ADVERTISEMENT

ವಿವೇಕ್‌ಮೂರ್ತಿ ಪೂರ್ವಜರ ಮನೆಗೆ ಮ್ಯೂಸಿಯಂ ರೂಪ

ಸ್ಕೋಪ್‌ ಫೌಂಡೇಷನ್‌ನಿಂದ ರೂಪಗೊಂಡ ಯೋಜನೆ, ಶಿಲ್ಪಿಗಳಿಂದ ಪರಿಶೀಲನೆ, ನೀಲನಕ್ಷೆ ಸಿದ್ಧ

ಎಂ.ಎನ್.ಯೋಗೇಶ್‌
Published 4 ನವೆಂಬರ್ 2021, 19:30 IST
Last Updated 4 ನವೆಂಬರ್ 2021, 19:30 IST
ವಸ್ತು ಸಂಗ್ರಹಾಲಯ ರೂಪ ನೀಡಲು ಸಿದ್ಧಗೊಂಡಿರುವ ಡಾ.ವಿವೇಕ್‌ ಮೂರ್ತಿ ಅವರ ಹಲ್ಲೇಗೆರೆ ಮನೆಯ ನೀಲನಕ್ಷೆ
ವಸ್ತು ಸಂಗ್ರಹಾಲಯ ರೂಪ ನೀಡಲು ಸಿದ್ಧಗೊಂಡಿರುವ ಡಾ.ವಿವೇಕ್‌ ಮೂರ್ತಿ ಅವರ ಹಲ್ಲೇಗೆರೆ ಮನೆಯ ನೀಲನಕ್ಷೆ   

ಮಂಡ್ಯ: ಅಮೆರಿಕದ ಸರ್ಜನ್‌ ಜನರಲ್‌ ಡಾ.ವಿವೇಕ್‌ ಮೂರ್ತಿ ಅವರ ಪೂರ್ವಜರು ಬಾಳಿ ಬದುಕಿದ ತಾಲ್ಲೂಕಿನ ಹಲ್ಲೇಗೆರೆ ಗ್ರಾಮದಲ್ಲಿರುವ 150 ವರ್ಷಗಳ ಹಳೆ ಮನೆಗೆ ವಸ್ತು ಸಂಗ್ರಹಾಲಯ (ಮ್ಯೂಸಿಯಂ) ರೂಪ ನೀಡಲು ಸ್ಕೋಪ್‌ (ಸೊಸೈಟಿ ಆಫ್‌ ಚಿಲ್ಡ್ರನ್‌ ಆಫ್‌ ಪ್ಲಾನೆಟ್‌ ಅರ್ಥ್‌) ಫೌಂಡೇಷನ್‌ ಯೋಜನೆ ರೂಪಿಸಿದೆ.

ಡಾ.ವಿವೇಕ್‌ ಮೂರ್ತಿ ಅವರ ತಂದೆ ಡಾ.ಎಚ್‌.ಎನ್‌.ಲಕ್ಷ್ಮಿನರಸಿಂಹ ಮೂರ್ತಿ ಅವರು ಸ್ಕೋಪ್‌ ಫೌಂಡೇಷನ್‌ ಅಧ್ಯಕ್ಷರಾಗಿದ್ದು ರಾಜ್ಯದಲ್ಲಿ ಹಲವು ಸಾಮಾಜಿಕ ಕಾರ್ಯ ನಡೆಸುತ್ತಿದ್ದಾರೆ. ಕೋವಿಡ್‌ ಸಂದರ್ಭದಲ್ಲಿ ಮಂಡ್ಯ, ಕೊಡಗು ಜಿಲ್ಲಾಸ್ಪತ್ರೆಗಳಿಗೆ ₹ 5 ಕೋಟಿ ಮೌಲ್ಯದ ವೈದ್ಯಕೀಯ ಪರಿಕರಗಳನ್ನು ಕೊಡುಗೆಯಾಗಿ ನಿಡಿದ್ದಾರೆ. ಜೊತೆಗೆ ಜಿಲ್ಲೆಯ ಹಲವು ಸರ್ಕಾರಿ ಶಾಲೆಗಳಿಗೆ ಸಹಾಯ ಮಾಡುತ್ತಾ ಬಂದಿದ್ದಾರೆ.

ಈಗ ಲಕ್ಷ್ಮಿನರಸಿಂಹ ಮೂರ್ತಿ ಅವರು ತಾವು ಹುಟ್ಟಿ ಬೆಳೆದ ಮನೆಗೆ ರೂಪ ನೀಡುವ ನಿರ್ಧಾರ ಕೈಗೊಂಡಿದ್ದಾರೆ. ಅದಕ್ಕೆ ಡಾ.ವಿವೇಕ್‌ ಮೂರ್ತಿ ಅವರೂ ಕೈಜೋಡಿಸಿರುವ ಕಾರಣ ವಸ್ತುಸಂಗ್ರಹಾಲಯದ ಸಿದ್ಧತೆಗಳು ಆರಂಭಗೊಂಡಿವೆ. 2 ಗುಂಟೆ ವಿಸ್ತೀರ್ಣದಲ್ಲಿರುವ ಹೆಂಚಿನ ಮನೆಯ ಮೂಲ ಸ್ವರೂಪಕ್ಕೆ ಧಕ್ಕೆಯಾಗದ ರೀತಿಯಲ್ಲಿ ಕಟ್ಟಡವನ್ನು ಅಭಿವೃದ್ಧಿಗೊಳಿಸುವ ನಿರ್ಧಾರ ಮಾಡಲಾಗಿದೆ.

ADVERTISEMENT

ಸದ್ಯ ಈ ಮನೆಯಲ್ಲಿ ಲಕ್ಷ್ಮಿ ನರಸಿಂಹಮೂರ್ತಿ ಅವರ ಸೋದರ ಸಂಬಂಧಿಗಳು ವಾಸ ಮಾಡುತ್ತಿದ್ದಾರೆ. ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಕಟ್ಟಡವನ್ನು ಮ್ಯೂಸಿಯಂ ಮಾದರಿಯಲ್ಲಿ ಅಭಿವೃದ್ಧಿಗೊಳಿಸುವ ಬಗ್ಗೆ ಚಿಂತನೆ ನಡೆದಿದೆ. ದಾವಣೆಗೆರೆಯ ಖ್ಯಾತ ಶಿಲ್ಪಿ ಸೋಮೇಶ್‌ ಅವರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮನೆಗೆ ಮ್ಯೂಸಿಯಂ ರೂಪ ನೀಡುವ ನೀಲನಕ್ಷೆ ಸಿದ್ಧಗೊಂಡಿದ್ದು ಪೂರ್ವ ತಯಾರಿಗಳು ಆರಂಭವಾಗಿವೆ. ಕಟ್ಟಡ ನಿರ್ಮಾಣಕ್ಕೆ ತಗುಲುವ ₹24.41 ಲಕ್ಷದ ಅಂದಾಜು ಪಟ್ಟಿಯನ್ನು ಸ್ಕೋಪ್‌ ಫೌಂಡೇಷನ್‌ಗೆ ಸಲ್ಲಿಸಲಾಗಿದೆ.

ಡಾ.ಲಕ್ಷ್ಮಿನರಸಿಂಹ ಮೂರ್ತಿ ಅವರು ತಮ್ಮ ತಾತ ತಮ್ಮಯ್ಯ ಶೆಟ್ಟಿ, ಅಜ್ಜಿ ಚಿಕ್ಕತಾಯಮ್ಮ ಅವರ ಹೆಸರಿನಲ್ಲಿ ವಸ್ತು ಸಂಗ್ರಹಾಲಯ ನಿರ್ಮಿಸುವ ಚಿಂತನೆ ನಡೆಸಿದ್ದಾರೆ. ತಮ್ಮಯ್ಯ ಶೆಟ್ಟಿ ಅವರ ಧರ್ಮಕಾರ್ಯಗಳ ಬಗ್ಗೆ ಮಂಡ್ಯ ಜಿಲ್ಲೆಯಲ್ಲಿ ಸಾಕಷ್ಟು ಹೆಸರಿದೆ. ಜಮೀನ್ದಾರರಾಗಿದ್ದ ಅವರು ಬಡವರಿಗೆ ಸಹಾಯ ಮಾಡುತ್ತಿದ್ದರು, ಶಿಕ್ಷಣಕ್ಕೆ ಪ್ರಮುಖ ಆದ್ಯತೆ ಕೊಡುತ್ತಿದ್ದರು ಎಂದು ಸಾರ್ವಜನಿಕರು ಹೇಳುತ್ತಾರೆ.

ತಾತ ತಮ್ಮಯ್ಯಶೆಟ್ಟಿ, ತಂದೆ ಎಚ್‌.ಟಿ.ನಾರಾಯಣಶೆಟ್ಟಿ ಮಾರ್ಗದರ್ಶನದಲ್ಲಿ ಓದಿ ಲಕ್ಷ್ಮಿ ನರಸಿಂಹಮೂರ್ತಿ ಅವರು ವೈದ್ಯರಾಗಿದ್ದಾರೆ. ಅಮೆರಿಕಕ್ಕೆ ತೆರಳಿ ಆಸ್ಪತ್ರೆ ನಿರ್ಮಾಣ ಮಾಡಿ ದೊಡ್ಡ ಹೆಸರು ಮಾಡಿದ್ದಾರೆ. ಮಗ ಡಾ.ವಿವೇಕ್‌ ಮೂರ್ತಿ ಅಮೆರಿಕದ ಪ್ರಭಾವಿ ವೈದ್ಯರಾಗಿದ್ದು ಅಲ್ಲಿಯ ಸರ್ಕಾರದ ಪ್ರತಿಷ್ಠಿತ ಸರ್ಜನ್‌ ಜನರಲ್‌ ಹುದ್ದೆಗೇರಿದ್ದಾರೆ. ಅವರು ಬೆಳೆದು ಬಂದ ಹಾದಿಯೆಡೆಗೆ ತಿರುಗಿ ನೋಡಿದಾಗ ಹಾದಿ ಹಲ್ಲೇಗೆರೆ ಕಡೆಗೆ ಸಾಗುತ್ತದೆ. ಇದನ್ನೆಲ್ಲಾ ಗಮನದಲ್ಲಿ ಇಟ್ಟುಕೊಂಡು ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ಮುಂದಾಗಿದ್ದಾರೆ.

‘ವಸ್ತು ಸಂಗ್ರಹಾಲಯದಲ್ಲಿ ಗ್ರಾಮೀಣ ಜನರ ಬದುಕು ಬಿಂಬಿಸುವ ಕಲಾಕೃತಿಗಳನ್ನು ರೂಪಿಸುವ ಚಿಂತನೆ ನಡೆಸಲಾಗಿದೆ. ರಾಗಿ ಬೀಸುವ, ಭತ್ತ ಕುಟ್ಟುವ, ಹಸು– ಹೆಮ್ಮೆಗಳಲ್ಲಿ ಹಾಲು ಕರೆಯುವ, ಬಾವಿಯಿಂದ ನೀರು ಸೇದುವ, ಗ್ರಾಮೀಣ ಶಾಲೆಗಳ ಚಿತ್ರಣದ ಕಲಾಕೃತಿ ರೂಪಿಸಲಾಗುವುದು’ ಎಂದು ಸ್ಕೋಪ್‌ ಫೌಂಡೇಷನ್‌ ಸದಸ್ಯ ಎಚ್‌.ಕೆ.ವಸಂತಕುಮಾರ್‌ ತಿಳಿಸಿದರು.

********

ಪ್ರತಿ ಮನೆಯೂ ಸ್ಮಾರಕ

ಸ್ಮಾಕರಗಳು ಇತಿಹಾಸವನ್ನು ಜೀವಂತವಾಗಿ ಇರಿಸುತ್ತವೆ. ಹಳೆಯ ಮನೆಗಳಲ್ಲಿ ಆಯಾ ಕುಟುಂಬಗಳಲ್ಲಿ ವಾಸಿಸುವ ಕುಟುಂಬ ಸದಸ್ಯರ ಇತಿಹಾಸ ಇರುತ್ತದೆ. ಕುಟುಂಬದ ಇತಿಹಾಸವನ್ನು ಕಾಪಾಡುವುದು ನಮ್ಮ ಜವಾಬ್ದಾರಿಯಾಗಬೇಕು. ಆ ಉದ್ದೇಶದಿಂದ ನಮ್ಮ ಮನೆಗೆ ವಸ್ತುಸಂಗ್ರಹಾಲಯ ರೂಪ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ. ನಮ್ಮ ಸೋದರ ಸಂಬಂದಿಗಳ ಮನವೊಲಿಸಿ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಮ್ಯೂಸಿಯಂ ಕೆಲಸ ಆರಂಭಿಸಲಾಗುವುದು’ ಎಂದು ಡಾ.ಎಚ್‌.ಎನ್‌.ಲಕ್ಷ್ಮಿನರಸಿಂಹಮೂರ್ತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.