ADVERTISEMENT

ಬದುಕಿನ ಎಲ್ಲ ಮಜಲಿಗೂ ಅರಸು ಪ್ರಸ್ತುತ

ಡಿ.ದೇವರಾಜ ಅರಸು ಜನ್ಮದಿನೋತ್ಸವ, ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಡಾ.ಎಚ್.ಸಿ.ಮಹದೇವಪ್ಪ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2021, 9:27 IST
Last Updated 23 ಆಗಸ್ಟ್ 2021, 9:27 IST
ಮಂಡ್ಯ ನಗರದ ಗಾಂಧಿ ಭವನದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಪ್ರೊ.ಎನ್‌.ವಿ.ನರಸಿಂಹಯ್ಯ, ಎಚ್‌.ಎ.ವೆಂಕಟೇಶ್‌, ಆರ್‌.ಶ್ರೀನಿವಾಸ್‌, ಕಿಕ್ಕೇರಿ ಕೆ.ಎಸ್‌.ಪ್ರಭಾಕರ್‌ ಅವರಿಗೆ ಅರಸು ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಾಜಿ ಸಚಿವ ಎಚ್‌.ಸಿ.ಮಹದೇವಪ್ಪ, ವಿಧಾನ ಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಮುಖಂಡರಾದ ಎಲ್‌.ಸಂದೇಶ್, ಎಂ.ಕೃಷ್ಣ ಇದ್ದಾರೆ
ಮಂಡ್ಯ ನಗರದ ಗಾಂಧಿ ಭವನದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಪ್ರೊ.ಎನ್‌.ವಿ.ನರಸಿಂಹಯ್ಯ, ಎಚ್‌.ಎ.ವೆಂಕಟೇಶ್‌, ಆರ್‌.ಶ್ರೀನಿವಾಸ್‌, ಕಿಕ್ಕೇರಿ ಕೆ.ಎಸ್‌.ಪ್ರಭಾಕರ್‌ ಅವರಿಗೆ ಅರಸು ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಾಜಿ ಸಚಿವ ಎಚ್‌.ಸಿ.ಮಹದೇವಪ್ಪ, ವಿಧಾನ ಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಮುಖಂಡರಾದ ಎಲ್‌.ಸಂದೇಶ್, ಎಂ.ಕೃಷ್ಣ ಇದ್ದಾರೆ   

ಮಂಡ್ಯ: ‘ಎತ್ತುಗಳನ್ನು ಸಾಕುವುದು, ಹೊಲ ಉಳುಮೆ ಮಾಡುವುದು, ಮಣ್ಣಿನ ಫಲವತ್ತತೆ ನೋಡುವುದು ಸೇರಿದಂತೆ ಬದುಕಿನ ಎಲ್ಲ ಮಜಲುಗಳನ್ನೂ ಮೀರಿ ಪರಿಪಕ್ವತೆ ಕಂಡುಕೊಂಡವರು ಡಿ.ದೇವರಾಜ ಅರಸು’ ಎಂದು ಮಾಜಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಸ್ಮರಿಸಿದರು.

ನಗರದ ಗಾಂಧಿಭವನದಲ್ಲಿ ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ವೇದಿಕೆ ವತಿಯಿಂದ ಭಾನು ವಾರ ಆಯೋಜಿಸಿದ್ದ ಡಿ.ದೇವರಾಜು ಅರಸು ಜನ್ಮದಿನೋತ್ಸವ ಹಾಗೂ ಅರಸು ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಹಳ್ಳಿಯ ಬದುಕು, ಜನರ ಜೀವನದ ಬಗ್ಗೆ ಗಾಢವಾದ ಪ್ರೀತಿ ವಿಶ್ವಾಸವನ್ನು ಅರಸು ಇಟ್ಟುಕೊಂಡಿದ್ದರು. ಭಾರತದ ಚರಿತ್ರೆಯಲ್ಲಿಯೇ ಯಶಸ್ವಿ ರಾಜಕಾರಣಿ ಯಾಗಿ ಕೆಲಸ ಮಾಡಿದ ಅವರು ನೊಂ ದವರ ಪರವಾಗಿ ಕೆಲಸ ಮಾಡಿದ ಧೀಮಂತ ವ್ಯಕ್ತಿಯಾಗಿ ಹೊರಹೊಮ್ಮಿ ಸಾಮಾಜಿಕ ಪರಿವರ್ತನೆಯ ಹರಿಕಾ ರರಾಗಿದ್ದಾರೆ. ಅವರಿಗೆ ಪ್ರತಿಯೊಬ್ಬರ ನೋವಿನ ಅರಿವು ಇತ್ತು ಎಂದರು.

ADVERTISEMENT

ಪ್ರಜಾಪ್ರಭುತ್ವ ಬಲವರ್ಧನೆಗೆ ಪೂರಕವಾಗಲಿ ಎಂದು ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ಸಂವಿಧಾನ ನೀಡಿದರು. ಆದಾದ ನಂತರ ಕರ್ನಾಟಕದ ಇತಿಹಾಸದಲ್ಲಿಯೇ ಜಾತಿ, ಹಣ ಬಲ ಇಲ್ಲದೇ ರಾಜಕಾರಣ ಮಾಡಬಹುದು ಎಂದು ತೋರಿಸಿಕೊಟ್ಟ ಡಿ.ದೇವರಾಜು ಅರಸು ಅವರನ್ನು ಸದಾ ನೆನಪು ಮಾಡಿಕೊಳ್ಳಬೇಕು. ಭಾರತದ ಚರಿತ್ರೆಯಲ್ಲೂ ಅಜರಾಮರವಾಗಿ ಅರಸು ಅವರ ಆಡಳಿತ ಇದೆ ಎಂದರು.

ಅರಸು ಅವರು, ಜೀತ ಪದ್ಧತಿ ಮುಕ್ತಿ, ಋಣ ಮುಕ್ತ ಕಾಯ್ದೆ ಜಾರಿಗೆ ತಂದು ನೊಂದವರ ಆಶಾಕಿರಣವಾಗಿ ನಿಂತರು. ಜಾತಿಗೆ ಚಲನೆಯಿಲ್ಲ, ಅದಕ್ಕೆ ಚಲನೆ ಬರಬೇಕಾದರೆ ವರ್ಗ ಸಂಘರ್ಷ ಆಗಬೇಕು. ಚಲನಶೀಲ ಸಮಾಜ ಕಟ್ಟಲು 1974ರಲ್ಲಿ ಹಾವನೂರ ವರದಿ ಜಾರಿಗೆ ತಂದ ಕೀರ್ತಿ ಡಿ.ದೇವರಾಜು ಅರಸು ಅವರಿಗೆ ಸಲ್ಲುತ್ತದೆ. ಪ್ರಸ್ತುತದಲ್ಲಿ ಕವಲು ದಾರಿಯಲ್ಲಿ ರಾಜಕಾರಣ ಸಾಗುತ್ತಿದೆ. ಹಣ ಇಟ್ಟುಕೊಂಡ ವ್ಯಕ್ತಿಗಳು ರಾಜಕೀಯ ನಿಯಂತ್ರಣ ಮಾಡುತ್ತಿದ್ದಾರೆ. ಜಾತಿ, ಧರ್ಮವೇ ಮೇಲಾಗಿದೆ. ಸಂವಿಧಾನ ಅಪಾಯದಲ್ಲಿದ್ದು, ಅದನ್ನು ರಕ್ಷಣೆ ಮಾಡಬೇಕು ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಸಂವಿ ಧಾನದ ಮೂಲಕ ಸಾಮಾಜಿಕ ಬದಲಾ ವಣೆ ತರಲು ಅಂಬೇಡ್ಕರ್‌ ಅವರು ಶ್ರಮಪಟ್ಟರು. ಅದೇ ರೀತಿ ಜೀತಪದ್ಧತಿ ಕಾಯ್ದೆ, ಋಣಮುಕ್ತ ಕಾಯ್ದೆಗಳನ್ನು ಜಾರಿಗೆ ತಂದ ಅರಸು ಅವರು ರಾಜಕಾರಣದಲ್ಲಿ ಸಾಕಾರಗೊಳಿಸುವಂತೆ ಕೆಲಸ ಮಾಡುವುದು ಹೇಗೆ ಎಂದು ತೋರಿಸಿಕೊಟ್ಟರು ಎಂದರು.

ತಾತ್ವಿಕ ಹೋರಾಟ ಹಾಗೂ ಸಿದ್ಧಾಂತ ಇಟ್ಟುಕೊಂಡವರು ಇಂದು ಚುನಾವಣೆಯಲ್ಲಿ ಸ್ಪರ್ಧಿಸಲು ಭಯ ಪಡುತ್ತಿದ್ದಾರೆ. ಇದಕ್ಕೆ ಕಾರಣ ಜಾತಿ ಮತ್ತು ಹಣ ಮುಖ್ಯವಾಗಿದೆ ಎಂದು ತಿಳಿಸಿದರು.

ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಪ್ರೊ.ಎನ್‌.ವಿ.ನರಸಿಂಹಯ್ಯ, ಎಚ್‌.ಎ. ವೆಂಕಟೇಶ್‌, ಆರ್‌.ಶ್ರೀನಿವಾಸ್‌, ಕಿಕ್ಕೇರಿ ಕೆ.ಎಸ್‌.ಪ್ರಭಾಕರ್‌ ಅವರಿಗೆ ಅರಸು ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಮಾಜ ಸೇವಾ ಟ್ರಸ್ಟ್‌ ಅಧ್ಯಕ್ಷ ನಾರಾಯಣ್‌ ತಿರುಮಲಾಪುರ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಎಲ್‌.ಸಂದೇಶ್‌, ಪ್ರಧಾನ ಕಾರ್ಯದರ್ಶಿ ಎಂ.ಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.