ADVERTISEMENT

ವಿರಿಜಾ ನಾಲೆ ಅಭಿವೃದ್ಧಿಗೆ ₹60 ಕೋಟಿ ಬಿಡುಗಡೆ: ಶಾಸಕ ರಮೇಶ ಬಂಡಿಸಿದ್ದೇಗೌಡ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 3:18 IST
Last Updated 27 ಅಕ್ಟೋಬರ್ 2025, 3:18 IST
ಶ್ರೀರಂಗಪಟ್ಟಣ ತಾಲ್ಲೂಕಿನ ನಗುವನಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಶಾಸಕ ರಮೇಶ ಬಂಡಿಸಿದ್ದೇಗೌಡ ಮಾತನಾಡಿದರು
ಶ್ರೀರಂಗಪಟ್ಟಣ ತಾಲ್ಲೂಕಿನ ನಗುವನಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಶಾಸಕ ರಮೇಶ ಬಂಡಿಸಿದ್ದೇಗೌಡ ಮಾತನಾಡಿದರು   

ಶ್ರೀರಂಗಪಟ್ಟಣ: ತಾಲ್ಲೂಕಿನ ಬೆಳಗೊಳ ಮತ್ತು ಕಸಬಾ ಹೋಬಳಿ ವ್ಯಾಪ್ತಿಯ, 300 ವರ್ಷಗಳ ಹಿಂದೆ ನಿರ್ಮಾಣವಾಗಿರುವ ವಿರಿಜಾ ನಾಲೆ ಅಭಿವೃದ್ಧಿಗೆ ರಾಜ್ಯ ಸರ್ಕಾರ ₹ 60 ಕೋಟಿ ಬಿಡುಗಡೆ ಮಾಡಿದೆ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.

ತಾಲ್ಲೂಕಿನ ನಗುವನಹಳ್ಳಿ ಗ್ರಾಮದಲ್ಲಿ ₹ 17 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಗರಡಿ ಮನೆಯನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ನಾಲೆಯ ನೀರು ಸರಾಗವಾಗಿ ಹರಿಯಲು ಇದ್ದ ತೊಡಕುಗಳು ನಿವಾರಣೆಯಾಗಲಿವೆ. ರೈತರ ಜಮೀನಿಗೆ ಸಮರ್ಪಕವಾಗಿ ನೀರು ಹರಿಯುವಂತೆ ಕ್ರಮ ಕೈಗೊಳ್ಳಲಾಗುವುದು. ಗ್ರಾಮದಲ್ಲಿ ಶೀಘ್ರ ನಮ್ಮ ಕ್ಲಿನಿಕ್‌ ಆರಂಭವಾಗಲಿದೆ. ಬೆಳಗೊಳ, ಮಹದೇವಪುರ ಮತ್ತು ಸೂನಗಹಳ್ಳಿ ಗ್ರಾಮಗಳಿಗೆ ಕೆಪಿಎಸ್‌ ಶಾಲೆಗಳು ಮಂಜೂರಾಗಿದ್ದು, ನಗುವನಹಳ್ಳಿ ಮತ್ತು ಕೆಆರ್‌ಎಸ್‌ ಗ್ರಾಮಗಳಿಗೂ ಕೆಪಿಎಸ್‌ ಶಾಲೆ ಮಂಜೂರು ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದರು.

ADVERTISEMENT

‘ಬೆಂಗಳೂರು– ಮೈಸೂರು ಹೆದ್ದಾರಿಯಿಂದ ನಗುವನಹಳ್ಳಿಯವರೆಗೆ ರಸ್ತೆ ಅಭಿವೃದ್ಧಿ ಕಾರ್ಯ ಶೀಘ್ರ ಆರಂಭವಾಗಲಿದೆ. ನಗುವನಹಳ್ಳಿಯಿಂದ ಕೆಸರೆ ಮಾರ್ಗವಾಗಿ ಮೈಸೂರು ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಹಾಗೂ ಸರ್ಕಾರಿ ಪ್ರೌಢಶಾಲೆ ಕಾಂಪೌಂಡ್ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು. ಸಮೀಪದ ಬ್ರಹ್ಮಪುರ ಗ್ರಾಮದಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಿಸಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗುತ್ತದೆ. ಬೊಮ್ಮೂರಮ್ಮ ದೇವಾಲಯ ಸಂಪರ್ಕ ರಸ್ತೆ ಅಭಿವೃದ್ಧಿಗೂ ಕ್ರಮ ವಹಿಸಲಾಗುವುದು. ಸ್ಮಶಾನಕ್ಕೆ ಜಮೀನು ನೀಡಿರುವ ರೈತರಿಗೆ ಪರಿಹಾರ ಕೊಡಿಸಲಾಗುವುದು’ ಎಂದು ಭರವಸೆ ನೀಡಿದರು.

ಮೈಸೂರಿನಿಂದ ಕೆಸರೆ ಮಾರ್ಗವಾಗಿ ನಗುವನಹಳ್ಳಿ, ಚಂದಗಾಲು, ಮೇಳಾಪುರಕ್ಕೆ ರಾತ್ರಿ 9.30ಕ್ಕೆ ಬರುತ್ತಿದ್ದ ನಗರ ಸಾರಿಗೆ ಬಸ್‌ ಸಂಚಾರ ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದು, ತೊಂದರೆಯಾಗಿದೆ ಎಂದು ಮುಖಂಡ ಎನ್‌. ಶಿವಸ್ವಾಮಿ ಗಮನ ಸೆಳೆದರು.

ಅಧಿಕಾರಿಗಳಿಗೆ ಕರೆ ಮಾಡಿದ ಶಾಸಕರು ಬಸ್‌ ಸಂಚಾರ ಪುನರಾರಂಭಿಸುವಂತೆ ಸೂಚಿಸಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎನ್‌. ಪ್ರಕಾಶ್, ದೊಡ್ಡ ಯಜಮಾನ್‌ ಎನ್‌. ವಿ. ಪ್ರಕಾಶ್, ಚಿಕ್ಕ ಯಜಮಾನ್‌ ನಾರಾಯಣಪ್ಪ, ಎಂಡಿಸಿಸಿ ಬ್ಯಾಂಕ್‌ ಮಾಜಿ ನಿರ್ದೇಶಕ ಎನ್‌.ವಿ. ಚಲುವರಾಜು, ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಬಿ. ಚಲುವೇಗೌಡ, ಪೈ. ಮುಕುಂದ, ಪೈ. ನರಸಿಂಹ, ವಕೀಲ ಸಿ.ಎಸ್‌. ವೆಂಕಟೇಶ್, ರಾಮಣ್ಣ, ಕಾಳಪ್ಪ, ಬಾಲು, ಗ್ರಾಮ ಪಂಚಾಯಿತಿ ಅಧ್ಯಕ್ಷ ಜವರಪ್ಪ, ಮಾಜಿ ಅಧ್ಯಕ್ಷ ನಂದಕುಮಾರ್, ಪಿಡಿಒ ಆರ್‌. ಶಿಲ್ಪಾ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.