ಪಾಂಡವಪುರ: ತುಂಬಿದ ಶೌಚಗುಂಡಿಗಳನ್ನು ಯಾಂತ್ರಿಕ ವಿಧಾನದ ಮೂಲಕ ತೆರವುಗೊಳಿಸಿ ಎಲ್ಲೆಂದರಲ್ಲಿ ವಿಲೇವಾರಿ ಮಾಡಲಾಗುತ್ತಿರುವುದು ಅಪಾಯಕಾರಿಯಾದ ಕ್ರಮವಾಗಿದೆ ಎಂದು ಜಿ.ಪಂ.ಸಿಇಒ ಕೆ.ಆರ್.ನಂದಿನಿ ಹೇಳಿದರು.
ತಾಲ್ಲೂಕಿನ ಕೆ.ಬೆಟ್ಟಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಜಗಶೆಟ್ಟಹಳ್ಳಿ ಗ್ರಾಮದಲ್ಲಿ ನಿರ್ಮಾಣವಾಗಿರುವ ಮಲ ತ್ಯಾಜ್ಯ ನಿರ್ವಹಣಾ ಘಟಕ ಕಾಮಗಾರಿಯನ್ನು ಪರಿಶೀಲಿಸಿ ಅವರು ಮಾತನಾಡಿದರು. ‘ಮಲ ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಬೇಕು. ತ್ಯಾಜ್ಯ ನಿರ್ವಹಣಾ ಘಟಕವನ್ನು ಶೀಘ್ರ ಹಸ್ತಾಂತರ ಪಡೆದು ಇದರ ಸದುಪಯೋಗಪಡಿಸಿಕೊಳ್ಳಬೇಕು’ ಎಂದರು.
ಕಾಮಗಾರಿಯ ಬಗ್ಗೆ ಪಿಡಿಒ ಮತ್ತು ಕೆಆರ್‌ಐಡಿಎಲ್ ಅಧಿಕಾರಿಗಳಿಂದ ಮಾಹಿತಿ ಪಡೆದ ಜಿ.ಪಂ.ಸಿಇಒ ನಂದಿನಿ ಅವರು ನಿರ್ವಹಣೆಯನ್ನು ಸರಿಯಾಗಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಾಂಡವಪುರ ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿರುವ ಸಕ್ಕಿಂಗ್ ಯಂತ್ರವನ್ನು ಗ್ರಾ.ಪಂ.ಮಟ್ಟದ ಒಕ್ಕೂಟಕ್ಕೆ ಹಸ್ತಾಂತರ ಮಾಡಿ ಉದ್ಯಮದ ಮಾದರಿಯಲ್ಲಿ ನಿರ್ವಹಣೆ ಮಾಡಲು ಕ್ರಮವಹಿಸುವಂತೆ ತಾ.ಪಂ.ಇಒ ವೀಣಾ ಅವರಿಗೆ ಸೂಚನೆ ನೀಡಿದರು.
ಮಲ ತ್ಯಾಜ್ಯ ನಿರ್ವಹಣಾ ಘಟಕಗಳನ್ನು ಕೆಆರ್‌ಐಡಿಎಲ್ ನಿರ್ವಹಿಸುತ್ತಿದ್ದು, ಎರಡು ಘಟಕಗಳನ್ನು ಈಗಾಗಲೇ ಪೂರ್ಣಗೊಳಿಸಿದೆ. ಉಳಿದ ಘಟಕಗಳ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರ ಪೂರ್ಣಗೊಳಿಸುವುದಾಗಿ ಕೆಆರ್‌ಐಡಿಎಲ್ ಇಇ ಸೋಮಶೇಖರ್ ಅವರು ಜಿ.ಪಂ.ಸಿಇಒ ನಂದಿನಿ ಅವರಿಗೆ ಮಾಹಿತಿ ನೀಡಿದರು.
ಜಿ.ಪಂ.ಉಪ ಕಾರ್ಯದರ್ಶಿ ಲಕ್ಷ್ಮೀ, ತಾ.ಪಂ.ಇಒ ವೀಣಾ, ಕೆ.ಆರ್.ಪೇಟೆ ತಾ.ಪಂ.ಇಒ ಸುಷ್ಮಾ ಇತರರು ಇದ್ದರು.
ಮಲ ತ್ಯಾಜ್ಯ ನಿರ್ವಹಣಾ ಘಟಕ ಕಾಮಗಾರಿ ಪರಿಶೀಲನೆ ಕಾಮಗಾರಿಯ ಸಮರ್ಪಕ ನಿರ್ವಹಣೆಗೆ ಸಿಇಒ ಸೂಚನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.