ADVERTISEMENT

ಯುಪಿಎಸ್‌ಸಿ ಪರೀಕ್ಷೆ: ಅಪ್ಪನ ಕನಸು ಈಡೇರಿಸಿದ ಅಭಿಷೇಕ್‌ಗೌಡ

ಮಂಡ್ಯ ಜಿಲ್ಲೆಗೆ ಕೀರ್ತಿ ತಂದ ಮಾರಗೌಡನಹಳ್ಳಿ ಗ್ರಾಮದ ಪ್ರತಿಭೆ

ಎಂ.ಎನ್.ಯೋಗೇಶ್‌
Published 5 ಆಗಸ್ಟ್ 2020, 19:30 IST
Last Updated 5 ಆಗಸ್ಟ್ 2020, 19:30 IST
ಅಭಿಷೇಕ್‌ಗೌಡ ಯುಪಿಎಸ್‌ಪಿ ಪರೀಕ್ಷೆಯಲ್ಲಿ ಸಾಧನೆ ಮಾಡಿರುವ ಹಿನ್ನೆಲೆಯಲ್ಲಿ ಅವರ ತಂದೆ ಜವರಾಯಿಗೌಡ ಗ್ರಾಮಸ್ಥರಿಗೆ ಸಿಹಿ ವಿತರಣೆ ಮಾಡಿದರು
ಅಭಿಷೇಕ್‌ಗೌಡ ಯುಪಿಎಸ್‌ಪಿ ಪರೀಕ್ಷೆಯಲ್ಲಿ ಸಾಧನೆ ಮಾಡಿರುವ ಹಿನ್ನೆಲೆಯಲ್ಲಿ ಅವರ ತಂದೆ ಜವರಾಯಿಗೌಡ ಗ್ರಾಮಸ್ಥರಿಗೆ ಸಿಹಿ ವಿತರಣೆ ಮಾಡಿದರು   

ಮಂಡ್ಯ: ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಪರೀಕ್ಷೆಯಲ್ಲಿ 278ನೇ ರ‍್ಯಾಂಕ್‌ ಪಡೆದಿರುವ ಮಳವಳ್ಳಿ ತಾಲ್ಲೂಕು ಮಾರಗೌಡನಹಳ್ಳಿ ಗ್ರಾಮದ ಅಭಿಷೇಕ್‌ಗೌಡ ಮಂಡ್ಯ ಜಿಲ್ಲೆಗೆ ಕೀರ್ತಿ ತರುವ ಜೊತೆಗೆ ಅಪ್ಪನ ಕನಸನ್ನೂ ಈಡೇರಿಸಿದ್ದಾರೆ.

ಅಭಿಷೇಕ್‌ ಅವರು ಜವರಾಯಿಗೌಡ ಹಾಗೂ ಜಯಮ್ಮ ದಂಪತಿಯ ನಾಲ್ಕನೇ ಪುತ್ರ. ಜವರಾಯಿಗೌಡ ಅವರು 1977ರಲ್ಲೇ ಮಂಡ್ಯ ಸರ್ಕಾರಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದಿದ್ದರು. ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಅವರು ಕೆಎಸ್‌ಎಸ್‌ ಪರೀಕ್ಷೆಯನ್ನೂ ಬರೆದಿದ್ದರು. ಕೆಪಿಎಸ್‌ಸಿ ಎಫ್‌ಡಿಎ ಪರೀಕ್ಷೆಯಲ್ಲಿ ಕೇವಲ ಒಂದು ಅಂಕದಿಂದ ಅವಕಾಶ ತಪ್ಪಿತ್ತು.

ಮಾರ್ಗದರ್ಶನದ ಕೊರತೆಯಿಂದ ಜವರಾಯಿಗೌಡರು ಸರ್ಕಾರಿ ಕೆಲಸಕ್ಕೂ ಹೋಗದೆ ವ್ಯವಸಾಯವನ್ನೇ ಮುಂದುವರಿಸಿದ್ದರು. ಆದರೆ ಶಿಕ್ಷಣ, ಸ್ಪರ್ಧಾತ್ಮಕ ಪರೀಕ್ಷೆಗಳ ಮೇಲಿದ್ದ ಅವರು ಒಲವು ಜೊತೆಯಲ್ಲೇ ಇತ್ತು. ಆಸಕ್ತಿಯನ್ನೇ ಸ್ಫೂರ್ತಿಯ ಚಿಲುಮೆಯನ್ನಾಗಿಸಿ ಮಕ್ಕಳಿಗೆ ಮನಸ್ಸುಗಳ ಮೇಲೆ ಹರಿಸಿದರು. ಪತ್ನಿ ಜಯಮ್ಮ ಕೂಡ ಎಸ್‌ಎಸ್‌ಎಲ್‌ಸಿವರೆಗೆ ಓದಿದ್ದು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದ್ದರು.

ADVERTISEMENT

ಜವರಾಯಿಗೌಡ ಮೊದಲ ಪುತ್ರಿ ಎಂ.ಜೆ.ಸುನೀತಾ ಪಿಯುಸಿವರೆಗೆ ಓದಿದ್ದಾರೆ. 2ನೇ ಮಗಳು ಎಂ.ಜೆ. ಅನಿತಾ ಚನ್ನರಾಯಪಟ್ಟಣದಲ್ಲಿ ಅಬಕಾರಿ ಇಲಾಖೆ ಇನ್‌ಸ್ಪೆಕ್ಟರ್‌ ಆಗಿದ್ದಾರೆ. 3ನೇ ಮಗ ಮಂಜೇಶ್‌ಗೌಡ ಎಂಜಿನಿಯರಿಂಗ್‌ ಪೂರೈಸಿದ್ದು ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್‌ ಆಗಿದ್ದಾರೆ. ಕಿರಿಯ ಪುತ್ರ ಅಭಿಷೇಕ್‌ಗೌಡ ಎಂಬಿಬಿಎಸ್‌ ಪೂರೈಸಿ ಈಗ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ.

ಅಭಿಷೇಕ್‌ 10ನೇ ತರಗತಿವರೆಗೂ ಮಾರಗೌಡನಹಳ್ಳಿ ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲೇ ಕಲಿತರು. ಪಿಯುಸಿಯನ್ನು ಮಂಡ್ಯ ತಾಲ್ಲೂಕಿನ ಕೊಮ್ಮೇರಹಳ್ಳಿ ವಿಶ್ವಮಾನವ ಸಂಸ್ಥೆಯಲ್ಲಿ ಓದಿದ್ದರು. ಪಿಯುಸಿ ಪರೀಕ್ಷೆಯಲ್ಲಿ ಶೇ 96 ಅಂಕ ಗಳಿಸುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದರು. ಸಿಇಟಿ ಪರೀಕ್ಷೆಯಲ್ಲೂ ಉತ್ತಮ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಅವರಿಗೆ ಹೊಸಕೋಟೆಯ ಎಂವಿಜೆ ವೈದ್ಯಕೀಯ ಕಾಲೇಜಿನಲ್ಲಿ ಸರ್ಕಾರಿ ಸೀಟ್‌ ಲಭಿಸಿತ್ತು.

‘ನನ್ನ ಆಸಕ್ತಿಯ ಜೊತೆಗೆ ಸಹೋದರ, ಸಹೋದರಿಯರ ಪ್ರೋತ್ಸಾಹ ಮುಖ್ಯವಾದುದು. ಕನ್ನಡ ಮಾಧ್ಯಮದಲ್ಲಿ ಓದಿದ ಅಭಿಷೇಕ್‌ ನಮ್ಮ ಹಳ್ಳಿಗೂ ಕೀರ್ತಿ ತಂದಿದ್ದಾನೆ. ನಮ್ಮ ಊರಿನ ಸರ್ಕಾರಿ ಶಾಲೆಯಲ್ಲಿ ಅತ್ಯುತ್ತಮ ಶಿಕ್ಷಕರು ಇದ್ದರು. ಪುಟ್ಟಸ್ವಾಮಿಗೌಡ, ಸಂಪತ್‌, ಕೆ.ಎಂ.ಬಸವರಾಜು ಮುಂತಾದ ಶಿಕ್ಷಕರು ಅಪಾರ ಪ್ರೋತ್ಸಾಹ ನೀಡಿದ್ದಾರೆ. ನಿರ್ಮಲಾನಂದನಾಥ ಸ್ವಾಮೀಜಿ ಕೂಡ ಮಾರ್ಗದರ್ಶನ ಮಾಡಿದ್ದರು’ ಎಂದು ಜವರಾಯಿಗೌಡ ಹೇಳಿದರು.

ಐಎಎಸ್‌ ಮೇಲೆ ಅತೀವ ಆತ್ಮವಿಶ್ವಾ ಹೊಂದಿದ್ದ ಅಭಿಷೇಕ್‌ ಎಂಬಿಬಿಎಸ್‌ ಮುಗಿಯುತ್ತಿದ್ದಂತೆ ವೈದ್ಯಕೀಯ ಅಭ್ಯಾಸಕ್ಕೆ ತೆರಳದೇ ನೇರವಾಗಿ ಇನ್‌ಸೈಟ್‌ ಸಂಸ್ಥೆಯಲ್ಲಿ 6 ತಿಂಗಳು ತರಬೇತಿ ಪಡೆದಿದ್ದರು. ನಂತರ ಸ್ವಯಂಪ್ರೇರಿತವಾಗಿ ಓದು ಮುಂದುವರಿಸಿದ್ದರು.

ಅಯೋಧ್ಯೆಯಿಂದ ಚುಂಚಶ್ರೀ ಆಶೀರ್ವಾದ

ಅಯೋಧ್ಯೆ ರಾಮಮಂದಿರ ಭೂಮಿಪೂಜೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅಭಿಷೇಕ್‌ಗೆ ಅಲ್ಲಿಂದಲೇ ಆಶೀರ್ವಾದ ಮಾಡಿದರು.

‘ಅಭಿಷೇಕ್‌ ಸಾಧನೆ ನೋಡಿ ಖುಷಿಯಾಯಿತು. ನಮ್ಮ ಸಂಸ್ಥೆಯಲ್ಲೇ ಓದಿರುವ ಅವರು ಉನ್ನತ ಸಾಧನೆ ತೋರಿದ್ದಾರೆ. ಗ್ರಾಮೀಣ ಭಾಗದ ಮಕ್ಕಳಿಗೆ ಅವರು ಸ್ಫೂರ್ತಿಯಾಗಿದ್ದಾರೆ. ಅವರಿಗೆ ಅಯೋಧ್ಯೆಯಿಂದಲೇ ಆಶೀರ್ವಾದ ಮಾಡುತ್ತಿದ್ದೇನೆ. ಅವರು ದೇಶಕ್ಕೆ ಉತ್ತಮ ಕೊಡುಗೆ ನೀಡಲಿ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.