ಭಾರತೀನಗರ: ಇಲ್ಲಿನ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಆರಂಭಕ್ಕೆ ನೀರಿನ ವಿಘ್ನ ಎದುರಾಗಿದೆ. ಜೊತೆಗೆ ಸಕ್ಕರೆ ಇಲಾಖೆ ಆಯುಕ್ತ ಜುಲೈ 31ರವರೆಗೆ ಯಾವುದೇ ಕಾರ್ಖಾನೆಗಳನ್ನು ಆರಂಭಿಸದಂತೆ ಆದೇಶ ಹೊರಡಿಸಿ ಮುಂದೂಡಿರುವುದರಿಂದ ಕಬ್ಬು ಕಟಾವಿಗೆ ಕಾಯುತ್ತಿದ್ದ ರೈತರಿಗೆ ಆರಂಭದ ಆಘಾತ ಎದುರಾಗಿದೆ.
ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಸಮೀಪದ ಮೆಳ್ಳಹಳ್ಳಿ ಬಳಿಯ ಹೆಬ್ಬಾಳದಲ್ಲಿ ದೊರೆಯುವ ನೀರನ್ನು ಬಳಸಿಕೊಂಡು ಕಬ್ಬು ನುರಿಸುವ ಕಾರ್ಯ ಆರಂಭಿಸುತ್ತಿತ್ತು. ಆದರೆ ಕಳೆದ ಆರೇಳು ತಿಂಗಳಿಂದ ಆವರಿಸಿದ ಬರಗಾಲದಿಂದಾಗಿ ನೀರಿನ ಲಭ್ಯತೆ 2024-25ನೇ ಸಾಲಿನಲ್ಲಿ ಕಬ್ಬು ನುರಿಯುವಿಕೆ ಆರಂಭಿಸಲು ವಿಘ್ನ ತಂದೊಡ್ಡಿತು. ಇದರಿಂದಾಗಿ ಕಾರ್ಖಾನೆ ಆರಂಭ ತಡವಾಗಿದೆ.
‘ರಾಜ್ಯ, ಜಿಲ್ಲೆಯ ಎಲ್ಲಾ ಕಾರ್ಖಾನೆಗಳ ವ್ಯಾಪ್ತಿಯಲ್ಲಿಯೂ ಕೂಡ ವರ್ಷ ತುಂಬಿರುವ ಕಬ್ಬಿನ ತಾಕುಗಳಿವೆ. ಹಾಗೆಯೇ ಈ ಕಾರ್ಖಾನೆಯ ಕಬ್ಬು ಬೆಳೆಯುವ ಪ್ರದೇಶದಲ್ಲಿ 13 ತಿಂಗಳು ತುಂಬಿದ ಕಬ್ಬಿನ ಫಸಲು ಕಡಿಮೆ ಪ್ರಮಾಣದಲ್ಲಿದೆ. ಕಾರ್ಖಾನೆಯು ಪ್ರತೀ ಬಾರಿಯೂ ಸಮಯಕ್ಕೆ ಸರಿಯಾಗಿ ಕಬ್ಬು ಕಟಾವಿಗೆ ಅನುಮತಿ ನೀಡುತ್ತಾ ಬಂದಿದ್ದು, ಈ ಬಾರಿ ನೀರಿನ ಅಲಭ್ಯತೆಯಿಂದಾಗಿ ಸ್ವಲ್ಪ ತಡವಾಗಿದೆ’ ಎಂದು ಕಾರ್ಖಾನೆಯ ಮುಖ್ಯಸ್ಥ ಕಾರ್ಯನಿರ್ವಾಹಕ ಉಪಾಧ್ಯಕ್ಷ ಆರ್.ಮಣಿ ತಿಳಿಸಿದ್ದಾರೆ.
‘ಕಬ್ಬಿನ ಬೆಳೆಗೆ ವೈಜ್ಞಾನಿಕ ಬೆಲೆಯನ್ನು ಕಾರ್ಖಾನೆಗಳು ನಿರ್ಧರಿಸುವುದಿಲ್ಲ. ಸರ್ಕಾರವೇ ಪ್ರತೀ ಟನ್ ಕಬ್ಬಿಗೆ ₹3,151 ನಿಗದಿಪಡಿಸಿದೆ. ಸರ್ಕಾರದ ಆದೇಶದನ್ವಯ ನಮ್ಮ ಕಾರ್ಖಾನೆಯೂ ಕೂಡ ಪ್ರತೀ ಟನ್ ಕಬ್ಬಿಗೆ ₹3,151 ರೈತರಿಗೆ ನೀಡಲು ಸಿದ್ಧವಿದೆ. ಹಿಂದಿನ ಸಾಲಿನಲ್ಲಿ ಕಬ್ಬು ಸರಬರಾಜು ಮಾಡಿದ ಎಲ್ಲಾ ರೈತರಿಗೂ ಈಗಾಗಲೇ ಕಬ್ಬಿನ ಹಣ ಬಟವಾಡೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.
ಈ ಸಾಲಿನಲ್ಲಿ ಕಾರ್ಖಾನೆ ವ್ಯಾಪ್ತಿಯಲ್ಲಿ 4ಲಕ್ಷದಿಂದ 5 ಲಕ್ಷ ಟನ್ ಕಟಾವಿಗೆ ಬಂದ ಕಬ್ಬಿನ ಫಸಲಿದೆ. ಕಾರ್ಖಾನೆ ಬಾಯ್ಲರ್‌ಗೆ ಈಗಾಗಲೇ ಅಗ್ನಿ ಸ್ಪರ್ಶ ಮಾಡಲಾಗಿದ್ದು, ಆಗಸ್ಟ್ ತಿಂಗಳಿನ ಮೊದಲ ವಾರದಿಂದ ಕಾರ್ಖಾನೆ ಕಬ್ಬು ಅರೆಯುವ ಕಾರ್ಯ ಆರಂಭಿಸಲಿದೆ.
ಈ ಹಿಂದೆ ಕಾರ್ಖಾನೆಯಲ್ಲಿದ್ದ ಕಬ್ಬು ಅರೆಯುವ ಯಂತ್ರದ ಸಾಮರ್ಥ್ಯ 3,500 ಟನ್‌ನಿಂದ 4,000 ಟನ್ ಇದ್ದು, ಕಾರ್ಖಾನೆಯಲ್ಲಿ ಕಳೆದ ಬಾರಿಯಿಂದ ಪ್ರತೀ ದಿನ 5,500ರಿಂದ 6,000 ಟನ್ ಅರೆಯುವ ಸಾಮರ್ಥ್ಯದ ಯಂತ್ರಗಳ ಅಳವಡಿಕೆ ಮಾಡಲಾಗಿದ್ದು, ಕಾರ್ಖಾನೆಯ ಒಟ್ಟಾರೆ ಸಾಮರ್ಥ್ಯವೂ ಹೆಚ್ಚಾಗಿದೆ. ಹಾಲಿ ಕಟಾವಿಗೆ ಬಂದಿರುವ ಕಬ್ಬನ್ನು ನಾಲ್ಕು ತಿಂಗಳಲ್ಲಿ ಅರೆದು ಮುಗಿಸಲಾಗುತ್ತದೆ.
‘ಕೆಆರ್‌ಎಸ್‌ನಿಂದ ನೀರು ಹರಿಸಲಾಗಿದೆ, ವಿಸಿ ನಾಲೆ ಮತ್ತು ಹೆಬ್ಬಾಳ ಚನ್ನಯ್ಯ ನಾಲೆ ತುಂಬಿ ಹರಿದರೆ ಅದರ ಸೋರು ನೀರು ಮೆಲ್ಲಹಳ್ಳಿ ಹಳ್ಳಕ್ಕೆ ಬರುತ್ತದೆ. ಹಳ್ಳದಲ್ಲಿ ನೀರು ಕಾರ್ಖಾನೆಗೆ ನೀರು ಸರಬರಾಜು ಮಾಡಲು ಅನುಕೂಲವಾಗುತ್ತದೆ’ ಎಂದು ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಮುಖ್ಯಸ್ಥ ನಿತೀಶ್‌ಕುಮಾರ್ ಹೇಳುತ್ತಾರೆ.
‘ಕಬ್ಬಿಗೆ 13 ತಿಂಗಳು ತುಂಬುತ್ತಿದೆ ಇದು ಮುಂದುವರಿದರೆ ಇಳುವರಿ ಕುಂಠಿತವಾಗಲಿದೆ ಆದ್ದರಿಂದ ಕಾರ್ಖಾನೆ ಅರಂಭಿಸಿ ಕಬ್ಬು ಕಟಾವಿಗೆ ಅನುಮತಿ ನೀಡಿಬೇಕು– ಕರಡಕೆರೆ ನಾಗರಾಜು ರೈತ
‘ಬೆಂಬಲ ಬೆಲೆ ನೀಡಲು ಬದ್ಧ’ ಕಾರ್ಖಾನೆಯು ವೈಜ್ಞಾನಿಕ ಬೆಲೆಯನ್ನು ನಿಗದಿ ಮಾಡುವುದಿಲ್ಲ. ಸರ್ಕಾರ ನಿಗದಿಪಡಿಸಿದ ಬೆಂಬಲ ಬೆಲೆಯನ್ನು ನೀಡಲು ಬದ್ಧವಾಗಿದೆ. ನೀರಿನ ಅಭಾವದಿಂದ ಕಾರ್ಖಾನೆ ಆರಂಭವಾಗುವುದು ತಡವಾಗಿದೆ ಅಷ್ಟೇ. ಇದನ್ನು ಬಿಟ್ಟರೆ ಬೇರೆ ಯಾವುದೇ ಕಾರಣಗಳಿಲ್ಲ ಎಂದು ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಆರ್.ಮಣಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.