮ, ಒನಕೆ ಕಾನ್ಸೆಪ್ಟ್ –ಛಾಯ ಅವರಿಗೆ ತೃತೀಯ ಬಹುಮಾನ ನೀಡಲಾಯಿತು. ವಿದ್ಯಾರ್ಥಿಗಳ ವಿಭಾಗದಲ್ಲಿ ಬೈರವಿ ಎಂ.ಎಸ್, ರಕ್ಷಿತ ಬಿ, ಸೌಜನ್ಯ ಬಹುಮಾನ ಪಡೆದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಎಸ್. ಮಹದೇವಸ್ವಾಮಿ ವಹಿಸಿದ್ದರು.
ಭಾರತಿ ಶಿಕ್ಷಣ ಟ್ರಸ್ಟ್ ನ ಅಂಗ ಸಂಸ್ಥೆಯ ಪ್ರಾಂಶುಪಾಲ ಎಸ್.ಎಲ್.ಸುರೇಶ್. ಡಾ.ತಮಿಜ್ ಮಣಿ, ಡಾ.ಬಿ.ಆರ್.ಚಂದನ್, ಎ.ಓ. ಭಾರತಿ ಪಿಯು ಕಾಲೇಜು ಜವರೇಗೌಡ, ಪಲ್ಲವಿ ಜಿ.ಬಿ, ಡಾ. ಮಹೇಶ್ ಕುಮಾರ್ ಜಿ.ಲೋನಿ, ರಾಜೇಂದ್ರ ರಾಜೇ ಅರಸ್, ಸಿ ರಮ್ಯಾ, ಡಾ. ಜಿ ಶಾಂತ ಕುಮಾರ್, ಡಾ. ಮಂಜು ಎಂ ಜಾಕೋಬ್, ಕಾರ್ಯಕ್ರಮ ಸಂಯೋಜಕರಾದ ಟಿ. ಸುಜಾತ, ಅರ್ಚನಾ, ಎಚ್, ಎಲ್. ಶೃತಿ, ಸಂಚಾಲಕರಾದ ಎ.ಸಿ. ಮಾನಸ, ಶೃತಿ ಹಾಗೂ ಅಧ್ಯಾಪಕರು ಮತ್ತು ಅಧ್ಯಾಪಕೇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.